Ragini Dwivedi: ಪ್ರಿಯಾಂಕಾ ಉಪೇಂದ್ರ ಮೆಚ್ಚಿದ ‘ಶೀಲ’ ಟ್ರೇಲರ್​; ಆ.4ರಂದು ರಾಗಿಣಿ ದ್ವಿವೇದಿ ನಟನೆಯ ಹೊಸ ಚಿತ್ರ ರಿಲೀಸ್​

Sheela Movie trailer: ಸಸ್ಪೆನ್ಸ್​ ಥ್ರಿಲ್ಲರ್​ ಶೈಲಿಯಲ್ಲಿ ‘ಶೀಲ’ ಸಿನಿಮಾ ಮೂಡಿಬಂದಿದೆ. ಈಗಾಗಲೇ ಮಲಯಾಳಂ ವರ್ಷನ್​ ಬಿಡುಗಡೆ ಆಗಿದ್ದು, ಕನ್ನಡದಲ್ಲಿ ಆಗಸ್ಟ್​ 4ರಂದು ತೆರೆಕಾಣಲಿದೆ.

Ragini Dwivedi: ಪ್ರಿಯಾಂಕಾ ಉಪೇಂದ್ರ ಮೆಚ್ಚಿದ ‘ಶೀಲ’ ಟ್ರೇಲರ್​; ಆ.4ರಂದು ರಾಗಿಣಿ ದ್ವಿವೇದಿ ನಟನೆಯ ಹೊಸ ಚಿತ್ರ ರಿಲೀಸ್​
ಡಿ.ಎಂ. ಪಿಳ್ಳೈ, ರಾಗಿಣಿ ದ್ವಿವೇದಿ, ಪ್ರಿಯಾಂಕಾ ಉಪೇಂದ್ರ

Updated on: Jul 30, 2023 | 3:03 PM

ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ. ಪರಭಾಷೆಯ ಸಿನಿಮಾಗಳಲ್ಲೂ ಕಾಣಿಸಿಕೊಂಡು ಅವರು ಫೇಮಸ್​ ಆಗಿದ್ದಾರೆ. ಅಕ್ಕ-ಪಕ್ಕದ ರಾಜ್ಯಗಳಲ್ಲೂ ಅವರಿಗೆ ಅಭಿಮಾನಿಗಳು ಇದ್ದಾರೆ. ಕಾರಣಾಂತರಗಳಿಂದ ಒಂದಷ್ಟು ದಿನಗಳ ಕಾಲ ರಾಗಿಣಿ ಅವರು ಹೊಸ ಸಿನಿಮಾ ಒಪ್ಪಿಕೊಳ್ಳುವುದು ತಡವಾಗಿತ್ತು. ಆದರೆ ಈಗ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಿಗೆ ಅವರು ಸಹಿ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ಮಲಯಾಳಂ ಸಿನಿಮಾಗಳಲ್ಲೂ ಅವರು ನಟಿಸುತ್ತಿದ್ದಾರೆ. ರಾಗಿಣಿ ದ್ವಿವೇದಿ ನಟನೆಯ ‘ಶೀಲ’ ಸಿನಿಮಾ (Sheela Movie) ಕನ್ನಡ ಮತ್ತು ಮಲಯಾಳಂನಲ್ಲಿ ಸಿದ್ಧವಾಗಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್​ ಬಿಡುಗಡೆ ಆಯಿತು. ಅದನ್ನು ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ಬಿಡುಗಡೆ ಮಾಡಿದರು.

‘ಶೀಲ’ ಸಿನಿಮಾದಲ್ಲಿ ನಾಯಕಿಪ್ರಧಾನ ಕಥಾಹಂದರ ಇದೆ. ಮಲಯಾಳಂನಲ್ಲಿ ಈ ಸಿನಿಮಾವನ್ನು ಜುಲೈ 28ರಂದು ಬಿಡುಗಡೆ ಮಾಡಲಾಯಿತು. ಕನ್ನಡ ವರ್ಷನ್​ ಇನ್ನೂ ರಿಲೀಸ್​ ಆಗಿಲ್ಲ. ಕರ್ನಾಟಕದಲ್ಲಿ ಆಗಸ್ಟ್​ 4ರಂದು ತೆರೆಕಾಣಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಕನ್ನಡ ಅವತರಣಿಕೆಯ ಟ್ರೇಲರ್​ ಅನ್ನು ಪ್ರಿಯಾಂಕಾ ಉಪೇಂದ್ರ ರಿಲೀಸ್​ ಮಾಡಿ ಮೆಚ್ಚುಗೆ ಸೂಚಿಸಿದರು. ‘ಈ ಸಿನಿಮಾದ ಟ್ರೇಲರ್​ ತುಂಬ ಚೆನ್ನಾಗಿದೆ. ರಾಗಿಣಿ ಅವರ ನಟನೆ ಕೂಡ ಉತ್ತಮವಾಗಿದೆ. ಈ ಚಿತ್ರಕ್ಕೆ ಯಶಸ್ಸು’ ಸಿಗಲಿ ಎಂದು ಪ್ರಿಯಾಂಕಾ ಉಪೇಂದ್ರ ಶುಭ ಹಾರೈಸಿದರು.

Ragini Dwivedi: ಮೋಹನ್​​ಲಾಲ್​ ಜತೆ ಶೂಟಿಂಗ್​ ಆರಂಭಿಸಿದ ರಾಗಿಣಿ ದ್ವಿವೇದಿ; ‘ವೃಷಭ’ ತಂಡದ ಜೊತೆಗಿನ ಫೋಟೋ ಹಂಚಿಕೊಂಡ ನಟಿ

ಈಗಿನ ಕಾಲಘಟ್ಟದಲ್ಲಿ ಹೆಣ್ಣುಮಕ್ಕಳು ಪ್ರತಿ ದಿನವೂ ಎದುರಿಸುವಂತಹ ಅನೇಕ ಸಮಸ್ಯೆಗಳ ಕುರಿತು ‘ಶೀಲ’ ಸಿನಿಮಾ ಸಿದ್ಧವಾಗಿದೆ. ಮಲಯಾಳಂ ವರ್ಷನ್​ಗೆ ಪ್ರೇಕ್ಷಕರಿಂದ ಮೆಚ್ಚಿಗೆ ಸಿಕ್ಕಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ಕರ್ನಾಟಕದಲ್ಲಿ ಈ ಸಿನಿಮಾ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಆಗಸ್ಟ್​ 4ರಂದು ಬಿಡುಗಡೆ ಆಗಲಿದ್ದು, ಇಲ್ಲಿಯೂ ಜನಮೆಚ್ಚುಗೆ ಸಿಗುತ್ತದೆ ಎಂಬ ಭರವಸೆ ‘ಶೀಲ’ ಬಳಗಕ್ಕೆ ಇದೆ. ಈ ಸಿನಿಮಾ ಬಗ್ಗೆ ನಟಿ ರಾಗಿಣಿ ಅವರು ಭರವಸೆ ಇಟ್ಟುಕೊಂಡಿದ್ದಾರೆ. ಟ್ರೇಲರ್​ ಬಿಡುಗಡೆ ಮಾಡಿರುವ ಪ್ರಿಯಾಂಕಾ ಉಪೇಂದ್ರ ಅವರಿಗೆ ರಾಗಿಣಿ ದ್ವಿವೇದಿ ಅವರು ಧನ್ಯವಾದ ತಿಳಿಸಿದ್ದಾರೆ.

Sheela (Kannada)-Official Trailer| Ragini Dwivedi | Riyaz Khan | Avinash | Shobhraj | Balu Narayanan

‘ಶೀಲ’ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಜೊತೆ ಶೋಭರಾಜ್, ಅವಿನಾಶ್, ಚಿತ್ರಾ ಶೆಣೈ, ಶ್ರೀಪತಿ, ಮಹೇಶ್ ನಾಯರ್, ರಿಯಾಜ್ ಖಾನ್, ಆರತಿ ಗೋಪಾಲ್, ಅಬೆ ಡೇವಿಡ್ ಮುಂತಾದವರು ನಟಿಸಿದ್ದಾರೆ. ಬಾಲು ನಾರಾಯಣನ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಡಿ.ಎಂ. ಪಿಳ್ಳೈ ಅವರು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅಬೆ ಡೇವಿಡ್​ ಅವರು ಸಂಗೀತ ನೀಡಿದ್ದಾರೆ. ಸಸ್ಪೆನ್ಸ್​ ಥ್ರಿಲ್ಲರ್​ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us