ಮತ್ತೆ ಒಂದಾದ ದುನಿಯಾ ವಿಜಿ-ಎಸ್ ನಾರಾಯಣ್, ಜೊತೆಯಾದ ಮತ್ತೊಬ್ಬ ಸ್ಟಾರ್ ನಟ
Duniya Vijay: ಎಸ್ ನಾರಾಯಣ್ ನಿರ್ದೇಶನ ಮಾಡಿ ದುನಿಯಾ ವಿಜಯ್ ನಟಿಸುತ್ತಿರುವ ಮೂರನೇ ಸಿನಿಮಾ ‘ಮಾರುತ’ ಶೀಘ್ರವೇ ಚಿತ್ರೀಕರಣ ಪ್ರಾರಂಭ ಆಗಲಿದೆ. ‘ಮಾರುತ’ ಮಾಸ್ ಅಂಶಗಳುಳ್ಳ ಸಾಮಾಜಿಕ ಕಳಕಳಿಯ ಸಿನಿಮಾ ಆಗಿರಲಿದ್ದು ಈ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ಹಿರಿಯ ನಟರೊಬ್ಬರು ನಟಿಸಲಿದ್ದಾರೆ.

ದುನಿಯಾ ವಿಜಯ್ ಹಾಗೂ ಎಸ್ ನಾರಾಯಣ್ ಬಹಳ ವರ್ಷಗಳ ಬಳಿಕ ಮತ್ತೆ ಒಂದಾಗಿದ್ದಾರೆ. ‘ದುನಿಯಾ’ ಸಿನಿಮಾ ಹಿಟ್ ಆಗಿ ದುನಿಯಾ ವಿಜಿ ನಾಯಕನಾಗಿ ಚಾಲ್ತಿಗೆ ಬಂದಾಗ ಅವರಿಗಾಗಿ ‘ಚಂಡ’ ಹೆಸರಿನ ಸಿನಿಮಾವನ್ನು ಎಸ್ ನಾರಾಯಣ್ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತ್ತು. 2007 ರಲ್ಲಿ ‘ಚಂಡ’ ಸಿನಿಮಾ ಬಿಡುಗಡೆ ಆಗಿತ್ತು. ಅದಾದ ಬಳಿಕ 2015 ರಲ್ಲಿ ‘ದಕ್ಷ’ ಸಿನಿಮಾಕ್ಕಾಗಿ ಈ ಜೋಡಿ ಮತ್ತೆ ಒಂದಾಗಿತ್ತು. ‘ದಕ್ಷ’ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ‘ದಕ್ಷ’ ಸಿನಿಮಾ 2015 ರಲ್ಲಿ ಬಿಡುಗಡೆ ಆಗಿತ್ತು. ಇದೀಗ ಒಂಬತ್ತು ವರ್ಷದ ಬಳಿಕ ಮತ್ತೆ ಎಸ್ ನಾರಾಯಣ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ದುನಿಯಾ ವಿಜಿ.
ಎಸ್ ನಾರಾಯಣ್ ಹಾಗೂ ದುನಿಯಾ ವಿಜಯ್ ಅವರ ಸಿನಿಮಾಕ್ಕೆ ‘ಮಾರುತ’ ಎಂದು ಹೆಸರಿಡಲಾಗಿದ್ದು, ಈ ಸಿನಿಮಾ ಸಾಧಾರಣ ಕಮರ್ಶಿಯಲ್ ಸಿನಿಮಾ ಆಗಿರದೆ ಒಂದೊಳ್ಳೆ ಸಾಮಾಜಿಕ ಸಂದೇಶ ಕೊಡುವ ಸಿನಿಮಾ ಆಗಿರಲಿದೆಯಂತೆ. ಪ್ರತಿ ಮನೆಯಲ್ಲೂ ನಡೆಯುವ ಘಟನೆಗಳನ್ನು ಇರಿಸಿಕೊಂಡು ಹೆಣೆದಿರುವ ಕತೆ ‘ಮಾರುತ’ ಎಂದಿದ್ದಾರೆ ಎಸ್ ನಾರಾಯಣ್. ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನ ‘ಮಾರುತ’ ಸಿನಿಮಾ ಎಂದಿದ್ದಾರೆ.
ದುನಿಯಾ ವಿಜಯ್ ಹಾಗೂ ಎಸ್ ನಾರಾಯಣ್ ಕಾಂಬಿನೇಷನ್ನ ಈ ಸಿನಿಮಾಕ್ಕೆ ಇದೀಗ ಮತ್ತೊಬ್ಬ ಸ್ಟಾರ್ ಹಿರಿಯ ನಟರ ಎಂಟ್ರಿ ಆಗಿದೆ. ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ರವಿಚಂದ್ರನ್ ಅವರು ‘ಮಾರುತ’ ಸಿನಿಮಾ ತಂಡ ಸೇರಿಕೊಂಡಿದ್ದಾರೆ. ‘ಮಾರುತ’ ಸಿನಿಮಾದಲ್ಲಿ ರವಿಚಂದ್ರನ್ ಅವರಿಗೆ ಬಹಳ ಪ್ರಮುಖವಾದ ಪಾತ್ರ ಇದೆಯಂತೆ. ಸಿನಿಮಾಕ್ಕೆ ತಿರುವು ನೀಡುವ ಪಾತ್ರ ರವಿಚಂದ್ರನ್ ಅವರದ್ದಾಗಿರಲಿದೆ.
ಸಾಮಾಜಿಕ ಸಂದೇಶವುಳ್ಳ ಸಿನಿಮಾ ಆದರೂ ಇದು ಪಕ್ಕಾ ಮಾಸ್ ಸಿನಿಮಾ ಎಂದಿದ್ದಾರೆ ಎಸ್ ನಾರಾಯಣ್. ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಆಗಿದ್ದು ಪೋಸ್ಟರ್ನಲ್ಲಿ ದುನಿಯಾ ವಿಜಿ ಬಂದೂಕು ಹಿಡಿದು ನಟೋರಿಯಸ್ ಆಗಿ ಕಾಣಿಸಿಕೊಂಡಿದ್ದಾರೆ. ಎಸ್ ನಾರಾಯಣ್ ಹೇಳಿರುವಂತೆ ವಿಜಿ ಗನ್ ಹಿಡಿದಿರುವುದು ಕೊಲ್ಲಲು ಅಲ್ಲ ಬದಲಿಗೆ ಸಮಾಜವನ್ನು ಪ್ರಶ್ನೆ ಮಾಡಲು. ಈ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧಾ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ, ಚಿತ್ರಾ ಶೆಣೈ ಅವರುಗಳು ಸಿನಿಮಾದಲ್ಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ