ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 17 ಮಂದಿ ಆರೋಪಿಗಳಿದ್ದು ಅವರಲ್ಲಿ ನಾಲ್ಕು ಮಂದಿಗೆ ಈಗಾಗಲೇ ಜಾಮೀನು ದೊರೆತಿದೆ. ಪ್ರಕರಣದ ಎರಡನೇ ಆರೋಪಿ ದರ್ಶನ್ಗೆ ಮಧ್ಯಂತರ ಜಾಮೀನು ದೊರೆತಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜಾಮೀನಿನ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಉಳಿದ ಆರೋಪಿಗಳಿಗೆ ಇದರಿಂದ ಸಮಸ್ಯೆ ಆಗಿತ್ತು. ಪವಿತ್ರಾ ಸೇರಿದಂತೆ ಇತರ ಆರೋಪಿಗಳ ಪರ ವಾದ ಮಂಡನೆಗೆ ಸಹ ಸೂಕ್ತ ಕಾಲಾವಕಾಶ ಸಿಕ್ಕಿರಲಿಲ್ಲ. ಆದರೆ ಇಂದು (ಡಿಸೆಂಬರ್ 03) ಪವಿತ್ರಾ ಗೌಡ ಪರ ವಕೀಲರು, ಹೈಕೋರ್ಟ್ನಲ್ಲಿ ವಾದ ಮಂಡನೆ ಮಾಡಿದರು.
ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲರಾದ ಸೆಬಾಸ್ಟಿಯನ್ ಹೈಕೋರ್ಟ್ನಲ್ಲಿ ವಾದ ಮಂಡಿಸಿದರು. ಕೆಳಹಂತದ ನ್ಯಾಯಾಲಯದಲ್ಲಿಯೂ ಇವರೇ ಪವಿತ್ರಾ ಪರವಾಗಿ ವಾದಿಸಿದ್ದರು. ವಾದ ಆರಂಭಕ್ಕೂ ಮುಂಚೆಯೇ ನ್ಯಾಯಮೂರ್ತಿಗಳು ಎಷ್ಟು ಸಮಯ ವಾದ ಮಾಡಲಿದ್ದೀರಿ ಎಂದು ಕೇಳಿ ಸಮಯ ನಿಗದಿ ಮಾಡಿಬಿಟ್ಟರು, ಹಾಗಾಗಿ ಚುಟುಕಾಗಿ ಸೆಬಾಸ್ಟಿಯನ್ ಅವರು ವಾದ ಮಂಡನೆ ಮಾಡಿದರು.
ಇದನ್ನೂ ಓದಿ:ಜಾಮೀನು ಸಿಗದೇ ಪರದಾಡುತ್ತಿರುವ ಪವಿತ್ರಾ ಗೌಡ; ಡಿ.3ಕ್ಕೆ ಅರ್ಜಿ ವಿಚಾರಣೆ
ಮೊದಲಿಗೆ ಆರೋಪ ಪಟ್ಟಿಯಲ್ಲಿರುವ ಮಾಹಿತಿ ಓದಿದ ಸೆಬಾಸ್ಟಿಯನ್, ಸಾಕ್ಷಿಗಳು ನೀಡಿರುವ ಹೇಳಿಕೆಯಂತೆ ಕೇವ ಒಂದು ಬಾರಿ ಮಾತ್ರ ಪವಿತ್ರಾ ಹಲ್ಲೆ ಮಾಡಿದ್ದಾಳೆ ಆ ನಂತರ ಅವರನ್ನು ಮನೆಗೆ ಬಿಟ್ಟು ಬರಲಾಗಿದೆ. ಫೆಬ್ರವರಿಯಲ್ಲಿ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದಾನೆ, ಅದನ್ನು ನೋಡಿ ಪವಿತ್ರಾಗೆ ಆಘಾತವಾಗಿದೆ. ನೋವನ್ನು ಎ3 ಪವನ್ ಬಳಿ ತೋಡಿಕೊಂಡಿದ್ದಾಳೆ. ಆತ ಕೆಲವರ ಸಹಾಯದಿಂದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಹಲ್ಲೆ ಮಾಡಿದ್ದಾನೆ. ಎ2 ದರ್ಶನ್ ಜೊತೆ ಬಂದ ಪವಿತ್ರಾ, ರೇಣುಕಾ ಕಪಾಳಕ್ಕೆ ಹೊಡೆದಿದ್ದಾಳೆ, ಪವಿತ್ರಾ ಚಪ್ಪಲಿ ಪಡೆದುಕೊಂಡು ದರ್ಶನ್, ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾನೆ. ಕೊಲೆ ಮಾಡುವ ಉದ್ದೇಶದಿಂದ ರೇಣುಕಾ ಸ್ವಾಮಿಯನ್ನು ಕರೆದುಕೊಂಡು ಬರಲಾಗಿಲ್ಲ. ಎಲ್ಲರೂ ಹೊಡೆದ ಏಟಿನಿಂದ ಆತ ಸತ್ತಿರಬಹುದು ಆದರೆ ಕೊಲೆ ಮಾಡುವುದು ಉದ್ದೇಶ ಆಗಿರಲಿಲ್ಲ’ ಎಂದು ಸೆಬಾಸ್ಟಿಯನ್ ವಾದಿಸಿದ್ದಾರೆ.
ಹಲ್ಲೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪ ಇದೆ, ಆದರೆ ಸಾಕ್ಷಿಗಳ ಹೇಳಿಕೆಯಲ್ಲಿ ಪ್ರಚೋದನೆ ನೀಡಿರುವ ಯಾವ ಅಂಶವೂ ಸಹ ಇಲ್ಲ. ಅಲ್ಲದೆ ಪವಿತ್ರಾಗೌಡ ಮಹಿಳೆಯಾಗಿದ್ದು, ಆಕೆಗೆ ಯಾವುದೇ ಅಪರಾಧದ ಹಿನ್ನೆಲೆಯಿಲ್ಲ, ಕೇವಲ ಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡಿದ ಉದಾಹರಣೆಗಳು ಇವೆ. ಪತಿಯನ್ನೇ ಕೊಂದ ಪತ್ನಿಗೂ ಸಹ ಮಹಿಳೆ ಎಂಬ ಕಾರಣಕ್ಕೆ ಜಾಮೀನು ಸಿಕ್ಕಿದೆ. ಪವಿತ್ರಾಗೌಡಗೆ 9ನೇ ತರಗತಿ ಓದುತ್ತಿರುವ ಮಗಳಿದ್ದಾಳೆ, ಹೀಗಾಗಿ ಜಾಮೀನು ನೀಡಬೇಕು ಎಂದು ಸೆಬಾಸ್ಟಿಯನ್ ಮನವಿ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Tue, 3 December 24