ನಟಿ ರಶ್ಮಿಕಾ ಮಂದಣ್ಣ ಅವರಿಗೆ ಟ್ರೋಲ್ (Troll) ಕಾಟ ಇಂದು ನಿನ್ನೆಯದಲ್ಲ. ವೃತ್ತಿಜೀವನ ಆರಂಭಿಸಿದ ದಿನದಿಂದಲೂ ಅವರು ಅನೇಕರಿಂದ ಕಟು ಟೀಕೆ ಎದುರಿಸುತ್ತಲೇ ಬರುತ್ತಿದ್ದಾರೆ. ಈ ಕುರಿತು ಈಗ ತಮ್ಮ ಅಳಲು ತೋಡಿಕೊಂಡಿದ್ದಾರೆ. ಟ್ರೋಲ್ ಮತ್ತು ನೆಗೆಟಿವಿಟಿ ಕಾರಣದಿಂದ ನಮಗೆ ಆಗಿರುವ ತೊಂದರೆ ಕುರಿತು ಅವರು ಬಹಿರಂಗ ಪತ್ರ ಬರೆದಿದ್ದಾರೆ. ಅದಕ್ಕೆ ನಟಿ ರಮ್ಯಾ (Ramya Divya Spandana) ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ರಶ್ಮಿಕಾ ಬರೆದುಕೊಂಡ ಸಾಲುಗಳ ಬಗ್ಗೆ ರಮ್ಯಾ ಸಹಮತ ಸೂಚಿಸಿದ್ದಾರೆ. ಟ್ರೋಲ್ ಕುರಿತು ತಮ್ಮ ಅನಿಸಿಕೆ ಏನು ಎಂಬುದನ್ನು ಅವರು ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಪೋಸ್ಟ್ ವೈರಲ್ ಆಗಿದೆ. ದುಲ್ಕರ್ ಸಲ್ಮಾನ್, ತಾನ್ಯಾ ಹೋಪ್ ಮುಂತಾದವರು ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ರಮ್ಯಾ ಅವರು ಮತ್ತೆ ನಟನೆಗೆ ಮರಳಿದ್ದಾರೆ. ನಿರ್ಮಾಪಕಿ ಆಗಿಯೂ ಅವರು ಚಿತ್ರರಂಗದಲ್ಲಿ ಹೊಸ ಜರ್ನಿ ಆರಂಭಿಸಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಕ್ಕೆ ಅವರು ಬಂಡವಾಳ ಹೂಡುತ್ತಿದ್ದಾರೆ. ಡಾಲಿ ಧನಂಜಯ್ ಜೊತೆಗೆ ‘ಉತ್ತರಕಾಂಡ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನೇಕ ಚಿತ್ರತಂಡಗಳಿಗೆ ಬೆನ್ನು ತಟ್ಟುತ್ತಿದ್ದಾರೆ. ಚಿತ್ರರಂಗದ ಹಲವು ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಈಗ ರಶ್ಮಿಕಾ ಕುರಿತು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
‘ಟ್ರೋಲಿಂಗ್ ಎಂಬುದು ಕೆಟ್ಟದ್ದು. ಜನರ ಜೀವನದ ಬಗ್ಗೆ ನಾವು ಅಭಿಪ್ರಾಯಗಳನ್ನು ಹೇರೋಕೆ ಆಗಲ್ಲ. ವಾಸ್ತವ ಏನು ಎಂಬುದು ಆ ವ್ಯಕ್ತಿಗೆ ಮಾತ್ರ ಗೊತ್ತಿರುತ್ತದೆ. ಅವರ ಪಾಡಿಗೆ ಅವರನ್ನು ಇರಲು ಬಿಡಿ’ ಎಂದು ರಮ್ಯಾ ಬರೆದುಕೊಂಡಿದ್ದಾರೆ.
ರಶ್ಮಿಕಾ ಪೋಸ್ಟ್ ಮಾಡಿದ್ದು ಏನು?
‘ಇತ್ತೀಚಿನ ವರ್ಷಗಳಲ್ಲಿ ನನಗೆ ಕೆಲವು ವಿಚಾರಗಳು ಸಾಕಷ್ಟು ತೊಂದರೆ ನೀಡಿವೆ. ಈ ಬಗ್ಗೆ ನಾನು ಮೊದಲೇ ಮಾತನಾಡಬೇಕಿತ್ತು’ ಎಂದು ರಶ್ಮಿಕಾ ಮಂದಣ್ಣ ಅವರು ಬರಹ ಆರಂಭಿಸಿದ್ದಾರೆ. ‘ವೃತ್ತಿ ಜೀವನ ಆರಂಭ ಆದಾಗಿನಿಂದಲೂ ನನ್ನನ್ನು ದ್ವೇಷಿಸಲಾಗುತ್ತಿದೆ. ಟ್ರೋಲ್ ಮತ್ತು ನೆಗೆಟಿವಿಟಿಗೆ ನಾನು ಪಂಜಿಂಗ್ ಬ್ಯಾಗ್ ರೀತಿ ಆಗಿದ್ದೇನೆ. ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ಹಾಗಿದೆ. ಎಲ್ಲರೂ ನನ್ನನ್ನು ಪ್ರೀತಿಸಲೇಬೇಕು ಅಂತೇನಿಲ್ಲ. ನನ್ನ ಬಗ್ಗೆ ನಿಮಗೆ ಸಹಮತ ಇಲ್ಲ ಎಂದಮಾತ್ರಕ್ಕೆ ನೀವು ನೆಗೆಟಿವಿಟಿ ಹಬ್ಬಿಸಬಹುದು ಅಂತ ಅರ್ಥವಲ್ಲ’ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
‘ನಿಮ್ಮೆಲ್ಲರನ್ನು ರಂಜಿಸಲು ನಾನು ಸತತ ಶ್ರಮಪಡುತ್ತಿದ್ದೇನೆ. ಆ ಕೆಲಸದ ಬಗ್ಗೆ ನಾನು ಹೆಚ್ಚು ಯೋಚಿಸುತ್ತೇನೆ. ನಾನು ಮತ್ತು ನೀವು ಇಬ್ಬರೂ ಹೆಮ್ಮೆ ಪಡುವಂತಹ ಕೆಲಸ ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ. ನಾನು ಹೇಳಿಲ್ಲದೇ ಇರುವ ವಿಚಾರಕ್ಕೆ ನನ್ನನ್ನು ಟ್ರೋಲ್ ಮಾಡುತ್ತಿರುವುದು ನಿಜಕ್ಕೂ ನೋವಿನ ಸಂಗತಿ’ ಎಂದು ರಶ್ಮಿಕಾ ಅವರು ತಮ್ಮ ಬೇಸರ ತೋಡಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:06 pm, Wed, 9 November 22