ಖ್ಯಾತ ನಟ ರವಿಚಂದ್ರನ್ ಅವರ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ (Pattammal Veeraswamy) ಅವರು ಇಂದು (ಫೆ.28) ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಪಟ್ಟಮ್ಮಾಳ್ ವೀರಸ್ವಾಮಿ ಅವರು ಕೊನೆಯುಸಿರು ಎಳೆದಿದ್ದಾರೆ. ರವಿಚಂದ್ರನ್ ತಾಯಿ (Ravichandran Mother) ನಿಧನಕ್ಕೆ ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಪಟ್ಟಮ್ಮಾಳ್ ವೀರಸ್ವಾಮಿ ಅವರನ್ನು ಫೆ.28ರ ಮುಂಜಾನೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 6.30ರ ಸುಮಾರಿಗೆ ಅವರು ನಿಧನ ಹೊಂದಿದರು. ಬೆಳಗ್ಗೆ 10.30ಕ್ಕೆ ಪಾರ್ಥಿವ ಶರೀರವನ್ನು ರಾಜಾಜಿನಗರದ ನಿವಾಸಕ್ಕೆ ತರಲಾಗುತ್ತದೆ. ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಇಂದು ಸಂಜೆಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ರವಿಚಂದ್ರನ್ (Ravichandran) ಕುಟುಂಬದವರು ತಿಳಿಸಿದ್ದಾರೆ.
ಅಂತಿಮ ದರ್ಶನ ಪಡೆಯಲಿರುವ ಸೆಲೆಬ್ರಿಟಿಗಳು:
ಕನ್ನಡ ಚಿತ್ರರಂಗಕ್ಕೆ ರವಿಚಂದ್ರನ್ ಕುಟುಂಬದವರು ನೀಡಿರುವ ಕೊಡುಗೆ ಅಪಾರ. ರವಿಚಂದ್ರನ್ ತಂದೆ ವೀರಾಸ್ವಾಮಿ ಅವರು ಹಲವಾರು ಸಿನಿಮಾಗಳನ್ನು ನಿರ್ಮಿಸಿ ಜನಪ್ರಿಯರಾಗಿದ್ದರು. ರವಿಚಂದ್ರನ್ ಕುಟುಂಬದಿಂದ ನಿರ್ಮಾಣ ಆದ ಸಿನಿಮಾಗಳಿಂದ ಭವಿಷ್ಯ ಕಟ್ಟಿಕೊಂಡ ಕಲಾವಿದರು ಮತ್ತು ತಂತ್ರಜ್ಞರ ಸಂಖ್ಯೆ ದೊಡ್ಡದಿದೆ. ಹಾಗಾಗಿ ಈ ಕುಟುಂಬದ ಮೇಲೆ ಎಲ್ಲರಿಗೂ ಅಪಾರ ಪ್ರೀತಿ, ಗೌರವ ಇದೆ. ಇಂದು ಬೆಳಗ್ಗೆ 10.30ರ ಬಳಿಕ ರವಿಚಂದ್ರನ್ ನಿವಾಸದಲ್ಲಿ ಪಟ್ಟಮ್ಮಾಳ್ ವೀರಸ್ವಾಮಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಬಂದು ಅಂತಿಮ ನಮನ ಸಲ್ಲಿಸಲಿದ್ದಾರೆ.
ರವಿಚಂದ್ರನ್ ಅವರ ತಾಯಿ ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಈ ಬಗ್ಗೆ ಟಿವಿ9 ಸಂದರ್ಶನದಲ್ಲಿ ರವಿಚಂದ್ರನ್ ಮಾತನಾಡಿದ್ದರು. ‘ಅಮ್ಮನಿಗೆ ಅಲ್ಜಮೈರ್ ಆಗಿದೆ. ಎಲ್ಲರನ್ನೂ ಆಗಾಗ ಮರೆಯುತ್ತಾರೆ. ಆದರೆ ಯಾರನ್ನು ಮರೆತರೂ ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಅವರು ಮರೆತಿಲ್ಲ. ನನ್ನ ಹೆಂಡತಿಯೇ ಅವರನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುವುದು. ಅವಳಿಗೆ ಹ್ಯಾಟ್ಸ್ ಆಫ್ ಹೇಳಬೇಕು. ಎಲ್ಲವನ್ನೂ ಹಾಸಿಗೆಯಲ್ಲೇ ಮಾಡಿಕೊಳ್ಳುವ ಅಮ್ಮನನ್ನು ನಿಭಾಯಿಸುವುದು ಅಷ್ಟು ಸುಲಭ ಅಲ್ಲ. ನನ್ನ ಹೆಂಡತಿ ಒಂದು ದಿನವೂ ಬೇಸರ ಮಾಡಿಕೊಂಡಿಲ್ಲ’ ಎಂದು ರವಿಚಂದ್ರನ್ ಹೇಳಿದ್ದರು.
ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಅಪ್ಡೇಟ್ ತಿಳಿಯಲು ಪುಟ ರೀಫ್ರೆಶ್ ಮಾಡಿ…
ಇದನ್ನೂ ಓದಿ:
ಪುನೀತ್ ಮಾವ, ಅಶ್ವಿನಿ ತಂದೆ ಹೃದಯಾಘಾತದಿಂದ ನಿಧನ; ರಾಜ್ ಕುಟುಂಬದಲ್ಲಿ ಮತ್ತೆ ಆವರಿಸಿದ ದುಃಖ
‘ಕಲಾತಪಸ್ವಿ’ ರಾಜೇಶ್ ಅಂತ್ಯಸಂಸ್ಕಾರ; ಮಾವನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಅರ್ಜುನ್ ಸರ್ಜಾ
Published On - 9:13 am, Mon, 28 February 22