‘ಈ ಅಮೃತ ಮಹೋತ್ಸವ ನೋಡಲು ವಿಷ್ಣುವರ್ಧನ್ ಇರಬೇಕಿತ್ತು’: ನೆನಪಿನ ಪುಟ ತೆರೆದ ರಮೇಶ್

‘ಸಾಹಸ ಸಿಂಹ’ ಡಾ. ವಿಷ್ಣುವರ್ಧನ್ ಅವರನ್ನು ಹತ್ತಿರದಿಂದ ಕಂಡವರಲ್ಲಿ ನಟ ರಮೇಶ್ ಅರವಿಂದ್ ಕೂಡ ಪ್ರಮುಖರು. ಇಂದು (ಸೆಪ್ಟೆಂಬರ್ 27) ಬೆಂಗಳೂರಿನಲ್ಲಿ ನಡೆಯುತ್ತಿರುವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್ ಬಗ್ಗೆ ರಮೇಶ್ ಅರವಿಂದ್ ಅವರು ಮಾತನಾಡಿದ್ದಾರೆ. ಆ ದಿನಗಳ ನೆನಪಿಗಳನ್ನು ಅವರು ತೆರೆದಿಟ್ಟಿದ್ದಾರೆ.

‘ಈ ಅಮೃತ ಮಹೋತ್ಸವ ನೋಡಲು ವಿಷ್ಣುವರ್ಧನ್ ಇರಬೇಕಿತ್ತು’: ನೆನಪಿನ ಪುಟ ತೆರೆದ ರಮೇಶ್
Dr Vishnuvardhan, Ramesh Aravind
Image Credit source: Tv9 Kannada

Updated on: Sep 27, 2026 | 12:15 PM

ಅದ್ದೂರಿಯಾಗಿ ವಿಷ್ಣುವರ್ಧನ್ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಇದರಲ್ಲಿ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ಖ್ಯಾತ ನಟ ರಮೇಶ್ ಅರವಿಂದ್ ಅವರು ಅನೇಕ ವಿಷಯಗಳನ್ನು ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ‘ಅವರು ಇಂದು ಇರಬೇಕಾಗಿತ್ತು. ಅವರು ಈ ಸಂಭ್ರಮವನ್ನು ನೋಡಬೇಕಿತ್ತು. ‘ಕರ್ನಾಟಕ ರತ್ನ’ ಪ್ರಶಸ್ತಿ ಸಿಕ್ಕ ದಿನ ಅವರು ಇರಬೇಕಿತ್ತು ಎಂಬುದೇ ನಮ್ಮೆಲ್ಲರ ಭಾವನೆ. ನೂರೊಂದು ನೆನಪು ಎದೆಯಾಳದಿಂದ.. ಎಂಬಂತೆ ನಮ್ಮೆಲ್ಲರಿಗೂ ಅವರದ್ದೇ ಆದ ನೆನಪುಗಳು ಇವೆ. ಎಲ್ಲೇ ಇದ್ದರೂ ನನಗೆ ವಿಷ್ಣು ದಾದಾ ನೆನಪಾಗುತ್ತಾರೆ. ಮೊನ್ನೆ ಶೂಟಿಂಗ್ ಮಾಡುವಾಗ ಬೆರಳಿಗೆ ಏಟು ಬಿತ್ತು. ಆಸ್ಪತ್ರೆಗೆ ಹೋಗಿ ಎಕ್ಸ್​ ರೇ ನೋಡಿದಾಗ ತಕ್ಷಣ ವಿಷ್ಣುವರ್ಧನ್ ಅವರ ನೆನಪು ಆಯಿತು’ ಎಂದು ರಮೇಶ್ ಹೇಳಿದ್ದಾರೆ.

‘ಒಂದು ಸಿನಿಮಾದ ಶೂಟಿಂಗ್ ವೇಳೆ ನನ್ನ ಕಾಲು ಮುರಿದುಹೋಗಿತ್ತು. ಆದರೂ ಕೂಡ ವಿಷ್ಣುವರ್ಧನ್ ಅವರ ಡೇಟ್ಸ್ ಮಿಸ್ ಆಗಬಾರದು ಅಂತ ನಾನು ಶೂಟಿಂಗ್​ಗೆ ಹೋಗಿದ್ದೆ. ವಿಷ್ಣು ಸರ್ ನನ್ನನ್ನು ನೋಡಿ ಯಾಕೆ ಕುಂಟುತ್ತಿದ್ದೀಯ ಅಂತ ಕೇಳಿದರು. ಕಾಲು ಮುರಿದಿದೆ, ನಿಮ್ ಡೇಟ್ಸ್ ಇದೆ ಎಂಬ ಕಾರಣದಿಂದ ಚಿತ್ರೀಕರಣಕ್ಕೆ ಬಂದೆ ಅಂತ ಹೇಳಿದೆ. ಕೂಡಲೇ ನಿರ್ಮಾಪಕರು ಮತ್ತು ನಿರ್ದೇಶಕರನ್ನು ಕರೆದು ಬೈಯ್ದರು. ನಾನು ಮತ್ತೆ ಡೇಟ್ ಕೊಡುತ್ತೇನೆ, ಮೊದಲು ಆ ಹುಡುಗನನ್ನು ವಾಪಸ್ ಕಳಿಸಿ ಅಂತ ವಿಷ್ಣುವರ್ಧನ್ ಹೇಳಿದ್ದರು’ ಎಂದಿದ್ದಾರೆ ರಮೇಶ್.

‘ಇತ್ತೀಚೆಗೆ ಬಸವನಗುಡಿಯಲ್ಲಿ ಫ್ಲೈಓವರ್​ನಲ್ಲಿ ಹೋಗುತ್ತಿದ್ದಾಗ ದಿಢೀರ್ ಅಂತ ಅವರ ನೆನಪು ಬಂತು. ಅವರು ಆಗಾಗ ತಮ್ಮ ಆಪ್ತರನ್ನು ಊಟ ತಿಂಡಿಗೆ ತಮ್ಮ ಮನೆಗೆ ಆಹ್ವಾನಿಸುತ್ತಿದ್ದರು. ಅದೇ ರೀತಿ ಒಂದಿನ ನಮ್ಮನ್ನೆಲ್ಲ ಕರೆದಿದ್ದರು. ಎಲ್ಲಿಯೇ ಹೋದರೂ ನಾವು ಕನ್ನಡದಲ್ಲಿಯೇ ಮಾತನಾಡಬೇಕು ಅಂತ ಅವರು ಹೇಳುತ್ತಿದ್ದರು’ ಎಂದು ರಮೇಶ್ ಸ್ಮರಿಸಿಕೊಂಡಿದ್ದಾರೆ.

Vishnuvardhan Amrutha Mahotsava| ವಿಷ್ಣು ಸರ್​ ಗುಣಗಳನ್ನ ನಾವು ಅನುಸರಿಸಬೇಕು ಎಂದ ನಟ ರಮೇಶ್ |#TV9D

‘ವಿಷ್ಣುವರ್ಧನ್ ಅವರಲ್ಲಿ ಇದ್ದಂತಹ ಗುಣಗಳನ್ನು ನಮ್ಮದಾಗಿಸಿಕೊಳ್ಳಬೇಕು. ಅದು ನಮ್ಮ ಏಳಿಗೆಗೆ ಕಾರಣ ಆಗಬೇಕು. ಸಾವಿರ ಜನರ ಮಧ್ಯೆ ನಡೆದುಕೊಂಡು ಬಂದರೂ ಕೂಡ ಅದು ವಿಷ್ಣುವರ್ಧನ್ ಎಂಬುದು ಗೊತ್ತಾಗುತ್ತಿತ್ತು. ಅವರ ವಿಶೇಷತೆ ಆ ರೀತಿ ಇತ್ತು. ಅವರ ಧ್ವನಿ, ಉಚ್ಚಾರಣೆ ಅತ್ಯುತ್ತಮವಾಗಿತ್ತು. ಅವರ ಬಾಯಲ್ಲಿ ಕನ್ನಡ ಕೇಳಿದರೆ ನಮಗೆ ಮನೆ ನೆನಪಾಗುತ್ತಿತ್ತು. ಅವರ ಶಿಸ್ತು, ಸಭ್ಯತೆ ನಾವು ಕಲಿಯಬೇಕು. ಪರದೆ ಮೇಲೆ ಮಾತ್ರವಲ್ಲದೇ ಪರದೆ ಆಚೆಗೂ ಅವರಿಗೆ ಆ ಗುಣ ಇತ್ತು’ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.

ಇದನ್ನೂ ಓದಿ: ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕಾಗಿ ಒಂದಾಗುತ್ತಿದೆ ಇಡೀ ಕನ್ನಡ ಚಿತ್ರರಂಗ

‘ಇಂದು ರಾಜ್ಯದ ಮೂಲೆ ಮೂಲೆಯಿಂದ ಜನರು ಬಂದಿದ್ದಾರೆ. ಇವರೆಲ್ಲ ಯಾರು ಎಂಬುದೇ ನಮಗೆ ಗೊತ್ತಿಲ್ಲ. ಅವರನ್ನು ಒಂದುಗೂಡಿಸಿದ ಶಕ್ತಿಯೇ ವಿಷ್ಣುವರ್ಧನ್. ಅದಕ್ಕಾಗಿಯೇ ಅವರಿಗೆ ಕರ್ನಾಟಕ ರತ್ನ ಅಂತ ಬಿರುದು ನೀಡಿದ್ದಾರೆ. ಇಂದು ಈ ಅದ್ಭುತವಾದ ಕಾರ್ಯಕ್ರಮ ಆಯೋಜಿಸಿದ ವೀರಕಪುತ್ರ ಶ್ರೀನಿವಾಸ್, ಜಯಮಾಲಾ, ರಾಜೇಂದ್ರ ಸಿಂಗ್ ಬಾಬು, ರಾಕ್​ಲೈನ್ ವೆಂಕಟೇಶ್ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ ರಮೇಶ್ ಅರವಿಂದ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us