‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸೇರಿಕೊಂಡ ನಟಿ ರಾಗಿಣಿ; ಚಿತ್ರೀಕರಣ ಶುರು

ರಾಗಿಣಿ ದ್ವಿವೇದಿ ಅವರಿಗೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಒಂದು ಡಿಫರೆಂಟ್ ಸಿನಿಮಾ ಆಗಲಿದೆ. ಹಳ್ಳಿ ಸೊಗಡಿನ ಕಥೆ ಈ ಸಿನಿಮಾದಲ್ಲಿ ಇರಲಿದೆ ಎಂದು ಚಿತ್ರತಂಡ ಹೇಳಿದೆ. ಅಂಬರೀಶ್‌ ಅವರ ಹುಟ್ಟೂರಾದ ದೊಡ್ಡ ಅರಸಿನಕೆರೆ ಸುತ್ತಮುತ್ತ ಶೂಟಿಂಗ್ ನಡೆಯಲಿದೆ. ಸಾತ್ವಿಕ್‌ ಪವನ್‌ ಕುಮಾರ್‌ ಅವರು ನಿರ್ದೇಶನ ಮಾಡುತ್ತಿದ್ದಾರೆ.

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸೇರಿಕೊಂಡ ನಟಿ ರಾಗಿಣಿ; ಚಿತ್ರೀಕರಣ ಶುರು
Sarkari Nyaya Bele Angadi Movie Team

Updated on: May 06, 2025 | 6:39 PM

ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾ ಒಪ್ಪಿಕೊಂಡಿರುವ ಬಗ್ಗೆ ಕೆಲವೇ ದಿನಗಳ ಹಿಂದೆ ಸುದ್ದಿ ಕೇಳಿಬಂದಿತ್ತು. ಈಗ ಅವರು ಆ ಸಿನಿಮಾದ ಶೂಟಿಂಗ್ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಹಾಡುಗಳ ರೆಕಾರ್ಡಿಂಗ್ ಕೆಲಸವನ್ನು ಪೂರ್ಣಗೊಳಿಸಿದೆ. ಅದರ ಬೆನ್ನಲ್ಲೇ ಶೂಟಿಂಗ್​ಗೆ ಚಾಲನೆ ನೀಡಲಾಗಿದೆ. ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಅವರು ಹಳ್ಳಿ ಮಹಿಳೆಯ ಗೆಟಪ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈವರೆಗೂ ಹೆಚ್ಚಾಗಿ ಗ್ಲಾಮರಸ್ ಪಾತ್ರಗಳನ್ನು ಮಾಡಿದ್ದ ರಾಗಿಣಿ ಅವರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ (Sarkari Nyaya Bele Angadi) ಸಿನಿಮಾದಲ್ಲಿ ಡಿಫರೆಂಟ್ ಪಾತ್ರ ಮಾಡುತ್ತಿದ್ದಾರೆ.

ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀಗಂಗಾಧರೇಶ್ವರ ದೇವಸ್ಥಾನದಲ್ಲಿ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾಗೆ ಮುಹೂರ್ತ ನೆರವೇರಿಸಲಾಯಿತು. ಹಿರಿಯ ನಟ ಶ್ರೀನಾಥ್‌ ಅವರು ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ಸಚಿವ ಕೆ.ಹೆಚ್‌. ಮುನಿಯಪ್ಪ, ಶಾಸಕ ಎಲ್‌. ಶಿವರಾಮೇ ಗೌಡ, ಪಡಿತರ ವಿತರಕರ ಒಕ್ಕೂಟದ ಅಧ್ಯಕ್ಷ ಟಿ. ಕೃಷ್ಣಪ್ಪ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಜೊತೆ ಕುಮಾರ್‌ ಬಂಗಾರಪ್ಪ, ದೊಡ್ಡಣ್ಣ ಮುಂತಾದವರು ನಟಿಸುತ್ತಿದ್ದಾರೆ. ‘ಜಯಶಂಕರ ಟಾಕೀಸ್‌’ ಬ್ಯಾನರ್ ಮೂಲಕ ತೇಜು ಮೂರ್ತಿ ಹಾಗೂ ಎಸ್‌. ಪದ್ಮಾವತಿ ಚಂದ್ರಶೇಖರ್‌ ಅವರು ಒಟ್ಟಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ‘ಈ ಸಿನಿಮಾದಲ್ಲಿ ಮನರಂಜನೆಯ ಜೊತೆಗೆ ಮಾಹಿತಿ, ಸಂದೇಶ ಕೂಡ ಇದೆ. ಇಂಥ ಅಪರೂಪದ ಕಥೆಯನ್ನು ಸಿನಿಮಾ ಮಾಡಲು ಮುಂದಾಗಿದ್ದೇವೆ. ನೋಡುಗರಿಗೂ ಈ ಸಿನಿಮಾ ಇಷ್ಟ ಆಗುತ್ತದೆ ಎಂಬ ನಿರೀಕ್ಷೆ ನಮಗೆ ಇದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
ಅಭಿಮಾನಿಯ ಅತಿರೇಕ: ಮುಟ್ಟಲು ಬಂದವನಿಗೆ ಏಟು ಕೊಟ್ಟ ರಾಗಿಣಿ ದ್ವಿವೇದಿ
ಮೋಹನ್​ಲಾಲ್​ ಜೊತೆ ಊಟ ಸವಿದ ರಾಗಿಣಿ ದ್ವಿವೇದಿ; ಕಾದಿದೆ ಸರ್ಪ್ರೈಸ್
ಡ್ರಗ್ಸ್​ ಕೇಸ್​ನಲ್ಲಿ ರಾಗಿಣಿ ನಿರಪರಾಧಿ; ನಟಿಯ ವಿರುದ್ಧದ ಕೇಸ್ ಖುಲಾಸೆ
Ragini Dwivedi: ರಾಗಿಣಿ ದ್ವಿವೇದಿ ಯೋಗ ಫೋಟೋಸ್; ನಟಿಯ ಯೋಗಾಭ್ಯಾಸ ನೋಡಿ ವಾವ್ ಎಂದ ಫ್ಯಾನ್ಸ್

ಬಿ. ರಾಮಮೂರ್ತಿ ಅವರು ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ‘ತಾಯವ್ವ’ ಸಿನಿಮಾ ಖ್ಯಾತಿಯ ಸಾತ್ವಿಕ್‌ ಪವನ್‌ ಕುಮಾರ್‌ ಅವರು ನಿರ್ದೇಶನ ಮತ್ತು ಛಾಯಾಗ್ರಹಣ ಮಾಡುತ್ತಿದ್ದಾರೆ. ಅನಂತ ಆರ್ಯನ್‌ ಅವರು ಸಂಗೀತ ನೀಡುತ್ತಿದ್ದಾರೆ. ‘ಈ ಸಿನಿಮಾದಲ್ಲಿ ಜನಸಾಮಾನ್ಯರ ಹೋರಾಟದ ಕಥೆ ಇದೆ. ಇದು ಕನ್ನಡ ಚಿತ್ರರಂಗದಲ್ಲಿ ಒಂದು ವಿಭಿನ್ನ ಸಿನಿಮಾ ಆಗಲಿದೆ’ ಎಂದು ಕುಮಾರ್‌ ಬಂಗಾರಪ್ಪ ಹೇಳಿದ್ದಾರೆ.

ಇದನ್ನೂ ಓದಿ: ಸಿಂಧೂರಿ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ; ಮೂಡಿದೆ ಕೌತುಕ

‘ಹಳ್ಳಿಯ ಹೆಣ್ಣು ಮಗಳೊಬ್ಬಳು ತನ್ನ ಊರಿನಲ್ಲಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿನ ಅನ್ಯಾಯವನ್ನು ಹೇಗೆ ಎದುರಿಸುತ್ತಾಳೆ ಮತ್ತು ಜನರಿಗೆ ಹೇಗೆ ನ್ಯಾಯ ಕೊಡಿಸುತ್ತಾಳೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ನಾನು ಈ ಸಿನಿಮಾದಲ್ಲಿ ಪಾರ್ವತಿ ಎಂಬ ಪಾತ್ರ ಮಾಡುತ್ತಿದ್ದೇನೆ. ಈ ರೀತಿಯ ಪಾತ್ರ ಮಾಡಲು ನಾನು ಎಗ್ಸೈಟ್ ಆಗಿದ್ದೇನೆ’ ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.