ಶಿವಣ್ಣನ ಜನ್ಮದಿನಕ್ಕೆ ‘ಘೋಸ್ಟ್’ ಚಿತ್ರದಿಂದ ಸಿಗಲಿದೆ ಸ್ಪೆಷಲ್ ಗಿಫ್ಟ್; ಸುದೀಪ್ ಮಾಡ್ತಾರೆ ಪೋಸ್ಟರ್ ರಿಲೀಸ್
Shivarajkumar | Ghost Movie: ಶಿವರಾಜ್ಕುಮಾರ್ ಅಭಿಮಾನಿಗಳ ವಲಯದಲ್ಲಿ ‘ಘೋಸ್ಟ್’ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಶ್ರೀನಿ ನಿರ್ದೇಶನ ಮಾಡುತ್ತಿದ್ದಾರೆ.
ನಟ ಶಿವರಾಜ್ಕುಮಾರ್ (Shivarajkumar) ಅವರು ಈ ವರ್ಷ 60ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಜುಲೈ 12ರಂದು ಅವರ ಜನ್ಮದಿನ (Shivarajkumar Birthday). ಆ ದಿನವನ್ನು ವಿಶೇಷವಾಗಿ ಸೆಲೆಬ್ರೇಟ್ ಮಾಡಲು ಅಭಿಮಾನಿಗಳು ಕಾದಿದ್ದಾರೆ. ಪ್ರಸ್ತುತ ಶಿವಣ್ಣನ ಕೈಯಲ್ಲಿ ಹಲವು ಸಿನಿಮಾಗಳಿವೆ. ಅವರನ್ನು ಚಂದನವನದ ಬ್ಯುಸಿಯೆಸ್ಟ್ ನಟ ಅಂತ ಕರೆಯಬಹುದು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಶಿವರಾಜ್ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಆ ಎಲ್ಲ ಚಿತ್ರತಂಡಗಳಿಂದ ವಿಶೇಷ ಗಿಫ್ಟ್ ಸಿಗಲಿದೆ. ವಿವಿಧ ಪೋಸ್ಟರ್, ಟೀಸರ್ ಬಿಡುಗಡೆ ಆಗಲಿದೆ. ಆ ಪೈಕಿ ‘ಘೋಸ್ಟ್’ ಚಿತ್ರತಂಡ ಸ್ಪೆಷಲ್ ಅನೌನ್ಸ್ಮೆಂಟ್ ಮಾಡಿದೆ. ಕಿಚ್ಚ ಸುದೀಪ್ (Kichcha Sudeep) ಅವರಿಂದ ಹೊಸ ಪೋಸ್ಟರ್ ಬಿಡುಗಡೆ ಮಾಡಿಸುವುದಾಗಿ ಚಿತ್ರತಂಡ ತಿಳಿಸಿದೆ.
ಶಿವರಾಜ್ಕುಮಾರ್ ಅಭಿಮಾನಿಗಳ ವಲಯದಲ್ಲಿ ‘ಘೋಸ್ಟ್’ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಅದಕ್ಕೆ ಕಾರಣಗಳು ಹಲವು. ಈ ಚಿತ್ರದ ಶೀರ್ಷಿಕೆಯೇ ಗಮನ ಸೆಳೆಯುವಂತಿದೆ. ಈ ಸಿನಿಮಾಗೆ ನಿರ್ದೇಶನ ಮಾಡುತ್ತಿರುವುದು ನಟ-ನಿರ್ದೇಶಕ ಶ್ರೀನಿ. ಈ ವರ್ಷ ‘ಓಲ್ಡ್ ಮಾಂಕ್’ ಸಿನಿಮಾ ಮೂಲಕ ಗೆಲುವು ಕಂಡಿರುವ ಅವರು ಈಗ ‘ಘೋಸ್ಟ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಶಿವರಾಜ್ಕುಮಾರ್ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಅವರು ಎಕ್ಸೈಟ್ ಆಗಿದ್ದಾರೆ.
ಜುಲೈ 12ರಂದು ಬೆಳಗ್ಗೆ 10 ಗಂಟೆಗೆ ‘ಘೋಸ್ಟ್’ ಸಿನಿಮಾದ ಪೋಸ್ಟರ್ ಲಾಂಚ್ ಆಗಲಿದೆ. ಇದನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಲಿದ್ದಾರೆ. ಈ ವಿಷಯ ತಿಳಿಸಲು ಹಂಚಿಕೊಂಡಿರುವ ಪೋಸ್ಟರ್ನಲ್ಲಿ ‘ಮೀಟ್ ದಿ ಕಿಂಗ್ ಆಫ್ ಆಲ್ ಮಾಸಸ್’ ಎಂದು ಬರೆದಿರುವುದು ಹೈಲೈಟ್ ಆಗಿದೆ. ಆ ಮೂಲಕ ಶಿವರಾಜ್ಕುಮಾರ್ ಅಭಿಮಾನಿಗಳ ಮನದಲ್ಲಿ ಸಖತ್ ಕೌತುಕ ಮೂಡಿದೆ.
ಸಂದೇಶ್ ಪ್ರೊಡಕ್ಷನ್ಸ್ ಮೂಲಕ ‘ಘೋಸ್ಟ್’ ಚಿತ್ರ ನಿರ್ಮಾಣ ಆಗುತ್ತಿದೆ. ಈ ಬ್ಯಾನರ್ನಲ್ಲಿ ತಯಾರಾಗುತ್ತಿರುವ 29ನೇ ಸಿನಿಮಾ ಇದು. ಸಂದೇಶ್ ಎನ್. ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಆಗಸ್ಟ್ ಅಂತ್ಯದ ವೇಳೆಗೆ ಈ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.