ನಟಿ ರಮ್ಯಾ (Ramya) ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷಗಳಾಗಿವೆ. ನಟಿಯೊಬ್ಬರಗೆ ಇಪ್ಪತ್ತು ವರ್ಷಗಳ ನಟನಾ ವೃತ್ತಿ ಎಂಬುದು ಸುಧೀರ್ಘವಾದುದು. ನಟರಿಗೆ ಹೋಲಿಸಿಕೊಂಡರೆ ನಟಿಯರ ವೃತ್ತಿಯ ಆಯಸ್ಸು ಕಡಿಮೆ ಅಂಥಹದ್ದರಲ್ಲಿ ನಟಿ ರಮ್ಯಾ ಇಪ್ಪತ್ತು ವರ್ಷ ಚಿತ್ರರಂಗದಲ್ಲಿ (Sandalwood) ಕಳೆದಿರುವ ಜೊತೆಗೆ ಈಗಲೂ ಸಕ್ರಿಯವಾಗಿ ಸಿನಿಮಾಗಳಲ್ಲಿ ನಟಿಸುವುದು ಸಾಧನೆಯೇ ಸರಿ. ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷ ಪೂರೈಸಿರುವ ಖುಷಿಯಲ್ಲಿ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟಿ ರಮ್ಯಾ, ಅವಕಾಶ ಕೊಟ್ಟ ದೊಡ್ಮನೆಯನ್ನು ಹಾಗೂ ಮೊದಲ ನಾಯಕರಾದ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಪ್ರೀತಿಯಿಂದ ನೆನಪು ಮಾಡಿಕೊಂಡಿದ್ದಾರೆ.
ರಮ್ಯಾ ನಾಯಕಿಯಾಗಿ ನಟಿಸಿದ್ದ ಮೊದಲ ಸಿನಿಮಾ ಅಭಿ ಬಿಡುಗಡೆ ಆಗಿ ಇಂದಿಗೆ (ಏಪ್ರಿಲ್ 25) 20 ವರ್ಷಗಳಾಗಿವೆ. ಪುನೀತ್ ರಾಜ್ಕುಮಾರ್ ನಾಯಕರಾಗಿದ್ದ ಈ ಸಿನಿಮಾಕ್ಕೆ ರಮ್ಯಾ ನಾಯಕಿಯಾಗಿದ್ದರು. ರಾಜ್ಕುಮಾರ್ ಕುಟುಂಬದ ಪೂರ್ಣಿಮಾ ಎಂಟರ್ಪ್ರೈಸಸ್ ಮೂಲಕ ನಿರ್ಮಾಣವಾದ ಈ ಸಿನಿಮಾಕ್ಕೆ ಪಾರ್ವತಮ್ಮ ರಾಜ್ಕುಮಾರ್ ನಿರ್ಮಾಪಕಿ. ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾದಲ್ಲಿಯೇ ಗಮನ ಸೆಳೆದಿದ್ದ ರಮ್ಯಾ ಆ ನಂತರ ತಿರುಗಿ ನೋಡಿದ್ದೇ ಇಲ್ಲ. ಚಂದನವನದ ಟಾಪ್ ನಟಿಯಾಗಿ ಗುರುತಿಸಿಕೊಂಡರು.
ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 20 ವರ್ಷ ಆದ ಬೆನ್ನಲ್ಲೆ ತಮ್ಮ ಮೊದಲ ಸಿನಿಮಾಕ್ಕೆ ಸಂಬಂಧಿಸಿದ ಕೆಲವು ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ ರಮ್ಯಾ, ಸಿನಿಮಾ ಚಿತ್ರೀಕರಣದ ಮೊದಲ ದಿನ ಬಹಳ ಅತ್ತಿದ್ದೆ ಏಕೆಂದರೆ ನಾನು ಅಂದು ಬಹಳ ನರ್ವಸ್ ಆಗಿದ್ದೆ. ಅದಾದ ಬಳಿಕ ಚಿತ್ರೀಕರಣದ ಕೊನೆಯ ದಿನವೂ ಬಹಳ ಅತ್ತಿದ್ದೆ ಏಕೆಂದರೆ ಇಡೀ ತಂಡವನ್ನು ನಾನು ಬಹಳ ಹಚ್ಚಿಕೊಂಡು ಬಿಟ್ಟಿದ್ದೆ ಎಂದು ಅಭಿ ಸಿನಿಮಾ ಚಿತ್ರೀಕರಣದ ಮೊದಲ ಹಾಗೂ ಕೊನೆಯ ದಿನದ ನೆನಪು ಮಾಡಿಕೊಂಡಿದ್ದಾರೆ.
”ನನ್ನ ಮೊದಲ ಚಿತ್ರ ,ಅಪ್ಪು ಅವರ ಜೊತೆಗಿನ ‘ಅಭಿ’ ಬಿಡುಗಡೆ ಆಗಿ ಇಂದಿಗೆ 20 ವರ್ಷಗಳು. ನನ್ನ ಅಭಿಮಾನಿಗಳ ಹಾಗೂ ಹಿತೈಷಿಗಳ ಕಡೆಯಿಂದ ಇಲ್ಲಿಯವರೆಗೂ ನಾನು ಪಡೆದಿರುವ ನಿರಂತರ ಪ್ರೀತಿಗೆ ನನ್ನ ಹೃದಯವು ಕೃತಜ್ಞತೆಯಿಂದ ತುಂಬಿದೆ.ನನಗೆ ಅವಕಾಶ ಕೊಟ್ಟ ರಾಜ್ ಕುಟುಂಬಕ್ಕೆ ನಾನು ಸದಾ ಚಿರಋಣಿ ಮತ್ತು ನನ್ನ ಸುದೀರ್ಘ ಸಿನಿ ಪಯಣದಲ್ಲಿ ನನ್ನೊಂದಿಗೆ ಕೆಲಸ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು” ಎಂದು ಬರೆದುಕೊಂಡಿರುವ ರಮ್ಯಾ. ಕೊನೆಯಲ್ಲಿ ವಿಶೇಷ ಸೂಚನೆಯಾಗಿ, ಅಪ್ಪು ನನ್ನ ಮೊತ್ತ ಮೊದಲ ಆತ್ಮೀಯ ಗೆಳೆಯನಾಗಿ ಹಾಗೂ ನನ್ನ ಅತ್ಯಂತ ಮೆಚ್ಚಿನ ಸಹನಟನಾಗಿ ಸದಾ ಕಾಲ ಉಳಿಯಲಿದ್ದಾರೆ ಎಂದಿದ್ದಾರೆ.
ನಟಿ ರಮ್ಯಾ ಈವೆರೆಗೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವೇ ಅಲ್ಲದೆ ತೆಲುಗು, ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರುಗಳೊಟ್ಟಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಹಠಾತ್ತನೇ ರಾಜಕೀಯ ಪ್ರವೇಶಿಸಿ ಚಿತ್ರರಂಗದಿಂದ ದೂರವಾದ ರಮ್ಯಾ ಇದೀಗ ಮತ್ತೆ ಚಿತ್ರರಂಗಕ್ಕೆ ಮರಳಿದ್ದು ಆಪಲ್ ಬಾಕ್ಸ್ ಹೆಸರಿನ ನಿರ್ಮಾಣ ಸಂಸ್ಥೆಯ ಮೂಲಕ ಸ್ವಾತಿ ಮುತ್ತಿನ ಮಳೆ ಹನಿಯೇ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಸಿನಿಮಾಗಳಲ್ಲಿ ನಟನೆಯನ್ನೂ ಮಾಡುತ್ತಿದ್ದು ಡಾಲಿ ಧನಂಜಯ್, ಶಿವರಾಜ್ ಕುಮಾರ್ ನಟನೆಯ ಉತ್ತರಕಾಂಡ ಸಿನಿಮಾದ ಮೂಲಕ ನಟನೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ