
‘ಕಾಂತಾರ: ಚಾಪ್ಟರ್ 1’ (Kantara) ಸಿನಿಮಾದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಅಕ್ಟೋಬರ್ 2ರಂದು ಪ್ರೇಕ್ಷಕರ ಎದುರು ಬರಲು ಸಿದ್ಧವಾಗಿದೆ. ಈ ಚಿತ್ರದ ಬಗ್ಗೆ ರಿಷಬ್ ಶೆಟ್ಟಿ ಅವರು ಟಿವಿ9 ಕನ್ನಡದ ಜೊತೆ ವಿಶೇಷವಾಗಿ ಮಾತನಾಡಿದ್ದಾರೆ. ಈ ವೇಳೆ ಅವರು ಚಿತ್ರದ ಬಜೆಟ್ ಬಗ್ಗೆ ಮಾತನಾಡಿದರು ಮತ್ತು ಒಂದು ಅಚ್ಚರಿಯ ವಿಚಾರವನ್ನು ರಿವೀಲ್ ಮಾಡಿದರು. ಇದರ ಜೊತೆಗೆ ಮೊದಲನೇ ಸಿನಿಮಾದ ಬಜೆಟ್ ಬಗ್ಗೆಯೂ ಹೇಳಿದರು.
‘ಕಾಂತಾರ’ ಸಿನಿಮಾದ ಬಜೆಟ್ ಎಷ್ಟು ಕೋಟಿ ರೂಪಾಯಿ ಎಂಬುದು ಈ ಮೊದಲೇ ರಿವೀಲ್ ಆಗಿತ್ತು. 15 ಕೋಟಿ ರೂಪಾಯಿ ಮೊತ್ತ ಖರ್ಚಾಗಿತ್ತು ಎಂದು ಹೇಳಲಾಯಿತು. ಈ ವಿಚಾರವನ್ನು ರಿಷಬ್ ಶೆಟ್ಟಿ ಅವರು ಒಪ್ಪಿಕೊಂಡರು. ಸಿನಿಮಾ ರಿಲೀಸ್ ಕೂಡ ಸೇರಿದರೆ 15 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಅವರು ಹೇಳಿದರು.
ಆ ಬಳಿಕ ‘ಕಾಂತಾರ: ಚಾಪ್ಟರ್ 1’ ಚಿತ್ರದ ಬಜೆಟ್ ಬಗ್ಗೆ ಕೇಳಲಾಯಿತು. 150-200 ಕೋಟಿ ರೂಪಾಯಿ ಖರ್ಚಾಗಿರಬಹುದೇ ಎಂದು ರಿಷಬ್ಗೆ ಕೇಳಲಾಯಿತು. ಇದಕ್ಕೆ ರಿಷಬ್ ಅವರು ಉತ್ತರಿಸುವುದಿಲ್ಲ ಎಂದರು. ಆದರೆ, ಅವರು ಒಂದಷ್ಟು ವಿಚಾರಗಳನ್ನು ರಿವೀಲ್ ಮಾಡಿದರು.
‘ಕೆಲವೇ ದಿನದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಆಗ ಜನರಿಗೇ ಗೊತ್ತಾಗುತ್ತದೆ. ಅದು ಮುಖ್ಯವಲ್ಲ. ಕಥೆ ಏನು ಕೇಳುತ್ತದೆ, ಅದಕ್ಕೆ ನಾವು ಏನು ಕೊಡುತ್ತೇವೆ ಎಂಬುದಷ್ಟೇ ಮುಖ್ಯವಾಗುತ್ತದೆ. ಸಿನಿಮಾ ರಿಲೀಸ್ ಆದ ಬಳಿಕ ಅದೆಲ್ಲವೂ ಬರಹುದು’ ಎಂದು ರಿಷಬ್ ಶೆಟ್ಟಿ ಹೇಳಿದರು.
ಇದನ್ನೂ ಓದಿ: ‘ಕಾಂತಾರ’ ನಟ ರಾಕೇಶ್ ಪೂಜಾರಿ ಸಾವಿನ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?
ರಿಷಬ್ ಶೆಟ್ಟಿ ಸಂಭಾವನೆ ವಿಚಾರವೂ ಸಾಕಷ್ಟು ಸುದ್ದಿ ಆಗುತ್ತಿದೆ. ರಿಷಬ್ ಅವರು ಸಂಭಾವನೆ ಬದಲು ಷೇರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಯಿತು. ಈ ಬಗ್ಗೆ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿಲ್ಲ. ಈ ಚಿತ್ರಕ್ಕೆ ನಟನೆ, ನಿರ್ದೇಶನ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವುದರಿಂದ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯಬಹುದು ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:14 pm, Sat, 27 September 25