ದರ್ಶನ್ ಮತ್ತು ಗ್ಯಾಂಗ್ಗೆ ನ್ಯಾಯಾಂಗ ಬಂಧನ ವಿಸ್ತರಣೆಗೆ ಪೊಲೀಸರು ನೀಡಿದ ಕಾರಣಗಳು
Renuka Swamy: ದರ್ಶನ್ ತೂಗುದೀಪ ಸೇರಿದಂತೆ ರೇಣುಕಾ ಸ್ವಾಮಿ ಕೊಲೆ ಆರೋಪಿಗಳೆಲ್ಲರಿಗೂ ಆಗಸ್ಟ್ 28ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ನೀಡಲಾಗಿದೆ. ನ್ಯಾಯಾಂಗ ಬಂಧನ ಆದೇಶ ವಿಸ್ತರಿಸಲು ಕಾರಣವಾದ ಅಂಶಗಳು ಯಾವುವು? ಇಲ್ಲಿದೆ ಮಾಹಿತಿ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಕಳೆದ ಎರಡು ತಿಂಗಳಿನಿಂದಲೂ ಜೈಲುವಾಸಿಯಾಗಿರುವ ದರ್ಶನ್ ಮತ್ತು ಸಂಗಡಿಗರಿಗೆ ಬುಧವಾರ ಮತ್ತೆ ನಿರಾಸೆಯಾಗಿದೆ. ನ್ಯಾಯಾಲಯವು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಆಗಸ್ಟ್ 28ರ ವರೆಗೆ ಮುಂದೂಡಿದೆ. ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಏಕೆ ಮುಂದುವರೆಸಬೇಕು ಎಂದು ಪೊಲೀಸರು ಕೆಲವು ಕಾರಣಗಳನ್ನು ನ್ಯಾಯಾಲಯಕ್ಕೆ ನೀಡಿದ್ದರು. ಆ ಕಾರಣಗಳನ್ನು ಪರಿಗಣಿಸಿ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿದರು. ಪೊಲೀಸರು ನ್ಯಾಯಾಲಯಕ್ಕೆ ನೀಡಿದ ಕಾರಣಗಳು ಈ ಕೆಳಕಂಡಂತಿವೆ.
ಇದನ್ನೂ ಓದಿ:‘ದರ್ಶನ್ ಸಲುವಾಗಿ ಪೂಜೆ ಅಂದಿದ್ರೆ ನಾನು ಬರುತ್ತಿರಲಿಲ್ಲ’: ಜಗ್ಗೇಶ್ ನೇರ ಮಾತು
1) ಆರೋಪಿಗಳು ಕೊಲೆಯಲ್ಲಿ ಭಾಗಿಯಾಗಿದ್ದು FSL ವರದಿಯಲ್ಲಿ ಬಹುತೇಕ ದೃಢವಾಗಿದೆ. ಈಗಾಗಲೇ ಕೆಲವು ಎಫ್ಎಸ್ಎಲ್ ವರದಿಗಳು ಬಂದಿವೆ. ಇನ್ನೂ ಕೆಲವು ವರದಿಗಳು ಬರಬೇಕಿವೆ.
2) ಪ್ರಕರಣ ಸಂಬಂಧ ಇನ್ನೂ ಹಲವರ ವಿಚಾರಣೆ ಬಾಕಿ ಇದೆ, ಸೆಕ್ಷನ್ 164 ರ ಅಡಿಯಲ್ಲಿ ಕೆಲವು ಸಾಂದರ್ಭಿಕ ಸಾಕ್ಷಿಗಳ ಹೇಳಿಕೆ ಬಾಕಿ ಇದೆ.
3) ಆರೋಪಿಗಳು ಪ್ರಭಾವಿಗಳಾಗಿದ್ದು ಮೃತ ರೇಣುಕಾ ಸ್ವಾಮಿಯ ಕುಟುಂಬಕ್ಕೆ ಆಮಿಷ ಅಥವಾ ಬೆದರಿಕೆ ಸಾಧ್ಯತೆ ಇದೆ.
4) ಮತ್ತಷ್ಟು ಟೆಕ್ನಿಕಲ್ ಸಾಕ್ಷಿಗಳನ್ನು CFSL ಪರೀಕ್ಷೆಗೆಂದು ಕಳಿಸಿದ್ದು ಅವುಗಳ ವರದಿ ಬರುವುದು ಬಾಕಿ ಇದೆ.
5) ಪವಿತ್ರ, ದರ್ಶನ್ ನಿಂದ 17 ಆರೋಪಿಗಳವರೆಗೆ ಕೃತ್ಯದಲ್ಲಿ ಭಾಗಿ ಆಗಿರುವುದು ಮೇಲ್ನೋಟಕ್ಕೆ ತಿಳಿದಿದೆ. ಅಷ್ಟು ಮಂದಿಯ ವಿರುದ್ದ ಭೌತಿಕ, ತಾಂತ್ರಿಕ, ಸಾಂದರ್ಭಿಕ ಸಾಕ್ಷಿ ಪತ್ತೆ ಆಗಿದೆ.
6) ಕೊಲೆಯಲ್ಲಿ ಪ್ರತಿ ಆರೋಪಿಯ ಪಾತ್ರದದ ಬಗ್ಗೆ ತಿಳಿಯಬೇಕಿದೆ. ಕೃತ್ಯದಲ್ಲಿ ಪ್ರತಿಯೊಬ್ಬರು ವಹಿಸಿದ್ದ ಪಾತ್ರ, ಉದ್ದೇಶಗಳ ಬಗ್ಗೆ ಗೊತ್ತಾಗಬೇಕಿದೆ.
7) ಆರೋಪಿಗಳಿಗೆ ಹಣಬಲ ಇದೆ. ಆರೋಪಿಗಳು ಪ್ರಭಾವಿಗಳಾಗಿದ್ದಾರೆ. ಆರೋಪಿಗಳಿಗೆ ಜಾಮೀನು ನೀಡಿದರೆ ತೊಂದರೆ ಆಗುವ ಸಾಧ್ಯತೆ ಇದೆ. ಸಾಕ್ಷಿಗಳ ಬೆದರಿಕೆ ಹಾಕಿ ಸಾಕ್ಷಿ ನಾಶ ಸಾಧ್ಯತೆ ಇದೆ.
ಈ ಎಲ್ಲ ಕಾರಣಗಳನ್ನು ಪರಿಗಣಿಸಿ ನ್ಯಾಯಾಧೀಶರು ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳಿಗೂ ಆಗಸ್ಟ್ 28ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ್ದಾರೆ. ಸೆಪ್ಟೆಂಬರ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ ಆಗಲಿದ್ದು, ಚಾರ್ಜ್ ಶೀಟ್ ಸಲ್ಲಿಕೆ ಆದ ಬಳಿಕ ದರ್ಶನ್ ಹಾಗೂ ಇತರೆ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ