AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎ ಸಿನಿಮಾ ನೋಡಿದವರೆಲ್ಲ ಡಬ್ಬಾ ಎಂದಿದ್ರು: ಆ ದಿನಗಳ ಬಗ್ಗೆ ಉಪ್ಪಿ ಅಚ್ಚರಿಯ ಮಾತು

ಉಪೇಂದ್ರ ಮಾಡುವ ಸಿನಿಮಾಗಳು ಪ್ರೇಕ್ಷಕರಿಗೆ ಸುಲಭವಾಗಿ ಅರ್ಥ ಆಗಲ್ಲ ಎಂಬ ವಾದ ಹಲವರದ್ದು. ಆ ಮಾತಿಗೆ ಈಗ ಸ್ವತಃ ಉಪೇಂದ್ರ ಅವರು ಉತ್ತರ ನೀಡಿದ್ದಾರೆ. ‘ಯುಐ’ ಸಿನಿಮಾದ ಸುದ್ದಿಗೋಷ್ಠಿ ನಡೆದಿದೆ. ಈ ವೇಳೆ ಉಪೇಂದ್ರ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ‘ಎ’ ಸಿನಿಮಾ ಕುರಿತು ಇಂಟರೆಸ್ಟಿಂಗ್ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.

ಎ ಸಿನಿಮಾ ನೋಡಿದವರೆಲ್ಲ ಡಬ್ಬಾ ಎಂದಿದ್ರು: ಆ ದಿನಗಳ ಬಗ್ಗೆ ಉಪ್ಪಿ ಅಚ್ಚರಿಯ ಮಾತು
ಚಾಂದಿನಿ, ಉಪೇಂದ್ರ
ಮದನ್​ ಕುಮಾರ್​
|

Updated on: Dec 02, 2024 | 7:26 PM

Share

ಕನ್ನಡ ಚಿತ್ರರಂಗದಲ್ಲಿ ‘ಎ’ ಸಿನಿಮಾಗೆ ವಿಶೇಷ ಸ್ಥಾನ ಇದೆ. ತುಂಬ ಹೊಸ ರೀತಿಯಲ್ಲಿ ಸಿನಿಮಾ ಮಾಡಬಹುದು ಎಂಬುದನ್ನು ಉಪೇಂದ್ರ ತೋರಿಸಿಕೊಟ್ಟಿದ್ದೇ ‘ಎ’ ಸಿನಿಮಾ ಮೂಲಕ. ಆ ಬಗ್ಗೆ ಅವರು ಈಗ ಒಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಉಪ್ಪಿ ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ಡಿಸೆಂಬರ್​ 20ರಂದು ಬಿಡುಗಡೆ ಆಗಲಿದ್ದು, ಆ ಬಗ್ಗೆ ಮಾತನಾಡಲು ಇಂದು (ಡಿ.2) ಸುದ್ದಿಗೋಷ್ಠಿ ನಡೆಸಲಾಯಿತು. ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಉಪೇಂದ್ರ ಅವರು ‘ಎ’ ಸಿನಿಮಾದ ಬಗ್ಗೆ ಮಾತನಾಡಿದರು.

‘ಯುಐ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಸಸ್ಪೆನ್ಸ್ ಇರುತ್ತದೆ. ಪ್ರೇಕ್ಷಕರು ಸ್ವಲ್ಪ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಪ್ರೇಕ್ಷಕರಿಗೆ ಅರ್ಥ ಆಗುತ್ತದೆ ಎಂಬ ನಂಬಿಕೆ ನನಗೆ ಇದೆ. ಆ ನಂಬಿಕೆಯಿಂದಲೇ ನಾನು ಈ ಸಿನಿಮಾ ಮಾಡಿರುವುದು. ಸರ್ ಇದು ಜನರಿಗೆ ಅರ್ಥ ಆಗುತ್ತಾ ಎಂದು ನನ್ನ ಜೊತೆಯಲ್ಲಿ ಇರುವವರು ಕೇಳುತ್ತಾ ಇರುತ್ತಾರೆ. ನಾನು ಅಂಥವರಿಗೆ ಹೇಳುವುದು ಏನೆಂದರೆ, ಪ್ರೇಕ್ಷಕರು ನಮಗಿಂತ ಮೇಲೆ ಇರುತ್ತಾರೆ’ ಎಂದಿದ್ದಾರೆ ಉಪೇಂದ್ರ.

‘ಇದು ನಾನು ಕಂಡುಕೊಂಡಿರುವ ಸತ್ಯ. ನಾವು 10 ಮೆಟ್ಟಿಲು ಮೇಲಿದ್ದರೆ, ಪ್ರೇಕ್ಷಕರು 15 ಮೆಟ್ಟಿಲು ಮೇಲೆ ಇರುತ್ತಾರೆ. ಯಾಕೆಂದರೆ ಅವರು ಮುಗ್ಧತೆಯಿಂದ ಸಿನಿಮಾ ನೋಡುತ್ತಾರೆ. ಯಾವುದೇ ತಾರತಮ್ಯ ಮನೋಭಾವ ಇಟ್ಟುಕೊಂಡು ಸಿನಿಮಾ ನೋಡಲ್ಲ. ಅದಕ್ಕೆ ನನ್ನ ‘ಎ’ ಸಿನಿಮಾನೇ ಒಂದು ಅತ್ಯುತ್ತಮ ಉದಾಹರಣೆ’ ಎಂದು ಉಪೇಂದ್ರ ಹೇಳಿದ್ದಾರೆ.

‘ನಾವು ಎ ಸಿನಿಮಾ ಮಾಡಿದಾಗ ಗಾಂಧಿನಗರದಲ್ಲಿ ಅದನ್ನು ನೋಡಿದವರೆಲ್ಲ ಡಬ್ಬಾ ಪಿಕ್ಚರ್​ ಎಂದಿದ್ದರು. ಆ ಸಿನಿಮಾಗೆ ಒಂದೇ ಒಂದು ಪಾಸಿಟಿವ್ ವಿಮರ್ಶೆ ಕೂಡ ಬಂದಿರಲಿಲ್ಲ. ಈ ಪಿಕ್ಚರ್​ಗೆ ಯಾಕೆ ಇಷ್ಟು ದೊಡ್ಡ ಥಿಯೇಟರ್​ ಬೇಕು ಸರ್​? ಈ ಸಿನಿಮಾ 2 ದಿನ ಓಡಲ್ಲ ಅಂತ ನರ್ತಕಿ ಚಿತ್ರಮಂದಿರದ ಗೇಟ್​ ಕೀಪರ್​ ಹೇಳಿದ್ದ. ಅದೆಲ್ಲ ಕೇಳಿ ನಮಗೆ ಶಾಕ್ ಆಗಿತ್ತು’ ಎಂದಿದ್ದಾರೆ ಉಪ್ಪಿ.

ಇದನ್ನೂ ಓದಿ:  ಉಪೇಂದ್ರ ಗುರು, ನಾನು ಶಿಷ್ಯ: ಯುಐ, ಮ್ಯಾಕ್ಸ್ ಕ್ಲ್ಯಾಶ್ ಬಗ್ಗೆ ಸುದೀಪ್ ಸ್ಪಷ್ಟನೆ

‘ಮೊದಲು ಸೆನ್ಸಾರ್​ಗೆ ಕಳಿಸಿದಾಗ ಬಿಡುಗಡೆ ಮಾಡಲು ಈ ಸಿನಿಮಾ ಯೋಗ್ಯವಲ್ಲ ಅಂತ ಹೇಳಿ ಸೆನ್ಸಾರ್​ ಆಫೀಸರ್​ ಎದ್ದು ಹೊರಟು ಹೋಗಿದ್ದರು. ಹೀಗೆಲ್ಲ ಆಗಿತ್ತು ಅಂದರೆ ನೀವು ನಂಬುತ್ತೀರಾ? ನಮ್ಮ ಸಿನಿಮಾದ ಫೈನಾಶಿಯರ್​ ಕೂಡ ಇಷ್ಟಪಡಲಿಲ್ಲ. ಕಡೆಗೆ ಪವಾಡ ಆಯಿತು. ಅಷ್ಟು ಕ್ಲಿಷ್ಟಕರವಾದ ಸಿನಿಮಾವನ್ನು ಪ್ರೇಕ್ಷಕರು ತುಂಬ ಚೆನ್ನಾಗಿ ಸ್ವೀಕರಿಸಿದರು. ಆಮೇಲೆ ಎಲ್ಲರೂ ಚೆನ್ನಾಗಿದೆ ಅನ್ನೋಕೆ ಶುರು ಮಾಡಿದರು. 25 ವರ್ಷಗಳ ಹಿಂದೆಯೇ ಅಂಥ ಕಾಂಪ್ಲಿಕೇಟ್​ ಸಿನಿಮಾವನ್ನು ಅರ್ಥ ಮಾಡಿಕೊಂಡ ಪ್ರೇಕ್ಷಕರು ಎಷ್ಟು ಗ್ರೇಟ್​ ಇರಬಹುದು. ಇಂದಿಗೂ ಪ್ರೇಕ್ಷಕರ ಮೇಲೆ ನನಗೆ ನಂಬಿಕೆ ಇದೆ. ಹಾಗಂತ ಬೇಕಂತಲೇ ಸಿನಿಮಾವನ್ನು ನಾನು ಕಾಂಪ್ಲಿಕೇಟ್ ಮಾಡಲ್ಲ. ಏನೋ ಹೇಳಬೇಕು ಅಂತ ಆಸೆಪಟ್ಟು ಮಾಡುತ್ತೇನೆ. ಅದು ಜನರಿಗೆ ಖಂಡಿತ ಅರ್ಥ ಆಗುತ್ತದೆ’ ಎಂದು ಉಪೇಂದ್ರ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.