Puneeth Rajkumar: ಅಳುತ್ತಾ ಅಪ್ಪು ಬಗ್ಗೆ ಮಾತಾಡಿದ ರಮ್ಯಾ; ಕೆಲವೇ ದಿನಗಳ ಹಿಂದೆ ನಡೆದಿತ್ತು ಕಮ್​ಬ್ಯಾಕ್​​ ಚರ್ಚೆ​

| Updated By: ಮದನ್​ ಕುಮಾರ್​

Updated on: Oct 30, 2021 | 4:26 PM

ಹಲವು ವರ್ಷಗಳಿಂದ ರಮ್ಯಾ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದರು. ತಮ್ಮ ಸಿನಿಮಾದ ಮೂಲಕವೇ ರಮ್ಯಾ ಕಮ್​ಬ್ಯಾಕ್​ ಮಾಡಬೇಕು ಎಂದು ಪುನೀತ್​ ಆಸೆಪಟ್ಟಿದ್ದರು.

Puneeth Rajkumar: ಅಳುತ್ತಾ ಅಪ್ಪು ಬಗ್ಗೆ ಮಾತಾಡಿದ ರಮ್ಯಾ; ಕೆಲವೇ ದಿನಗಳ ಹಿಂದೆ ನಡೆದಿತ್ತು ಕಮ್​ಬ್ಯಾಕ್​​ ಚರ್ಚೆ​
ರಮ್ಯಾ, ಪುನೀತ್​ ರಾಜ್​ಕುಮಾರ್​
Follow us on

ನಟಿ ರಮ್ಯಾ ಮತ್ತು ಪುನೀತ್​ ರಾಜ್​ಕುಮಾರ್​ ನಡುವೆ ಒಳ್ಳೆಯ ಗೆಳೆತನ ಇತ್ತು. ಹಲವು ವರ್ಷಗಳಿಂದ ಅವರಿಬ್ಬರು ಸ್ನೇಹಿತರಾಗಿದ್ದರು. ಮೂರು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ ಸ್ನೇಹಿತನನ್ನು ಕಳೆದುಕೊಂಡ ದುಃಖದಲ್ಲಿ ರಮ್ಯಾ ಕಣ್ಣೀರು ಹಾಕಿದ್ದಾರೆ. ಕಂಠೀರವ ಸ್ಟೇಡಿಯಂಗೆ ಆಗಮಿಸಿದ ಅವರು ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿ ನೆನಪುಗಳನ್ನು ಮೆಲುಕು ಹಾಕಿದರು. ಹಲವು ವರ್ಷಗಳಿಂದ ರಮ್ಯಾ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದರು. ತಮ್ಮ ಸಿನಿಮಾದ ಮೂಲಕವೇ ರಮ್ಯಾ ಕಮ್​ಬ್ಯಾಕ್​ ಮಾಡಬೇಕು ಎಂದು ಪುನೀತ್​ ಆಸೆಪಟ್ಟಿದ್ದರು ಎಂಬ ವಿಷಯವನ್ನು ‘ಸ್ಯಾಂಡಲ್​ವುಡ್​’ ಕ್ವೀನ್​ ಈಗ ಹೇಳಿಕೊಂಡಿದ್ದಾರೆ.

‘ಅಭಿ’, ‘ಅರಸು’ ಮತ್ತು ‘ಆಕಾಶ್​’ ಚಿತ್ರಗಳಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದರು. ‘ಅಪ್ಪು ಅವರನ್ನು ಕಳೆದುಕೊಂಡಿರುವುದು ನನಗೆ ತುಂಬ ಬೇಸರ ಆಗುತ್ತಿದೆ. ಅವರು ನನಗೆ ಸಹನಟ ಮಾತ್ರ ಅಲ್ಲ, ಒಳ್ಳೆಯ ಫ್ರೆಂಡ್​ ಕೂಡ ಆಗಿದ್ದರು. ನಾನು ಅವರ ಜೊತೆ ಮೂರು ಸಿನಿಮಾ ಮಾಡಿದ್ದೇನೆ. ಅವರ ಬ್ಯಾನರ್​ನಿಂದ ಪ್ರತಿಯೊಂದು ಹೊಸ ಸಿನಿಮಾ ಬಂದಾಗಲೂ ನನಗೆ ಮೊದಲ ಆದ್ಯತೆ ನೀಡುತ್ತಿದ್ದರು. ನಾನು ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋದಾಗಲೂ ನನ್ನ ಜೊತೆ ಸಂಪರ್ಕದಲ್ಲಿ ಇದ್ದರು’ ಎಂದಿದ್ದಾರೆ ರಮ್ಯಾ.

‘ಪುನೀತ್​ ಜೊತೆ ನಾನು ಯಾವಾಗಲೂ ಮಾತನಾಡುತ್ತಿದ್ದೆ. ಕೇವಲ ಮೂರು ವಾರಗಳ ಹಿಂದೆ ನಾನು ಮಾತನಾಡಿದ್ದೆ. ನೀನು ಕಮ್​ಬ್ಯಾಕ್​ ಮಾಡಿದರೆ ನನ್ನ ಜೊತೆಗೆ ಸಿನಿಮಾ ಮಾಡಬೇಕು ಅಂತ ಅವರು ಹೇಳುತ್ತಿದ್ದರು. ನನಗೆ ತುಂಬಾ ಬೇಜಾರಾಗುತ್ತಿದೆ. ಏನು ಹೇಳಬೇಕಂತಲೇ ಗೊತ್ತಾಗುತ್ತಿಲ್ಲ. ಈ ಸಂದರ್ಭದಲ್ಲಿ ಅವರ ಪತ್ನಿ ಅಶ್ವಿನಿಗೆ ಮತ್ತು ಅವರ ಇಡೀ ಕುಟುಂಬಕ್ಕೆ ದೇವರು ದೈರ್ಯ ಕೊಡಲಿ ಅಂತ ಬೇಡಿಕೊಳ್ಳುತ್ತೇನೆ’ ಎಂದು ರಮ್ಯಾ ಹೇಳಿದ್ದಾರೆ.

ಶುಕ್ರವಾರ (ಅ.29) ಪುನೀತ್​ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಸೋಶಿಯಲ್​ ಮೀಡಿಯಾ ಮೂಲಕವೂ ರಮ್ಯಾ ಪ್ರತಿಕ್ರಿಯಿಸಿದ್ದರು.  ‘ಸಿನಿಮಾರಂಗದಲ್ಲಿ ಪುನೀತ್​ ನನಗೆ ಅತ್ಯಂತ ಆಪ್ತ ಸ್ನೇಹಿತ. ಅವರಿಗೂ ಅವರ ಪರಿವಾರದವರಿಗೂ ಎಂದೆಂದಿಗೂ ನನ್ನ ಅತ್ಯಂತ ಪ್ರೀತಿಪೂರ್ವಕ ಹಾಗೂ ಹೃದಯದಾಳದ ಗೌರವ ನಮನಗಳು. ಕೇವಲ ಇನ್​ಸ್ಟಾಗ್ರಾಮ್ ಪೋಸ್ಟ್ ಅಥವಾ ಟ್ವೀಟ್​ ಮೂಲಕ ಭಾವನೆಗಳನ್ನು ಹೇಳಲಾಗದು. ಅವರ ಕುಟುಂಬವನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತೇನೆ. ಅಪ್ಪು ನೀವು ಎಂದೆಂದಿಗೂ ಮಾಸದ ನೆನಪು. ಸದಾ ನನ್ನ ನೆನಪಿನಲ್ಲಿ ಎಂದೆಂದೂ ಇರುವಿರಿ ಅಪ್ಪು’ ಎಂದು ಸೋಶಿಯಲ್​ ಮೀಡಿಯಾದಲ್ಲಿ ರಮ್ಯಾ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಇದನ್ನೂ ಓದಿ:

‘ಪುನೀತ್​ ಸಾವಿನಿಂದ ಕಟು ಸತ್ಯ ಬಯಲಾಗಿದೆ’: ಆತಂಕದಲ್ಲೇ ಅನಿಸಿಕೆ ಹಂಚಿಕೊಂಡ ರಾಮ್​ ಗೋಪಾಲ್​ ವರ್ಮಾ

Puneeth Rajkumar: ಪುನೀತ್​ ಹೃದಯಾಘಾತದ ವೈರಲ್​ ವಿಡಿಯೋ ಅಸಲಿಯೋ ನಕಲಿಯೋ? ಇಲ್ಲಿದೆ ಫ್ಯಾಕ್ಟ್​ ಚೆಕ್​