ಆ ಒಂದು ಘಟನೆಯಿಂದ ಅಂಬಿಗೆ ಅಣ್ಣಾವ್ರ ಮೇಲಿನ ಗೌರವ ಹೆಚ್ಚಿತ್ತು
ರಾಜ್ಕುಮಾರ್ ಮತ್ತು ಅಂಬರೀಷ್ ಅವರ ಮಧ್ಯೆ ನಿಕಟ ಸ್ನೇಹ ಇತ್ತು. ರಾಜ್ಕುಮಾರ್ ಅವರು ಕಲಾವಿದರ ಮೇಲಿನ ಗೌರವವನ್ನು ನೆನಪಿಸಿಕೊಂಡಿದ್ದರು. "ಒಡ ಹುಟ್ಟಿದವರು" ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು ಎಂಬುದು ವಿಶೇಷ.ರಾಜ್ಕುಮಾರ್ ನಿಧನ ಹೊಂದಿದ ಬಳಿಕ ಅಂಬರೀಷ್ ಅವರು ಸಾಕಷ್ಟು ಬೇಸರ ಮಾಡಿಕೊಂಡಿದ್ದರು.

ರಾಜ್ಕುಮಾರ್ (Rajkumar) ಹಾಗೂ ಅಂಬರೀಷ್ ಮಧ್ಯೆ ಒಳ್ಳೆಯ ಒಡನಾಟ ಇದ್ದೇ ಇತ್ತು. ಇದು ಅನೇಕರಿಗೆ ತಿಳಿದಿದೆ. ಇವರು ಒಟ್ಟಾಗಿ ಸಿನಿಮಾ ಕೂಡ ಮಾಡಿದ್ದರು. ರಾಜ್ಕುಮಾರ್ ಬಗ್ಗೆ ಅಂಬರೀಷ್ ಅವರು ಅನೇಕ ಬಾರಿ ಹೇಳಿಕೊಂಡಿದ್ದು ಇದೆ. ಈಗ ಅವರು ಹೇಳಿದ ಹಳೆಯ ಘಟನೆ ಒಂದನ್ನು ನೆನಪಿಸಿಕೊಳ್ಳೋಣ. ಅಂಬರೀಷ್ ಇನ್ನೂ ಸ್ಟಾರ್ ನಟ ಆಗಿರಲಿಲ್ಲ. ಆದಾಗ್ಯೂ ರಾಜ್ಕುಮಾರ್ ಅವರೇ ಬಂದು ಅಂಬರೀಷ್ ಅವರನ್ನು ಮಾತನಾಡಿಸಿದ್ದರು. ಇದು ರಾಜ್ಕುಮಾರ್ ಅವರ ದೊಡ್ಡ ಗುಣ ಎಂದು ಅಂಬರೀಷ್ ಅವರು ಹಾಡಿ ಹೊಗಳಿದ್ದರು.
‘ನನ್ನ ಹೆಸರು ಚಿತ್ರರಂಗದಲ್ಲಿ ಗೊತ್ತಿರಲಿಲ್ಲ. ರಾಜ್ಕುಮಾರ್ ಅವರ ಸಿನಿಮಾಗಳನ್ನು ಮೊದಲ ದಿನದಿಂದಲೂ ನೋಡುತ್ತಿದ್ದೆ. ನನಗೆ ಪ್ರಶಸ್ತಿ ಬಂದಿತ್ತು. ಅದನ್ನು ಸ್ವೀಕರಿಸಲು ಹೋಗಿದ್ದೆ. ರಾಜ್ಕುಮಾರ್ ಅವರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ನನ್ನ ತಾಯಿಗೆ ರಾಜ್ಕುಮಾರ್ ಎಂದರೆ ಸಾಕಷ್ಟು ಪ್ರೀತಿ. ಅವರು ರಾಜ್ಕುಮಾರ್ಗೆ ವಂದಿಸುವಂತೆ ಕೇಳುತ್ತಲೇ ಇದ್ದರು. ನಮಸ್ಕಾರ ಮಾಡಿದರೆ ರಾಜ್ಕುಮಾರ್ಗೆ ಕಾಣೋದಿಲ್ಲ ಅನ್ನೋದು ನನ್ನ ವಾದ. ಹೀಗಾಗಿ, ಸುಮ್ಮನೆ ಇದ್ದೆ’ ಎಂದಿದ್ದರು ಅಂಬರೀಷ್.
‘ರಾಜ್ಕುಮಾರ್ ನನ್ನನ್ನು ನೋಡಿದ್ದರು. ಅವರು ನನ್ನನ್ನು ನೋಡಿ ಹೇಗಿದ್ದೀರಾ ಅಂಬರೀಷ್ ಎಂದು ಕೇಳಿದ್ದರು. ಅಮ್ಮ ಮೈಸೂರು ಹೋಗೋತನಕವೂ ಬಿಡಲಿಲ್ಲ. ನಿನ್ನನ್ನು ಯಾರು ಎಂದು ಅವರು ಬಂದು ಮಾತನಾಡಿಸಬೇಕು? ಅವರು ಬಂದು ನಿನ್ನ ಮಾತನಾಡಿಸಬೇಕಾ? ನಿನಗೆ ಹೋಗಿ ಅವರ ಮಾತನಾಡಿಸೋಕೆ ಆಗೋದಿಲ್ಲವಾ ಎಂದು ಅಮ್ಮ ಕೇಳುತ್ತಲೇ ಇದ್ದರು’ ಎಂದು ಅವರು ವಿವರಿಸಿದ್ದರು.
‘ದೊಡ್ಡವರು ಬಂದು ಚಿಕ್ಕವರ ಮಾತನಾಡಿಸಿದರೆ ಅವರ ಮೇಲಿನ ಗೌರವ ಹೆಚ್ಚಾಗುತ್ತದೆ’ ಎಂದಿದ್ದರು ಅಂಬರೀಷ್. ‘ಒಡ ಹುಟ್ಟಿದವರು’ ಸಿನಿಮಾದಲ್ಲಿ ಅಂಬರೀಷ್ ರಾಜ್ಕುಮಾರ್ ಒಟ್ಟಿಗೆ ನಟಿಸಿದ್ದರು. ‘ರಾಜ್ಕುಮಾರ್ ಯಾವಾಗಲೂ ಕಲಾವಿದರ ಪರ’ ಎನ್ನುತ್ತಿದ್ದರು ಅಂಬಿ. ‘ರಾಜ್ಕುಮಾರ್ ಆಲೋಚನೆಗಳು ನಮ್ಮ ಜೊತೆ ಇದೆ. ಅದನ್ನು ನಡೆಸಿಕೊಂಡು ಹೋಗೋದು ಕಷ್ಟ. ಆದರೆ ಪ್ರಯತ್ನ ಮಾಡಬೇಕು. ಅವರು ಹಣ ನೋಡಲಿಲ್ಲ. ಕೇವಲ ಕಲೆ ಎನ್ನುತ್ತಿದ್ದರು’ ಎಂದಿದ್ದರು ಅಂಬರೀಷ್.
ಇದನ್ನೂ ಓದಿ: ‘ಒಡಹುಟ್ಟಿದವರು’ ಸಿನಿಮಾ ಮಾಡಲು ರಾಜ್ಕುಮಾರ್ಗೆ ಎರಡು ಷರತ್ತು ಹಾಕಿದ್ದ ಅಂಬರೀಷ್
ರಾಜ್ಕುಮಾರ್ ಹಾಗೂ ಅಂಬರೀಷ್ ಒಡನಾಟ ತುಂಬಾನೇ ಚೆನ್ನಾಗಿತ್ತು. ರಾಜ್ಕುಮಾರ್ ನಿಧನ ಹೊಂದಿದ ಬಳಿಕ ಅಂಬರೀಷ್ ಅವರು ಸಾಕಷ್ಟು ಬೇಸರ ಮಾಡಿಕೊಂಡಿದ್ದರು. ಹಲವು ವೇದಿಕೆ ಮೇಲೆ ಅವರು ರಾಜ್ಕುಮಾರ್ನ ನೆನಪಿಸಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:49 am, Wed, 7 May 25







