
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಪ್ರಕರಣದ 14ನೇ ಆರೋಪಿ ಮತ್ತು ದರ್ಶನ್ಗೆ ಬಹು ಆಪ್ತವಾಗಿದ್ದ ಪ್ರದೋಷ್, ಪ್ರಕರಣದಲಿ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು, ವಿಚಾರಣಾ ನ್ಯಾಯಾಲಯವು ಪ್ರದೋಷ್ಗೆ ಮಾಫಿ ಸಾಕ್ಷಿ (ಅಪ್ರೂವರ್) ಆಗಲು ಅನುಮತಿ ನೀಡಿತ್ತು. ಆದರೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಇದಕ್ಕೆ ವಿರೋಧ ವ್ಯಕ್ತಪಡಿಸಿ, ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನಿನ್ನೆ ಈ ಕುರಿತು ವಿಚಾರಣೆ ನಡೆದು, ಆದೇಶವನ್ನು ಕಾಯ್ದಿರಸಲಾಗಿತ್ತು. ಇದೀಗ ಹೈಕೋರ್ಟ್ ಆದೇಶ ಹೊರಬಿದ್ದಿದ್ದು, ದರ್ಶನ್ ಅರ್ಜಿಯನ್ನು ಭಾಗಷಃ ಪುರಸ್ಕರಿಸಿದೆ ನ್ಯಾಯಾಲಯ.
ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ, ಆದರೆ ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆಗೆ ತಡೆ ನೀಡಿಲ್ಲ. ಬದಲಿಗೆ ಮತ್ತೊಮ್ಮೆ ಆದೇಶ ಹೊರಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ. ಮಾಫಿ ಸಾಕ್ಷಿ ವಿಷಯವಾಗಿ 59ನೇ ಸಿಸಿಹೆಚ್ ಕೋರ್ಟ್ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್, ಒಂದು ವಾರದಲ್ಲಿ ಮರು ಆದೇಶ ಹೊರಡಿಸಲು ಸೂಚನೆ ನೀಡಿದೆ. ಆದರೆ ಹೊಸದಾಗಿ ವಿಚಾರಣೆ ನಡೆಸುವ ಯಾವುದೇ ಅಗ್ಯವಿಲ್ಲ ಎಂದು ಹೈಕೋರ್ಟ್ ಹೇಳಿದ್ದು, ಇದೀಗ 59ನೇ ಸಿಸಿಎಚ್ ನ್ಯಾಯಾಲಯವು ಮರು ಆದೇಶವನ್ನಷ್ಟೆ ಮಾಡಬೇಕಿದೆ.
ಇದನ್ನೂ ಓದಿ: ರೇಣುಕಾ ಸ್ವಾಮಿ ಪ್ರಕರಣ: ನಟ ದರ್ಶನ್ ಖುದ್ದು ಹಾಜರಿ ಕೋರಿ ವಕೀಲರ ಅರ್ಜಿ
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಪ್ರಮುಖ ಸಾಕ್ಷಿ (ಐವಿಟ್ನೆಸ್) ಆಗಿದ್ದು, ಪ್ರಕರಣದ ಆರಂಭದಿಂದ ಅಂತ್ಯದ ವರೆಗೆ ದರ್ಶನ್ ಹಾಗೂ ಇತರ ಆರೋಪಿಗಳ ಜೊತೆಗಿದ್ದವರು. ಪ್ರಕರಣದಲ್ಲಿ 14ನೇ ಆರೋಪಿಯಾಗಿ ಜೈಲಿನಲ್ಲಿರುವ ಪ್ರದೋಶ್, ಮಾಫಿ ಸಾಕ್ಷಿ (ಅಪ್ರೂವರ್) ಆಗುವುದಾಗಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. ಆದರೆ ಇದಕ್ಕೆ ದರ್ಶನ್ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಹಾಕಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ದರ್ಶನ್ ಅರ್ಜಿಯನ್ನು ರದ್ದು ಮಾಡಿ, ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಲು ಅನುಮತಿ ನೀಡಿತ್ತು. ಆದರೆ ದರ್ಶನ್, 59ನೇ ಸಿಸಿಎಚ್ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಇದೀಗ, ಹೈಕೋರ್ಟ್, ಸಿಸಿಎಚ್ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿದೆ. ಆ ಮೂಲಕ ದರ್ಶನ್ಗೆ ಸಣ್ಣ ಮುನ್ನಡೆಯಂತೂ ಧಕ್ಕಿದಂತಾಗಿದೆ. ಆದರೆ ಮರು ಆದೇಶದಲ್ಲಿಯೂ ಮಾಫಿ ಸಾಕ್ಷಿಗೆ ಒಪ್ಪಿಗೆ ನೀಡಿದಲ್ಲಿ ದರ್ಶನ್ಗೆ ಸಮಸ್ಯೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:04 pm, Tue, 8 September 26