ಸ್ಯಾಂಡವುಡ್ ನಟ ರಕ್ಷಿತ್ ಶೆಟ್ಟಿ ಅವರು ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಹುಲಿವೇಷ ಕುಣಿದಿದ್ದಾರೆ. ಕೊರೊನಾ ವೈರಸ್ ಎರಡನೇ ಅಲೆ ಕಾರಣದಿಂದ ಉಡುಪಿಯಲ್ಲಿ ಈ ಬಾರಿ ಸರಳವಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿದೆ. ಅಷ್ಟಮಿ ಅಂದರೆ ಉಡುಪಿಯಲ್ಲಿ ಹುಲಿವೇಷಗಳ ಕಲರವ ಇದ್ದೇ ಇರುತ್ತದೆ. ಆದರೆ ಈ ಬಾರಿ ವೇಷಗಳಿಗೆ ಜಿಲ್ಲಾಡಳಿತ ಅವಕಾಶ ಕೊಟ್ಟಿಲ್ಲ. ದೇವಸ್ಥಾನಗಳಿಂದ ದೈವಸ್ಥಾನಗಳಿಗೆ ಹೊರಡುವ ಹುಲಿವೇಷ ತಂಡಗಳು ಸಾಂಪ್ರದಾಯಿಕ ಲೋಬಾನ ಹಾಕುವ ಆಚರಣೆಯನ್ನು ಮಾತ್ರ ಮಾಡಿದೆ.
ಬೈಲೂರು ನೀಲಕಂಠ ಮಹಾಬಬ್ಬುಸ್ವಾಮಿ ದೈವಸ್ಥಾನದಲ್ಲಿ ಜ್ಯೂನಿಯರ್ ಫ್ರೆಂಡ್ಸ್ ತಂಡ ಆಯೋಜಿಸಿದ್ದ ಲೋಬಾನ ಹಾಕುವ ಸಂಪ್ರದಾಯದಲ್ಲಿ ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ಭಾಗವಹಿಸಿದ್ದಾರೆ. ದೈವಸ್ಥಾನದ ಹುಲಿವೇಷ ತಂಡದ ಯುವಕರ ಜೊತೆ ರಕ್ಷಿತ್ ಶೆಟ್ಟಿ ಜಬರ್ದಸ್ತ್ ಆಗಿ ಸ್ಟೆಪ್ ಹಾಕಿದ್ದಾರೆ. ಪಕ್ಕಾ ವೇಷಧಾರಿಗಳಂತೆ ಅವರು ಕುಣಿದಿದ್ದು, ವಿಡಿಯೋ ವೈರಲ್ ಆಗಿದೆ.
ರಕ್ಷಿತ್ ಶೆಟ್ಟಿಗೆ ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯತೆ ನೀಡಿದ ಸಿನಿಮಾ ‘ಉಳಿದವರು ಕಂಡಂತೆ’. ಆ ಚಿತ್ರ ಹಿಟ್ ಆಗುವುದಕ್ಕೂ ಮೊದಲು ಇದೇ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ಇಲ್ಲಿನ ತಂಡವನ್ನು ರಕ್ಷಿತ್ ಚಿತ್ರೀಕರಣಕ್ಕೆ ಕರೆದೊಯ್ದಿದ್ದರು. ಚಿತ್ರದ ಸಕ್ಸಸ್ ಹಿಂದೆ ಬಬ್ಬುಸ್ವಾಮಿ ಕೊರಗಜ್ಜ ದೈವದ ಆಶೀರ್ವಾದ ಕೂಡ ಇದೆ ಎಂದು ರಕ್ಷಿತ್ ಶೆಟ್ಟಿ ಬಲವಾಗಿ ನಂಬಿದ್ದಾರೆ. ಪ್ರತಿ ವರ್ಷ ಅಷ್ಟಮಿ ಸಂದರ್ಭ ದೈವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಮತ್ತು ಪ್ರಾಂಗಣದಲ್ಲಿ ಹುಲಿ ಕುಣಿಯುವ ಸಂಪ್ರದಾಯ ನಡೆಸಿಕೊಂಡು ಬರುತ್ತಿದ್ದಾರೆ.
‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ನಂತರ ಹಲವು ಪ್ರಾಜೆಕ್ಟ್ಗಳನ್ನು ರಕ್ಷಿತ್ ಶೆಟ್ಟಿ ಬ್ಯುಸಿ ಆಗಿದ್ದಾರೆ. ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ರಿಚರ್ಡ್ ಆ್ಯಂಟನಿ’, ‘777 ಚಾರ್ಲಿ’ ಚಿತ್ರಗಳ ಕೆಲಸಗಳು ನಡೆಯುತ್ತಿವೆ. ಈ ಎಲ್ಲ ಸಿನಿಮಾಗಳ ಮೇಲೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು, ಮಲಯಾಳಂ, ಹಿಂದಿ ಮತ್ತು ತೆಲುಗು ಭಾಷೆಗಳಲ್ಲೂ ‘777 ಚಾರ್ಲಿ’ ಸಿನಿಮಾ ಬಿಡುಗಡೆ ಆಗಲಿದೆ. ಸೆ.9ರಂದು ಈ ಸಿನಿಮಾದಿಂದ ‘ಟಾರ್ಚರ್’ ಸಾಂಗ್ ರಿಲೀಸ್ ಆಗಲಿದೆ.
ಇದನ್ನೂ ಓದಿ:
ಮತ್ತೆ ಒಂದಾದ ರಕ್ಷಿತ್ ಶೆಟ್ಟಿ-ಅನಂತ್ ನಾಗ್; ಈ ಬಾರಿ ನಡೆಯಲಿದೆ ‘ಆಬ್ರಕಡಾಬ್ರ’