Darshan- ರೇಣುಕಾಸ್ವಾಮಿ ಹತ್ಯೆ ಪ್ರಕರಣ, ವಿಚಾರಣೆ ಬೇಗ ಆಗಲಿ: ಸುಪ್ರೀಂಕೋರ್ಟ್ ಆದೇಶ

Supreme Court orders trial in Renukaswamy case to be conducted expeditiously: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಮತ್ತಿತರರಿಗೆ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದೆ. ಪ್ರಕರಣ ಬಹಳ ಗಂಭೀರ ಸ್ವರೂಪದ್ದಾಗಿದ್ದು, ವಿಚಾರಣೆ ಬೇಗ ನಡೆಯಲಿ ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ. 2024ರ ಜೂನ್ ತಿಂಗಳಲ್ಲಿ ರೇಣುಕಾಸ್ವಾಮಿಯನ್ನು ದರ್ಶನ್ ಮತ್ತವರ ಬೆಂಬಲಿಗರು 3 ದಿನ ಹಿಂಸಿಸಿ ಸಾಯಿಸಿದ ಆರೋಪ ಇದೆ.

Darshan- ರೇಣುಕಾಸ್ವಾಮಿ ಹತ್ಯೆ ಪ್ರಕರಣ, ವಿಚಾರಣೆ ಬೇಗ ಆಗಲಿ: ಸುಪ್ರೀಂಕೋರ್ಟ್ ಆದೇಶ
ರೇಣುಕಾಸ್ವಾಮಿ

Updated on: Aug 14, 2025 | 12:52 PM

ನವದೆಹಲಿ, ಅಕ್ಟೋಬರ್ 14: ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa) ಮತ್ತಿತರಿಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್ (Supreme Court) ತೀರ್ಪು ಇಡೀ ದೇಶದ ಗಮನ ಸೆಳೆದಿದೆ. ಎಲ್ಲಾ ಜೈಲು ಹಾಗೂ ಹೈಕೋರ್ಟ್​ಗಳಿಗೂ ತನ್ನ ಆದೇಶದ ಪ್ರತಿ ಕಳುಹಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ. ಇದೇ ವೇಳೆ, ದರ್ಶನ್ ಮತ್ತಿತರರು ಆರೋಪ ಎದುರಿಸುತ್ತಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy murder case) ವಿಚಾರ ತ್ವರಿತವಾಗಿ ನಡೆಯಬೇಕು ಎಂದು ನ್ಯಾಯಪೀಠ ತಿಳಿಸಿದೆ. ಇದರೊಂದಿಗೆ, 14 ತಿಂಗಳ ಹಿಂದಿನ ರೇಣುಕಾಸ್ವಾಮಿ ಕೊಲೆ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಹೋಗಿ ನಿಲ್ಲಬಹುದು ಎನ್ನುವ ಭರವಸೆ ಸಿಕ್ಕಿದೆ.

‘ಕೊಲೆಯ ಗಂಭೀರತೆಯನ್ನು ಪರಿಗಣಿಸಿ, ಟ್ರಯಲ್ ಕೋರ್ಟ್​ನಲ್ಲಿ ಸಾಕ್ಷ್ಯಗಳ ವಿಚಾರಣೆಯು ಬಹಳ ತ್ವರಿತವಾಗಿ ನಡೆಯಬೇಕು’ ಎಂದು ನ್ಯಾ| ಪರ್ದಿವಾಲಾ ಮತ್ತು ನ್ಯಾ| ಆರ್ ಮಹದೇವನ್ ಅವರಿರುವ ನ್ಯಾಯಪೀಠವು ತನ್ನ ತೀರ್ಪಿನಲ್ಲಿ ಹೇಳಿದೆ. ಪವಿತ್ರಾ ಗೌಡ, ದರ್ಶನ್, ಜಗದೀಶ್ ಅಲಿಯಾಸ್ ಜಗ್ಗ, ಅನುಕುಮಾರ್ ಅಲಿಯಾಸ್ ಅನು, ಪ್ರದೋಷ್, ನಾಗರಾಜು ಅಲಿಯಾಸ್ ನಾಗ, ಲಕ್ಷ್ಮಣ್ ಈ ಏಳು ಮಂದಿಯ ಜಾಮೀನನ್ನು ಕೋರ್ಟ್ ರದ್ದು ಮಾಡಿದೆ.

ಇದನ್ನೂ ಓದಿ: ದರ್ಶನ್ ಕೇಸ್: ಎಲ್ಲಾ ಹೈಕೋರ್ಟ್, ಜೈಲುಗಳಿಗೆ ತನ್ನ ಆದೇಶದ ಪ್ರತಿ ಹೋಗಬೇಕೆಂದ ಸುಪ್ರೀಂಕೋರ್ಟ್; ಅಂಥದ್ದೇನಿದೆ ತೀರ್ಪಿನಲ್ಲಿ?

2024ರ ಜೂನ್​ನಲ್ಲಿ ಕೊಲೆಯಾಗಿದ್ದ ರೇಣುಕಾಸ್ವಾಮಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರನ್ನು ದರ್ಶನ್ ಹಾಗು ಅವರ ಬೆಂಬಲಿಗರು ಸೇರಿ ಮೂರು ದಿನಗಳ ಕಾಲ ಹಿಂಸಿಸಿ ಹತ್ಯೆ ಮಾಡಿದ್ದರು. ಅದು 2024ರ ಜೂನ್ ತಿಂಗಳಲ್ಲಿ ನಡೆದ ಘಟನೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದು ರಾಜರಾಜೇಶ್ವರಿ ನಗರದಲ್ಲಿರುವ ಶೆಡ್​ವೊಂದರಲ್ಲಿ ಮೂರು ದಿನಗಳ ಕಾಲ ಇರಿಸಿ ನಿರಂತರವಾಗಿ ಹಿಂಸಿಸಿದ್ದರೆನ್ನಲಾಗಿದೆ. ದರ್ಶನ್ ಕೂಡ ಬಂದು ರೇಣುಕಾಸ್ವಾಮಿ ಮೇಲೆ ಎಸಗಿದ್ದರೆನ್ನುವ ಆರೋಪ ಇದೆ.

ಕೊಲೆಯಾದ ರೇಣುಕಾಸ್ವಾಮಿಯ ಶವವನ್ನು ದರ್ಶನ್ ಬೆಂಬಲಿಗರು ಬೆಂಗಳೂರಿನ ಸುಮನಹಳ್ಳಿಯ ಚರಂಡಿಯಲ್ಲಿ ಎಸೆದು ಹೋಗಿದ್ದರು. ಈ ಪ್ರಕರಣದಲ್ಲಿ ರೇಣುಕಾಸ್ವಾಮಿ ಮೇಲೆ ದರ್ಶನ್ ಹಾಗೂ ಬೆಂಬಲಿಗರು ಹಲ್ಲೆ ಮಾಡುತ್ತಿರುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಪೊಲೀಸರಿಗೆ ಸಿಕ್ಕಿದೆ. ದರ್ಶನ್ ಗೆಳತಿ ಪವಿತ್ರಾಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದೆನ್ನುವ ಕಾರಣಕ್ಕೆ ರೇಣುಕಾಸ್ವಾಮಿಗೆ ದಾರುಣ ಹಿಂಸಾಚಾರ ನೀಡಿ ಸಾಯಿಸಲಾಗಿತ್ತು. ಬಳಿಕ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ದರ್ಶನ್ ಬಳ್ಳಾರಿ ಜೈಲಿನಲ್ಲಿ 60ಕ್ಕೂ ಹೆಚ್ಚು ದಿನ ಇದ್ದರು.

ಇದನ್ನೂ ಓದಿ: ದರ್ಶನ್ ಜಾಮೀನು ರದ್ದಿಗೆ ಕಾರಣವಾದ ವಿಚಾರಗಳಿವು; ಈಗ ಯಾವ ಜೈಲು?

2024ರ ಡಿಸೆಂಬರ್ 13ರಂದು ದರ್ಶನ್ ಮತ್ತಿತರರಿಗೆ ಜಾಮೀನು ನೀಡಲಾಯಿತು. ಟ್ರಯಲ್ ಕೋರ್ಟ್​ನಲ್ಲಿ ಸಾಕ್ಷ್ಯಗಳ ವಿಚಾರಣೆ ನಡೆಯುತ್ತಿರುವಂತೆಯ ಹೈಕೋರ್ಟ್ ಜಾಮೀನು ನೀಡಿದ್ದಕ್ಕೆ ಸುಪ್ರೀಂಕೋರ್ಟ್ ಅಸಮಾಧಾನಗೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ