ಸಿನಿಮಾ ಹೆಸರೇ ‘ಅಪ್ಪು ಅಭಿಮಾನಿ’; ಗಾಂಧಿನಗರದಲ್ಲಿ ತಲೆ ಎತ್ತಿದ ಕಟೌಟ್

ಪುನೀತ್ ರಾಜ್​ಕುಮಾರ್ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಹೊಸ ಸಿನಿಮಾಗಳಲ್ಲಿ ಅವರ ಮೇಲಿನ ಅಭಿಮಾನ ಎದ್ದು ಕಾಣುತ್ತಿವೆ. ಅದಕ್ಕೆ ‘ಅಪ್ಪು ಅಭಿಮಾನಿ’ ಸಿನಿಮಾವೇ ಉತ್ತಮ ಉದಾಹರಣೆ. ಈ ಸಿನಿಮಾದಲ್ಲಿ ನಟ ರವಿಕಿರಣ್ ಅವರು ಪುನೀತ್ ಫ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಸಿನಿಮಾ ಹೆಸರೇ ‘ಅಪ್ಪು ಅಭಿಮಾನಿ’; ಗಾಂಧಿನಗರದಲ್ಲಿ ತಲೆ ಎತ್ತಿದ ಕಟೌಟ್
Appu Abhimani Movie Team

Updated on: Mar 16, 2025 | 7:20 PM

ಸಿನಿಮಾಗಳ ಮೂಲಕ ಪುನೀತ್ ರಾಜ್​​ಕುಮಾರ್​ (Puneeth Rajkumar) ಅವರು ಅಜರಾಮರ ಆಗಿದ್ದಾರೆ. ಅವರನ್ನು ಫ್ಯಾನ್ಸ್ ಎಂದಿಗೂ ಮರೆಯಲು ಸಾಧ್ಯವಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅಪ್ಪು ಹೆಸರನ್ನು ಶಾಶ್ವತವಾಗಿಸುವ ಕೆಲಸ ಆಗುತ್ತಿದೆ. ಹೊಸ ಸಿನಿಮಾಗಳಲ್ಲಿ ಕೂಡ ಪುನೀತ್ ಅವರನ್ನು ಸ್ಮರಿಸಲಾಗುತ್ತಿದೆ. ಅದಕ್ಕೆ ಈಗಾಗಲೇ ಒಂದಷ್ಟು ಉದಾಹರಣೆಗಳು ಇವೆ. ಅದಕ್ಕೆ ಹೊಸದಾಗಿ ಸೇರ್ಪಡೆ ಆಗುತ್ತಿರುವುದು ‘ಅಪ್ಪು ಅಭಿಮಾನಿ’ (Appu Abhimani) ಸಿನಿಮಾ. ಹೌದು, ಈ ಚಿತ್ರದ ಶೀರ್ಷಿಕೆಯೇ ‘ಅಪ್ಪು ಅಭಿಮಾನಿ’. ಈ ಶೀರ್ಷಿಕೆಗೆ ‘ಫಾರೆವರ್​’ ಎಂಬ ಟ್ಯಾಗ್​ ಲೈನ್ ಕೂಡ ಇದೆ. ಈ ಸಿನಿಮಾದಲ್ಲಿ ರವಿಕಿರಣ್ ಅವರು ನಟಿಸುತ್ತಿದ್ದಾರೆ.

ಈ ಹಿಂದೆ ‘ತಾರಕಾಸುರ’ ಸಿನಿಮಾ ಮಾಡಿದ್ದ ರವಿಕಿರಣ್ ಅವರು ಈಗ ‘ಅಪ್ಪು ಅಭಿಮಾನಿ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಈ ಸಿನಿಮಾದ 50 ಅಡಿ ಎತ್ತರದ ಕಟೌಟ್​ ಅನ್ನು ಬೆಂಗಳೂರಿನ ಗಾಂಧಿನಗರದ ‘ನರ್ತಕಿ’ ಚಿತ್ರಮಂದಿರದ ಆವರಣದಲ್ಲಿ ನಿಲ್ಲಿಸಲಾಗಿದೆ. ಈ ಕಟೌಟ್​ನಲ್ಲಿ ನಾಯಕ ನಟ ರವಿಕಿರಣ್ ಜೊತೆ ಪುನೀತ್ ರಾಜ್​​ಕುಮಾರ್​ ಚಿತ್ರ ರಾರಾಜಿಸುತ್ತಿದೆ.

ಕಟೌಟ್ ಅನಾವರಣದ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು, ನಟ ರಾಘವೇಂದ್ರ ರಾಜ್‌ಕುಮಾರ್, ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದು, ಎಂ.ಎನ್. ಸುರೇಶ್ ಮುಂತಾದವರು ಹಾಜರಿದ್ದರು. ಇದು ಪುನೀತ್ ರಾಜ್​​ಕುಮಾರ್​ ಅವರ ಫ್ಯಾನ್ಸ್ ಸಿನಿಮಾ. ಹಾಗಾಗಿ ಅಪ್ಪು ಅಭಿಮಾನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ
ಪುನೀತ್ ಪೋಸ್ಟರ್​ಗೆ ಹಾಲಿನ ಅಭಿಷೇಕ; ‘ಅಪ್ಪು’ ಸಿನಿಮಾ ಭರ್ಜರಿ ಪ್ರದರ್ಶನ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್

ಈ ವೇಳೆ ಸಾರಾ ಗೋವಿಂದು ಅವರು ಮಾತನಾಡಿ, ‘ಅಪ್ಪು ದಿನದಂದು ರವಿಕಿರಣ್ ಸಿನಿಮಾದ ಪ್ರಚಾರ ಕಾರ್ಯ ಶುರು ಮಾಡಿರುವುದು ಖುಷಿಯ ವಿಷಯ. ಪುನೀತ್ ರಾಜ್​ಕುಮಾರ್ ಅವರಿಗೆ ಸಹಕಾರ ನೀಡಿದ ರೀತಿಯೇ ಈ ನಟನನ್ನು ಬೆಳೆಸಿ’ ಎಂದು ಮನವಿ ಮಾಡಿಕೊಂಡರು. ಈ ಚಿತ್ರದಲ್ಲಿ ನಟ ರವಿಕಿರಣ್ ಅವರು ‘ಪವರ್ ‌ಸ್ಟಾರ್’ ಪುನೀತ್‌ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: 23 ವರ್ಷಗಳ ಬಳಿಕ ಮತ್ತೆ ಫ್ಯಾನ್ಸ್ ಜತೆ ಕುಳಿತು ಅಪ್ಪು ಸಿನಿಮಾ ನೋಡಿದ ರಮ್ಯಾ

‘ಅಕ್ಷಯ ಮೂವೀ ಫ್ಯಾಕ್ಟರಿ’ ಬ್ಯಾನರ್​ ಮೂಲಕ ‘ಅಪ್ಪು ಅಭಿಮಾನಿ’ ಸಿನಿಮಾ ನಿರ್ಮಾಣ ಆಗುತ್ತಿದೆ. ಡಾ. ರೆಡ್.ಡಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಶರತ್‌ ಲೋಹಿತಾಶ್ವ, ರಾಘಣ್ಣ, ಸುಮನ್, ಥ್ರಿಲ್ಲರ್‌ ಮಂಜು, ಚಿದಾನಂದ್, ಶಿವಪ್ಪ ಕುಡ್ಲೂರು ಮುಂತಾದ ಕಲಾವಿದರು ನಟಿಸುತ್ತಿದ್ದಾರೆ. ಶೇಖ್ ಮುನೀರ್ ಪಾಷಾ ಅವರು ಕಥೆ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕೆ ಇರಲಿದೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿದಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.