‘ನಾನು ನೂರಕ್ಕೆ ನೂರು ಸತ್ಯ ಹೇಳುತ್ತೇನೆ’; ಕೋರ್ಟ್​​ನಲ್ಲಿ ಒಪ್ಪಿಕೊಂಡ ಪ್ರದೋಷ್

Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ14 ಆರೋಪಿ ಪ್ರದೋಷ್ ಅಪ್ರೂವರ್ ಆಗಲು 59ನೇ ಸಿಸಿಹೆಚ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಯಾವುದೇ ಒತ್ತಡವಿಲ್ಲದೆ ಸತ್ಯ ಬಹಿರಂಗಪಡಿಸುವುದಾಗಿ ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರ ಮುಂದೆ ಹೇಳಿಕೆ ನೀಡಿದ್ದು, ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಲಾಗಿದೆ.

‘ನಾನು ನೂರಕ್ಕೆ ನೂರು ಸತ್ಯ ಹೇಳುತ್ತೇನೆ’; ಕೋರ್ಟ್​​ನಲ್ಲಿ ಒಪ್ಪಿಕೊಂಡ ಪ್ರದೋಷ್
ದರ್ಶನ್-ಪ್ರದೋಷ್
Edited By:

Updated on: Aug 20, 2026 | 2:33 PM

ಖ್ಯಾತ ನಟ ದರ್ಶನ್ (Darshan) ಹಾಗೂ ಗ್ಯಾಂಗ್‌ನಿಂದ ನಡೆದಿದೆ ಎನ್ನಲಾದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷ್ಯ ವಿಚಾರಣೆ 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಮುಂದುವರಿದಿದೆ. ವಿಚಾರಣೆ ವೇಳೆ ಈ ಪ್ರಕರಣದ ಎ14 ಆರೋಪಿಯಾದ ಪ್ರದೋಷ್ ತಾನು ಅಪ್ರೂವರ್ ಆಗಲು ಅರ್ಜಿ ಸಲ್ಲಿಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ವೇಳೆ ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಅರ್ಜಿಯ ಕುರಿತು ಪ್ರದೋಷ್‌ ಅವರನ್ನು ಸಾಲು ಸಾಲು ಪ್ರಶ್ನೆಗಳ ಮೂಲಕ ತೀವ್ರ ವಿಚಾರಣೆಗೆ ಒಳಪಡಿಸಿದರು.

ನ್ಯಾಯಾಧೀಶರು ಅರ್ಜಿಯ ಗಂಭೀರತೆ ಹಾಗೂ ಅದರಲ್ಲಿರುವ ವಿಷಯಗಳ ಬಗ್ಗೆ ಪ್ರಶ್ನಿಸಿದಾಗ, ‘ಅರ್ಜಿಯಲ್ಲಿ ಏನಿದೆ ಎಂಬುದನ್ನು ಸಂಪೂರ್ಣವಾಗಿ ಓದಿ ಸಹಿ ಮಾಡಿದ್ದೇನೆ. ರೇಣುಕಾಸ್ವಾಮಿ ಹತ್ಯೆ ನಡೆದಾಗ ಅದರಲ್ಲಿ ನನ್ನ ಪಾತ್ರವೇನು ಹಾಗೂ ಇತರೆ ಆರೋಪಿಗಳ ಪಾತ್ರವೇನು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದೇನೆ’ ಎಂದು ಪ್ರದೋಷ್ ಉತ್ತರಿಸಿದ್ದಾರೆ.

ಪ್ರದೋಷ್ ವಿದ್ಯಾಭ್ಯಾಸದ ಬಗ್ಗೆ ಜಡ್ಜ್ ಸುಜಾತಾ ಪ್ರಶ್ನೆ ಮಾಡಿದಾಗ ‘ನಾನು ಎಂಬಿಎ ಫೈನಾನ್ಸ್ ಓದಿದ್ದು, ಇಂಗ್ಲಿಷ್ ಓದಲು ಮತ್ತು ಬರೆಯಲು ಬರುತ್ತದೆ. ಘಟನೆಗೂ ಮುನ್ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ್ದೆ’ ಎಂದು ಪ್ರದೋಷ್ ಹೇಳಿದ್ದಾರೆ.

‘ಯಾರದ್ದಾದರೂ ಪ್ರಭಾವ ಇದೆಯೇ ಹಾಗೂ ಸತ್ಯವನ್ನು ಹೇಳುತ್ತೀರಾ’ ಎಂದು ಜಡ್ಜ್ ಕೇಳಿದ ಪ್ರಶ್ನೆಗೆ, ‘ಯಾವುದೇ ಪ್ರಭಾವ ಅಥವಾ ಒತ್ತಡಕ್ಕೆ ಒಳಗಾಗದೇ ಈ ಅರ್ಜಿ ಸಲ್ಲಿಸುತ್ತಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದ ಸತ್ಯವಾದ ಸಂಗತಿಗಳನ್ನು ನೂರಕ್ಕೆ ನೂರರಷ್ಟು ಬಹಿರಂಗಪಡಿಸುತ್ತೇನೆ’ ಎಂದು ಪ್ರದೋಷ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ

ಪ್ರದೋಷ್ ನೀಡಿರುವ ಎಲ್ಲಾ ವಿವರಣೆಗಳನ್ನು ದಾಖಲಿಸಿಕೊಂಡ ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು, ಪ್ರಕರಣದ ಮುಂದಿನ ಸಾಕ್ಷ್ಯ ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಿ ಆದೇಶಿಸಿದ್ದಾರೆ. ಅಪ್ರೂವರ್ ಕುರಿತು ಇನ್ನು ಯಾವುದೇ ಘೋಷಣೆ ಹೊರ ಬಿದ್ದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:32 pm, Thu, 20 August 26

Loading...
Unable to load recommendations.
Follow Us