ರಶ್ಮಿಕಾ ಮಂದಣ್ಣ ಜೊತೆ ಸಂಪರ್ಕದಲ್ಲಿದ್ದೇನೆ, ಆಕೆ ಬಗ್ಗೆ ಹೆಮ್ಮೆ ಇದೆ: ರಕ್ಷಿತ್ ಶೆಟ್ಟಿ

|

Updated on: Sep 21, 2023 | 9:54 PM

Rakshit Shetty: ತೆಲುಗು ರಾಜ್ಯಗಳಲ್ಲಿ ತಮ್ಮ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಪ್ರಚಾರ ಮಾಡುತ್ತಿರುವ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಕುರಿತಾದ ಪ್ರಶ್ನೆ ಎದುರಾಗಿದೆ. ಪ್ರಶ್ನೆಗೆ ಸರಳವಾಗಿಯೇ ಉತ್ತರಿಸಿದ್ದಾರೆ ರಕ್ಷಿತ್.

ರಶ್ಮಿಕಾ ಮಂದಣ್ಣ ಜೊತೆ ಸಂಪರ್ಕದಲ್ಲಿದ್ದೇನೆ, ಆಕೆ ಬಗ್ಗೆ ಹೆಮ್ಮೆ ಇದೆ: ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ
Follow us on

ರಕ್ಷಿತ್ ಶೆಟ್ಟಿ (Rakshit Shetty) ಒಂದರ ಮೇಲೊಂದು ಹಿಟ್ ಸಿನಿಮಾಗಳನ್ನು ಕೊಡುತ್ತಿದ್ದಾರೆ. ‘777 ಚಾರ್ಲಿ‘ (777 Charlie) ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಸೂಪರ್ ಹಿಟ್ ಆಗಿದೆ. ಅದರ ಹಿಂದೆ ಬಂದಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಸಹ ಹಿಟ್ ಎನಿಸಿಕೊಂಡಿದೆ. ತನ್ನ ವಾರಗೆಯ ನಟರು ನಡೆಯುತ್ತಿರುವ ದಾರಿಗೆ ಹೊರತಾಗಿ ಮಾಸ್, ಕಮರ್ಷಿಯಲ್ ಸಿದ್ಧ ಸೂತ್ರಗಳನ್ನು ಪಕ್ಕಕ್ಕೆ ಸರಿಸಿ ಕಂಟೆಂಟ್​ ಮೇಲೆ ಗಮನ ಹರಿಸಿರುವ ರಕ್ಷಿತ್ ಶೆಟ್ಟಿ, ಭವಿಷ್ಯದಲ್ಲಿಯೂ ಸಾಕಷ್ಟು ಯೋಜನೆಗಳನ್ನು ಮುಂದೆ ಹರವಿಕೊಂಡು ಕೂತಿದ್ದಾರೆ. ಇದೀಗ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವನ್ನು ತೆಲುಗಿನಲ್ಲಿ ಬಿಡುಗಡೆ ಮಾಡುತ್ತಿದ್ದು, ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ.

ತೆಲುಗಿನಲ್ಲಿ ‘ಸಪ್ತ ಸಾಗರಾಲು ದಾಟಿ’ ಹೆಸರಿನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ರಕ್ಷಿತ್ ಮುಂದಾಗಿದ್ದು, ತೆಲುಗು ರಾಜ್ಯಗಳಲ್ಲಿ ಜೋರಾಗಿ ಪ್ರಚಾರ ಮಾಡುತ್ತಿದ್ದಾರೆ ರಕ್ಷಿತ್ ಶೆಟ್ಟಿ ಹಾಗೂ ತಂಡ. ತೆಲುಗು ರಾಜ್ಯಗಳಲ್ಲಿ ರಶ್ಮಿಕಾ ಮಂದಣ್ಣ ಜನಪ್ರಿಯ ತಾರೆ, ಇದೇ ಕಾರಣಕ್ಕೆ ರಕ್ಷಿತ್ ಶೆಟ್ಟಿಗೆ ಸಹಜವಾಗಿಯೇ ರಶ್ಮಿಕಾ ಮಂದಣ್ಣ ಕುರಿತಾದ ಪ್ರಶ್ನೆಗಳು ಸಂದರ್ಶನಗಳಲ್ಲಿ ಎದುರಾಗಿವೆ. ಯೂಟ್ಯೂಬರ್ ಒಬ್ಬರೊಟ್ಟಿಗಿನ ಸಂದರ್ಶನದಲ್ಲಿ ರಶ್ಮಿಕಾ ಬಗ್ಗೆ ಕೇಳಲಾದ ಪ್ರಶ್ನೆಗೆ, ಎಂದಿನಂತೆ ಶಾಂತವಾಗಿ, ಘನತೆಯುತವಾಗಿಯೇ ಉತ್ತರಿಸಿದ್ದಾರೆ.

‘ರಕ್ಷಿತ್ ಶೆಟ್ಟಿ ಈಗಲೂ ರಶ್ಮಿಕಾ ಅವರೊಟ್ಟಿಗೆ ಸಂಪರ್ಕದಲ್ಲಿದ್ದಾರಾ?’ ಎಂಬ ಪ್ರಶ್ನೆಯನ್ನು ಯೂಟ್ಯೂಬರ್ ಒಬ್ಬರು ಕೇಳಿದ್ದಾರೆ. ಪ್ರಶ್ನೆಗೆ ಉತ್ತರಿಸಿದ ನಟ ರಕ್ಷಿತ್ ಶೆಟ್ಟಿ, ”ಹೌದು, ನಾವು ಸಂಪರ್ಕದಲ್ಲಿದ್ದೇವೆ. ಆಕೆಗೆ ಸದಾ ದೊಡ್ಡ ಕನಸುಗಳಿದ್ದವು, ಆ ಕನಸುಗಳನ್ನು ಈಗ ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ. ಅವರ ಸಾಧನೆಗೆ ಭೇಷ್ ಎನ್ನಲೇ ಬೇಕು” ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಈ ಹಿಂದೆಯೂ ರಶ್ಮಿಕಾ ಬಗ್ಗೆ ಪ್ರಶ್ನೆ ಎದುರಾದಾಗೆಲ್ಲ ರಕ್ಷಿತ್ ಶೆಟ್ಟಿ ಇದೇ ಘನತೆಯಿಂದಲೇ ಉತ್ತರ ನೀಡಿದ್ದಾರೆ.

ಇದನ್ನೂ ಓದಿ:ಮತ್ತೋರ್ವ ತೆಲುಗು ಸ್ಟಾರ್ ಹೀರೋ ಜೊತೆ ನಟಿಸೋಕೆ ರೆಡಿ ಆದ ರಶ್ಮಿಕಾ ಮಂದಣ್ಣ

ಅದೇ ಸಂದರ್ಶನದಲ್ಲಿ ಕನ್ನಡ ಚಿತ್ರರಂಗ, ಕನ್ನಡ ಚಿತ್ರರಂಗದ ಸ್ಟಾರ್ ನಟರುಗಳು, ರಿಷಬ್ ಶೆಟ್ಟಿ, ಪರಮವಃ ಸ್ಟುಡಿಯೋಸ್ ಮತ್ತು ಪಿಕ್ಚರ್ಸ್, ತಮ್ಮ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಇನ್ನೂ ಹಲವು ವಿಷಯಗಳ ಬಗ್ಗೆ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ. ಸಂದರ್ಶನದ ಮಧ್ಯೆ, ರಿಷಬ್ ಶೆಟ್ಟಿಗೆ ಕರೆ ಮಾಡಿ ಮಾತನಾಡಿದ್ದಾರೆ. ಇಬ್ಬರ ಗೆಳೆತನ, ತಮ್ಮ ಮುಂದಿನ ಪ್ರಾಜೆಕ್ಟ್ ಇನ್ನೂ ಹಲವು ವಿಷಯಗಳ ಬಗ್ಗೆ ನಟ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶನ ಮಾಡಿದ್ದು, ಸ್ವತಃ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಸುಂದರ ಪ್ರೇಮಕತೆಯುಳ್ಳ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಾಯಕಿ. ರುಕ್ಮಿಣಿಯ ನಟನೆ ಬಗ್ಗೆ ಭರಪೂರ ಪ್ರಶಂಸೆ ವ್ಯಕ್ತವಾಗಿದೆ. ಸಿನಿಮಾದ ಮೊದಲ ಭಾಗವಷ್ಟೆ ಇದೀಗ ಬಿಡುಗಡೆ ಆಗಿದ್ದು, ಸಿನಿಮಾದ ಎರಡನೇ ಭಾಗ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ