Rashmika Mandanna: ರಶ್ಮಿಕಾ ಮಂದಣ್ಣ ಸಿನಿ ಜರ್ನಿ ಹೇಗಿತ್ತು? ಕೆಲವೇ ವರ್ಷಗಳಲ್ಲಿ ಎಲ್ಲವೂ ಬದಲಾಯ್ತು
Rashmika Mandanna Birthday: 2016ರಲ್ಲಿ ರಿಲೀಸ್ ಆದ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಅವರು ಬಣ್ಣದ ಬದುಕು ಆರಂಭಿಸಿದರು. ರಕ್ಷಿತ್ ಶೆಟ್ಟಿ ನಟನೆಯ, ರಿಷಬ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ಇದರಿಂದ ಅವರಿಗೆ ಹಲವು ಆಫರ್ಗಳು ಹುಡುಕಿ ಬಂದವು.
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಇಂದು (ಏಪ್ರಿಲ್ 5) ಸಖತ್ ಸ್ಪೆಷಲ್. ಅವರಿಗೆ ಬರ್ತ್ಡೇ ಸಂಭ್ರಮ. ಫ್ಯಾನ್ಸ್ ಕಡೆಯಿಂದ ರಶ್ಮಿಕಾಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ರಶ್ಮಿಕಾ ಮಂದಣ್ಣ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಆರಂಭದಲ್ಲಿ ಕರ್ನಾಟಕದ ಕ್ರಶ್ ಆಗಿದ್ದ ಅವರು ನಂತರ ನ್ಯಾಷನಲ್ ಕ್ರಶ್ ಎಂದು ಫೇಮಸ್ ಆದರು. ರಶ್ಮಿಕಾ ಅವರ ಜನಪ್ರಿಯತೆ ಸದ್ಯಕ್ಕೆ ಕಡಿಮೆ ಆಗುವಂಥದ್ದಲ್ಲ. ಅವರು ಬರ್ತ್ಡೇನ ಈ ಬಾರಿ ಅಬುಧಾಬಿಯಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ವಿಜಯ್ ದೇವರಕೊಂಡ ಕೂಡ ರಶ್ಮಿಕಾಗೆ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ. ರಶ್ಮಿಕಾ ಅವರ ಸಿನಿ ಜರ್ನಿ ಬಗ್ಗೆ ಇಲ್ಲಿದೆ ಮಾಹಿತಿ.
2016ರಲ್ಲಿ ರಿಲೀಸ್ ಆದ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಅವರು ಬಣ್ಣದ ಬದುಕು ಆರಂಭಿಸಿದರು. ರಕ್ಷಿತ್ ಶೆಟ್ಟಿ ನಟನೆಯ, ರಿಷಬ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ಇದರಿಂದ ಅವರಿಗೆ ಹಲವು ಆಫರ್ಗಳು ಹುಡುಕಿ ಬಂದವು. 2017ರಲ್ಲಿ ಅವರು ಪುನೀತ್ ರಾಜ್ಕುಮಾರ್ ಜೊತೆ ‘ಅಂಜನಿ ಪುತ್ರ’ ಸಿನಿಮಾದಲ್ಲಿ ನಟಿಸಿದರು. 2018ರಲ್ಲಿ ‘ಚಲೋ’ ಸಿನಿಮಾದಲ್ಲಿ ನಟಿಸಿ ತೆಲುಗು ಚಿತ್ರರಂಗದ ಕ್ರಶ್ ಆದರು.
2018ರಲ್ಲಿ ರಿಲೀಸ್ ಆದ ವಿಜಯ್ ದೇವರಕೊಂಡ ನಟನೆಯ ‘ಗೀತ ಗೋವಿಂದಂ’ ಸಿನಿಮಾ ರಶ್ಮಿಕಾ ವೃತ್ತಿ ಬದುಕನ್ನೇ ಬದಲಿಸಿಬಿಟ್ಟಿತ್ತು. ಇಡೀ ಸಿನಿಮಾ ಉದ್ದಕ್ಕೂ ಕಾಣಿಸಿಕೊಂಡ ಅವರು ಟಾಲಿವುಡ್ ಅಂಗಳದಲ್ಲಿ ಬೇಡಿಕೆ ಹೆಚ್ಚಿಸಿಕೊಂಡರು. ರಶ್ಮಿಕಾ ಬಣ್ಣದ ಬದುಕೇ ಈ ಸಿನಿಮಾದಿಂದ ಬದಲಾಗಿ ಹೋಯಿತು. ಈ ಚಿತ್ರದ ಬಳಿಕ ರಶ್ಮಿಕಾ ಅವರಿಗೆ ಟಾಲಿವುಡ್ನಿಂದ ಸಾಕಷ್ಟು ಆಫರ್ಗಳು ಬಂದವು.
ಅಕ್ಕಿನೇನಿ ನಾಗಾರ್ಜುನ ಜೊತೆ ‘ದೇವದಾಸ್’, ಮಹೇಶ್ ಬಾಬು ಜೊತೆ ‘ಸರಿಲೇರು ನೀಕೆವ್ವರು’, ಅಲ್ಲು ಅರ್ಜುನ್ ಜೊತೆ ‘ಪುಷ್ಪ’ ಸಿನಿಮಾಗಳಲ್ಲಿ ಅವರು ನಟಿಸಿದರು. ಅವರ ಜನಪ್ರಿಯತೆ ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ಗೆ ಮಾತ್ರ ಸೀಮಿತವಾಗಿಲ್ಲ. ಬಾಲಿವುಡ್ ಹಾಗೂ ಕಾಲಿವುಡ್ನಿಂದಲೂ ರಶ್ಮಿಕಾಗೆ ಬುಲಾವ್ ಬಂತು.
ಹಿಂದಿಯಲ್ಲಿ ಅಮಿತಾಭ್ ಬಚ್ಚನ್ (ಗುಡ್ಬೈ), ಸಿದ್ದಾರ್ಥ್ ಮಲ್ಹೋತ್ರಾ (ಮಿಷನ್ ಮಜ್ನು) ಹಾಗೂ ರಣಬೀರ್ ಕಪೂರ್ (ಅನಿಮಲ್) ಜೊತೆ ತೆರೆ ಹಂಚಿಕೊಳ್ಳೋ ಅವಕಾಶ ಅವರಿಗೆ ಸಿಕ್ಕಿದೆ. ತಮಿಳಿನಲ್ಲಿ ದಳಪತಿ ವಿಜಯ್ ಜೊತೆ ನಟಿಸಬೇಕು ಎಂಬ ಅವರ ಕನಸು ಈಡೇರಿದೆ. ಈ ವರ್ಷ ಅವರ ನಟನೆಯ ‘ಪುಷ್ಪ 2’ ಸಿನಿಮಾ ರಿಲೀಸ್ ಆಗಲಿದೆ. ಇದಲ್ಲದೆ, ‘ರೇನ್ಬೋ’, ‘ದಿ ಗರ್ಲ್ಫ್ರೆಂಡ್’, ‘ಚಾವಾ’ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಜನ್ಮದಿನಕ್ಕೆ ಗರ್ಲ್ಫ್ರೆಂಡ್ ಕಡೆಯಿಂದ ಸಿಗುತ್ತಾ ವಿಶೇಷ ಗಿಫ್ಟ್?
ರಶ್ಮಿಕಾ ಮಂದಣ್ಣ ಅವರು ಕೆಲವೇ ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದಾರೆ. ಅವರನ್ನು ಯಾರು ಎಷ್ಟೇ ಟ್ರೋಲ್ ಮಾಡಿದರೂ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಎಲ್ಲದಕ್ಕೂ ಅವರು ಕೆಲಸದ ಮೂಲಕವೇ ಉತ್ತರಿಸುವ ಕೆಲಸ ಮಾಡುತ್ತಿದ್ದಾರೆ. ರಶ್ಮಿಕಾ ಅವರ ಸಾಧನೆ ಅನೇಕರಿಗೆ ಸ್ಫೂರ್ತಿ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:07 am, Fri, 5 April 24