ಉಪೇಂದ್ರ ಗುರು, ನಾನು ಶಿಷ್ಯ: ಯುಐ, ಮ್ಯಾಕ್ಸ್ ಕ್ಲ್ಯಾಶ್ ಬಗ್ಗೆ ಸುದೀಪ್ ಸ್ಪಷ್ಟನೆ
ಡಿಸೆಂಬರ್ ತಿಂಗಳಲ್ಲಿ ಘಟಾನುಘಟಿ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಡಿಸೆಂಬರ್ 20ರಂದು ಉಪೇಂದ್ರ ನಟನೆಯ ‘ಯುಐ’ ಸಿನಿಮಾ ತೆರೆ ಕಾಣಲಿದೆ. ಅದಾಗಿ ಐದೇ ದಿನಕ್ಕೆ, ಅಂದರೆ, ಡಿಸೆಂಬರ್ 25ರಂದು ಸುದೀಪ್ ಅಭಿನಯದ ‘ಮ್ಯಾಕ್ಸ್’ ಸಿನಿಮಾ ತೆರೆಕಾಣಲಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ.
ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಈ ವರ್ಷ ಡಿಸೆಂಬರ್ 25ರ ದಿನ ತುಂಬ ಸ್ಪೆಷಲ್. ಯಾಕೆಂದರೆ, ‘ವಿಕ್ರಾಂತ್ ರೋಣ’ ಬಳಿಕ ಸುದೀಪ್ ನಟಿಸಿದ ‘ಮ್ಯಾಕ್ಸ್’ ಚಿತ್ರ ಡಿ.25ರಂದು ಬಿಡುಗಡೆ ಆಗುತ್ತಿದೆ. ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿರುವ ಈ ಸಂದರ್ಭದಲ್ಲಿ ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ‘ಯುಐ’ ಸಿನಿಮಾದ ಜೊತೆಗಿನ ಕ್ಲ್ಯಾಶ್ ಬಗ್ಗೆ ಪ್ರಶ್ನೆ ಎದುರಾಯಿತು. ಡಿಸೆಂಬರ್ 20ರಂದು ಉಪೇಂದ್ರ ಅಭಿನಯದ ‘ಯುಐ’ ಸಿನಿಮಾ ರಿಲೀಸ್ ಆಗಲಿದೆ. ಎರಡು ಚಿತ್ರಗಳ ಬಿಡುಗಡೆ ದಿನಾಂಕಗಳ ನಡುವೆ ಇರುವುದು ಚಿಕ್ಕ ಗ್ಯಾಪ್ ಮಾತ್ರ. ಈ ಬಗ್ಗೆ ಸುದೀಪ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಉಪೇಂದ್ರ ಅವರ ಸ್ಟಾರ್ಡಮ್ ಬಗ್ಗೆ ನನಗೆ ಅನುಮಾನವೇ ಇಲ್ಲ. ಚಿತ್ರರಂಗಕ್ಕೆ ಅವರು ಬಹಳ ಕೊಡುಗೆ ನೀಡಿದ್ದಾರೆ. ನಾವೆಲ್ಲ ಅವರನ್ನು ನೋಡಿ ಕಲಿತುಕೊಂಡು ಬಂದವರು. ಉಪೇಂದ್ರ ಅವರಿಗೆ ಇಲ್ಲದೇ ಇರುವ ತಲೆ ನೋವು ನಮಗೆ-ನಿಮಗೆ ಯಾಕೆ? ಅವರೇ ಇದರ ಬಗ್ಗೆ ಎಲ್ಲಿಯೂ ಮಾತನಾಡುತ್ತಿಲ್ಲ. ಎರಡು ಕನ್ನಡ ಸಿನಿಮಾ ಬರೋಕೆ ಕಾರಣ ಇದೆ. ಕನ್ನಡ ಸಿನಿಮಾ ಬರದಿದ್ದಾಗಲೇ ಬೇರೆ ಭಾಷೆಯ ಸಿನಿಮಾಗಳ ಹಾವಳಿ ನಡೆಯೋದು’ ಎಂದರು ಸುದೀಪ್.
‘ನನ್ನ ಸಿನಿಮಾ ಅಲ್ಲ ಎಂದರೂ ಉಪೇಂದ್ರ ಅವರ ಸಿನಿಮಾವನ್ನು ದಯವಿಟ್ಟು ನಂಬಿ. ನನಗೆ ಅವರ ಮೇಲೆ ಅಪಾರ ಗೌರವ ಇದೆ. ಯಾವಾಗ ನಿರ್ದೇಶನ ಮಾಡ್ತೀರಿ ಅಂತ ನಾನು ಆಗಾಗ ಅವರನ್ನು ಒತ್ತಾಯಿಸುತ್ತಿದ್ದೆ. ಇದೇ ದಿನಾಂಕದಲ್ಲಿ ರಿಲೀಸ್ ಮಾಡಬೇಕಾ ಎಂಬುದು ನಿರ್ಮಾಪಕರ ಆಯ್ಕೆ. ಈ ರಿಲೀಸ್ನಿಂದ ಉಪೇಂದ್ರ ಅವರ ತಂಡಕ್ಕೆ ತೊಂದರೆ ಆಗಲ್ಲ. ನಮ್ಮಲ್ಲಿ ಕ್ಲ್ಯಾಶ್ ಇಲ್ಲ. ಗುರು ಬರುತ್ತಿದ್ದಾರೆ. ಸ್ವಲ್ಪ ದಿನ ಆದ್ಮೇನೆ ನಾನು ಶಿಷ್ಯನಾಗಿ ಬರುತ್ತಿದ್ದೇನೆ. ನಮ್ಮ ಚಿತ್ರರಂಗದಲ್ಲಿ ಯಾವ ಹೀರೋಗಳ ಜೊತೆಗೂ ಕ್ಲ್ಯಾಶ್ ಇಲ್ಲ’ ಎಂದು ಸುದೀಪ್ ಅವರು ಹೇಳಿದ್ದಾರೆ.
ಇದನ್ನೂ ಓದಿ: Max Release Date: ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ
‘ಮ್ಯಾಕ್ಸ್’ ಸಿನಿಮಾದಲ್ಲಿ ಸುದೀಪ್ ಅವರಿಗೆ ಹೀರೋಯಿನ್ ಇಲ್ಲ. ಆ ಬಗ್ಗೆ ಕೂಡ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಕೇಳಿಬಂತು. ಅದರ ಬಗ್ಗೆ ಸುದೀಪ್ ಮಾತನಾಡಿದರು. ‘ನಾವು ಮಹಿಳೆಯರಿಗೆ ಗೌರವ ನೀಡಬೇಕು. ಅಗತ್ಯ ಇದ್ದಾಗ ಮಾತ್ರ ಸಿನಿಮಾದಲ್ಲಿ ಹೀರೋಯಿನ್ ಇರಬೇಕು. ಇಲ್ಲದಿದ್ದರೆ ಒಂದು ಹಾಡಿಗೆ ಯಾಕೆ ಬಂದಿದ್ದೀರಿ ಅಂತ ನೀವೇ ಕೇಳುತ್ತೀರಿ. ಈ ಕಥೆಯಲ್ಲಿ ಹೀರೋಯಿನ್ ಅವಶ್ಯಕತೆ ಇರಲಿಲ್ಲ ಅಂತ ನನಗೆ ಅನಿಸಿತು. ಇದು ಒಂದು ರಾತ್ರಿಯಲ್ಲಿ ನಡೆಯುವ ಕಥೆ. ಈ ಕಥೆಯಲ್ಲಿ ಹೀರೋಯಿನ್ ಪಾತ್ರವನ್ನು ತುರುಕೋಕೆ ಆಗಲ್ಲ. ನಾನು ಬೆಳಗ್ಗೆ ಎದ್ದರೆ ಸ್ಕ್ರಿಪ್ಟ್ ಹುಡುಕುತ್ತೇನೆ, ಹೀರೋಯಿನ್ ಅಲ್ಲ’ ಎಂದಿದ್ದಾರೆ ಸುದೀಪ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:59 pm, Sun, 1 December 24