Kantara Hindi Trailer: ಹಿಂದಿಯಲ್ಲೂ ಬರಲಿದೆ ‘ಕಾಂತಾರ’; ಕನ್ನಡದ ಚಿತ್ರಕ್ಕೆ ಈಗ ಭರ್ಜರಿ ಡಿಮ್ಯಾಂಡ್​

| Updated By: ಮದನ್​ ಕುಮಾರ್​

Updated on: Oct 07, 2022 | 7:31 AM

Rishab Shetty | Kantara Movie: ಪರಭಾಷೆ ಪ್ರೇಕ್ಷಕರಿಂದ ‘ಕಾಂತಾರ’ ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಹಿಂದಿಗೆ ಡಬ್​ ಮಾಡಿ ರಿಲೀಸ್​ ಮಾಡಲು ನಿರ್ಧರಿಸಲಾಗಿದೆ.

Kantara Hindi Trailer: ಹಿಂದಿಯಲ್ಲೂ ಬರಲಿದೆ ‘ಕಾಂತಾರ’; ಕನ್ನಡದ ಚಿತ್ರಕ್ಕೆ ಈಗ ಭರ್ಜರಿ ಡಿಮ್ಯಾಂಡ್​
ಕಾಂತಾರ
Follow us on

ರಿಷಬ್​ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ (Kantara) ಸಿನಿಮಾ ನಿರೀಕ್ಷೆಗೂ ಮೀರಿ ಸೂಪರ್​ ಹಿಟ್​ ಆಗಿದೆ. ಬಿಡುಗಡೆಯಾಗಿ ಒಂದು ವಾರ ಕಳೆದಿದ್ದರೂ ಸಹ ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಇದು ರಿಷಬ್​ ಶೆಟ್ಟಿ (Rishab Shetty) ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್​ ನೀಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ಈ ಸಿನಿಮಾ ಬಗ್ಗೆ ದೇಶಾದ್ಯಂತ ಟಾಕ್​ ಸೃಷ್ಟಿ ಆಗಿದೆ. ಹಿಂದಿ ಪ್ರೇಕ್ಷಕರು ಕೂಡ ‘ಕಾಂತಾರ’ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಆ ಕಾರಣದಿಂದ ಹಿಂದಿಯಲ್ಲೂ ಟ್ರೇಲರ್​ (Kantara movie Hindi trailer) ರಿಲೀಸ್​ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ ಸ್ವತಃ ರಿಷಬ್​ ಶೆಟ್ಟಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯಡಿಯಲ್ಲಿ ‘ಕಾಂತಾರ’ ಚಿತ್ರ ತಯಾರಾಗಿದೆ. ಸಾಮಾನ್ಯವಾಗಿ ಈ ಬ್ಯಾನರ್​ನ ಸಿನಿಮಾಗಳು ಹಲವು ಭಾಷೆಗಳಿಗೆ ಡಬ್​ ಆಗಿ, ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗುತ್ತವೆ. ಆದರೆ ‘ಕಾಂತಾರ’ ಚಿತ್ರವನ್ನು ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್​ ಮಾಡಲಾಗಿತ್ತು. ಈಗ ಪರಭಾಷೆ ಪ್ರೇಕ್ಷಕರಿಂದ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಹಿಂದಿಗೆ ಡಬ್​ ಮಾಡಿ ರಿಲೀಸ್​ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಚಿತ್ರತಂಡ ಗುಡ್​ ನ್ಯೂಸ್​ ನೀಡಿದೆ.

ಇದನ್ನೂ ಓದಿ
Sapthami Gowda: ಜನರ ಮಧ್ಯೆ ‘ಕಾಂತಾರ’ ನಾಯಕಿ ಸಪ್ತಮಿ ಗೌಡ ಬಿಂದಾಸ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Kantara Review: ‘ಕಾಂತಾರ’ ವಿಮರ್ಶೆ ಮಾಡಿದ ರಮ್ಯಾ; ರಿಷಬ್​ ಶೆಟ್ಟಿ ಚಿತ್ರದ ಬಗ್ಗೆ ‘ಮೋಹಕ ತಾರೆ’ ಹೇಳಿದ್ದೇನು?
Kantara: ರಿಷಬ್​ ಶೆಟ್ಟಿ ಕಂಬಳದ ಕೋಣ ಓಡಿಸುವುದು ಕಲಿತಿದ್ದು ಹೇಗೆ? ಇಲ್ಲಿದೆ ಮೇಕಿಂಗ್​ ವಿಡಿಯೋ

ಅಕ್ಟೋಬರ್​ 9ರಂದು ಬೆಳಗ್ಗೆ 9.10ಕ್ಕೆ ‘ಕಾಂತಾರ’ ಚಿತ್ರದ ಹಿಂದಿ ಟ್ರೇಲರ್​ ಬಿಡುಗಡೆ ಆಗಲಿದೆ ಎಂದು ‘ಹೊಂಬಾಳೆ ಫಿಲ್ಸ್ಮ್​’ ಟ್ವೀಟ್​ ಮಾಡಿದೆ. ಈ ಸುದ್ದಿ ಕೇಳಿ ಉತ್ತರ ಭಾರತದ ಪ್ರೇಕ್ಷಕರು ಫಿದಾ ಆಗಿದ್ದಾರೆ. ಬುಕ್​ ಮೈ ಶೋನಲ್ಲಿ ಈವರೆಗೆ (ಅ.7) 33 ಸಾವಿರಕ್ಕೂ ಅಧಿಕ ಜನರು ವೋಟ್​ ಮಾಡಿದ್ದಾರೆ. ಶೇಕಡ 99ರಷ್ಟು ರೇಟಿಂಗ್​ ಪಡೆಯುವಲ್ಲಿ ಈ ಚಿತ್ರ ಯಶಸ್ವಿ ಆಗಿದೆ. ಆ ಮೂಲಕ ಪರರಾಜ್ಯಗಳಲ್ಲಿ ಇರುವ ಪ್ರೇಕ್ಷಕರಿಗೂ ಈ ಸಿನಿಮಾ ಬಗ್ಗೆ ಕೌತುಕ ಮೂಡುವಂತಾಗಿದೆ.

ಕರ್ನಾಟಕದಲ್ಲಿರುವ ಪರಭಾಷಿಗರು ಕನ್ನಡದಲ್ಲಿಯೇ ಈ ಚಿತ್ರವನ್ನು ನೋಡಿ ಎಂಜಾಯ್​ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಹಿಂದಿಯಲ್ಲಿ ನೋಡುವ ಅವಕಾಶ ಸಿಗಲಿದೆ. ಅಪ್ಪಟ ಕರಾವಳಿಯ ಸೊಗಡಿನಲ್ಲಿ ಈ ಚಿತ್ರ ಮೂಡಿಬಂದಿದೆ. ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​, ಪ್ರಮೋದ್​ ಶೆಟ್ಟಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಕನ್ನಡ ಸಿನಿಮಾಗಳಿಗೆ ಇದು ಸುವರ್ಣ ಕಾಲ. ‘ಕೆಜಿಎಫ್​: ಚಾಪ್ಟರ್​ 2’, ‘777 ಚಾರ್ಲಿ’, ‘ವಿಕ್ರಾಂತ್​ ರೋಣ’ ಮುಂತಾದ ಸಿನಿಮಾಗಳು ದೇಶಾದ್ಯಂತ ಗಮನ ಸೆಳೆದವು. ಈಗ ಅವುಗಳ ಸಾಲಿಗೆ ‘ಕಾಂತಾರ’ ಚಿತ್ರ ಕೂಡ ಸೇರ್ಪಡೆ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:31 am, Fri, 7 October 22