ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ಏನೇ ಮಾಡಿದರೂ ವಿಶೇಷವಾಗಿ ಮಾಡ್ತಾರೆ. ಈಗಾಗಲೇ ಅನೇಕ ಭಿನ್ನ ಸಿನಿಮಾಗಳ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಸಲಿಂಗಕಾಮದ ಕುರಿತು ‘ಖತ್ರಾ ಡೇಂಜರಸ್’ ಚಿತ್ರ ಮಾಡಿದ್ದ ಅವರು ಈಗ ಇನ್ನೊಂದು ಸಿನಿಮಾ ಮೂಲಕ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಈ ಹೊಸ ಸಿನಿಮಾ ಹೆಸರು ‘ಲಡ್ಕಿ’. ಹಲವು ಭಾಷೆಗಳಿಗೆ ಡಬ್ ಆಗಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ಕನ್ನಡದಲ್ಲಿ ‘ಹುಡುಗಿ’ (Hudugi) ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಪ್ರಚಾರಕ್ಕಾಗಿ ಅವರು ಬೆಂಗಳೂರಿಗೆ ಬಂದಿದ್ದರು. ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸಿರುವ ನಟಿ ಪೂಜಾ ಭಾಲೇಕರ್ (Pooja Bhalekar) ಕೂಡ ಅವರಿಗೆ ಸಾಥ್ ನೀಡಿದರು. ಸಿನಿಮಾದ ಬಗ್ಗೆ ರಾಮ್ ಗೋಪಾಲ್ ವರ್ಮಾ ಒಂದಷ್ಟು ಮಾಹಿತಿ ಹಂಚಿಕೊಂಡರು.
ಈಗಾಗಲೇ ‘ಹುಡುಗಿ’ ಚಿತ್ರದ ಪೋಸ್ಟರ್ಗಳು ವೈರಲ್ ಆಗಿವೆ. ಪೂಜಾ ಭಾಲೇಕರ್ ಅವರು ಸಿಕ್ಕಾಪಟ್ಟೆ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಈ ಪೋಸ್ಟರ್ಗಳು ಸಾಕ್ಷಿ ಒದಗಿಸುತ್ತಿವೆ. ಮಾರ್ಷಲ್ ಆರ್ಟ್ಸ್ ಬಲ್ಲಂತಹ ಹುಡುಗಿಯಾಗಿ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ರಿಯಲ್ ಲೈಫ್ನಲ್ಲಿಯೂ ಅವರು ಈ ಸಮರ ಕಲೆಯನ್ನು ಕಲಿತಿದ್ದಾರೆ ಎಂಬುದು ವಿಶೇಷ. ಈ ಬಗ್ಗೆ ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದಾರೆ.
‘ಇದು ತುಂಬಾ ವಿಶೇಷವಾದ ಸಿನಿಮಾ. ನಾನು ಚಿಕ್ಕವನಿದ್ದಾಗ ಎಂಟರ್ ದಿ ಡ್ರ್ಯಾಗನ್ ಸಿನಿಮಾ ನೋಡಿದ್ದೆ. ಆ ಕಥೆಯ ನಾಯಕ ಬ್ರೂಸ್ಲಿ ಅವರಿಂದ ಸ್ಫೂರ್ತಿ ಪಡೆದು ಈ ಸಿನಿಮಾ ಮಾಡಿದ್ದೇನೆ. ಮಾರ್ಷಲ್ ಆರ್ಟ್ಸ್ಗೆ ಸಂಬಂಧಪಟ್ಟ ಸಿನಿಮಾವಾಗಿದ್ದು, ಈ ಕಲೆ ಅಭ್ಯಾಸ ಮಾಡುವವರ ಸಂಖ್ಯೆ ತೀರಾ ವಿರಳ. ಅದರಲ್ಲೂ ಹುಡುಗಿಯರು ಕಲಿಯುವುದು ಕಡಿಮೆ. ನಾಯಕಿ ಪೂಜಾ 12 ವರ್ಷದಿಂದ ಸಮರಕಲೆ ಅಭ್ಯಾಸ ಮಾಡ್ತಿದ್ದಾರೆ. ಹೀಗಾಗಿ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಯಿತು’ ಎಂದು ಅವರು ಹೇಳಿದ್ದಾರೆ.
ಭಾರತದ ಜೊತೆಗೆ ಚೀನಾದಲ್ಲೂ ಈ ಸಿನಿಮಾ ಬಿಡುಗಡೆ ಆಗಲಿದೆ ಎಂಬುದು ವಿಶೇಷ. ಸಾವಿರಾರು ಪರದೆಗಳಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾರ್ಷಲ್ ಆರ್ಟ್ಸ್ ಮಾತ್ರವಲ್ಲದೇ ಒಂದು ತ್ರಿಕೋನ ಪ್ರೇಮಕಥೆ ಕೂಡ ಈ ಚಿತ್ರದಲ್ಲಿ ಇದೆ ಎಂದು ತಂಡ ಹೇಳಿಕೊಂಡಿದೆ.