
ನಟ ಯಶ್ (Yash) ಅವರು ಮಾಡಿದ್ದ ರಾಕಿಭಾಯ್ ಪಾತ್ರಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ. ಅನೇಕರು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ರಿಲೀಸ್ ಆಗಿ ಮೂರು ವರ್ಷ ಕಳೆದರೂ ಸಿನಿಮಾ ಬಗೆಗಿನ ಹೊಗಳಿಕೆ ನಿಂತಿಲ್ಲ. ಒಬ್ಬಲ್ಲಾ ಒಬ್ಬರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನ್ನು ಈಗಲೂ ಆಡುತ್ತಿದ್ದಾರೆ. ಈಗ ಟಾಲಿವುಡ್ನ ಸ್ಟಾರ್ ನಟ ನಾಗಾರ್ಜುನ ಅವರು ‘ಕೆಜಿಎಫ್ 2’ ಚಿತ್ರವನ್ನು ಹಾಗೂ ರಾಕಿಭಾಯ್ನ ಹಾಡಿ ಹೊಗಳಿದ್ದಾರೆ.
ಮುಂಬೈನ ಜಿಯೋ ವರ್ಲ್ಡ್ ಸೆಂಟರ್ನಲ್ಲಿ ‘ವರ್ಲ್ಡ್ ಆಡಿಯೋ ವಿಶ್ಯುವಲ್ಸ್ ಎಂಟರ್ಟೇನ್ಮೆಂಟ್ ಸಮ್ಮೇಳನ’ (ವೇವ್ಸ್) ನಡೆಯುತ್ತಿದೆ. ಮೋಹನ್ಲಾಲ್, ರಜಿನಿಕಾಂತ್, ಚಿರಂಜೀವಿ, ಶಾರುಖ್ ಖಾನ್, ಅಮಿತಾಭ್ ಬಚ್ಚನ್, ಅಲ್ಲು ಅರ್ಜುನ್ ಸೇರಿದಂತೆ ಅನೇಕರು ಇದರಲ್ಲಿ ಭಾಗಿ ಆಗಿದ್ದಾರೆ. ಈಗ ನಾಗಾರ್ಜುನ ಕೂಡ ಇದರ ಭಾಗವಾಗಿದ್ದು, ತೆಲಂಗಾಣ ಸ್ಟಾಲ್ ಒಂದನ್ನು ಕೂಡ ಲಾಂಚ್ ಮಾಡಿದ್ದಾರೆ.
ಆ ಬಳಿಕ ಪ್ಯಾನ್ ಇಂಡಿಯಾ ಸಿನಿಮಾ ವಿಚಾರಗಳ ಬಗ್ಗೆ ನಾಗಾರ್ಜುನ ಮಾತನಾಡಿದರು. ಅಲ್ಲದೆ, ಸಾಮಾನ್ಯ ವ್ಯಕ್ತಿಗಳಿಗಿಂತ ಮಿಗಿಲಾದ ಪಾತ್ರಗಳನ್ನು ಮಾಡಿದರೆ ಜನರಿಗೆ ಇಷ್ಟ ಆಗುತ್ತದೆ ಎಂದರು. ರಾಕಿಭಾಯ್, ಪುಷ್ಪ ಪಾತ್ರಗಳು ಇರೋದು ಹಾಗೆಯೇ. ನಿಜ ಜೀವನದಲ್ಲಿ ಈ ರೀತಿಯಲ್ಲಿ ಜೀವಿಸೋದು ಕಷ್ಟವೇ. ಆದರೆ, ಅವುಗಳನ್ನು ತೆರೆಮೇಲೆ ತಂದಾಗ ಜನರಿಗೆ ಇಷ್ಟ ಆಗುತ್ತದೆ. ಇದು ನಾಗರ್ಜುನ ಅಭಿಪ್ರಾಯವೂ ಆಗಿದೆ.
‘ಪುಷ್ಪ ಸಿನಿಮಾ ತೆಲುಗು ರಾಜ್ಯದ ಹೊರಗೆ ಹೆಚ್ಚು ಹಣ ಗಳಿಕೆ ಮಾಡಿದೆ. ಪುಷ್ಪ, ಕೆಜಿಎಫ್ ಹಾಗೂ ಬಾಹುಬಲಿ ಪಾತ್ರಗಳನ್ನು ದೊಡ್ಡ ಪರದೆಮೇಲೆ ನೋಡಿ ಅನೇಕರು ಆನಂದಿಸಿದರು. ರಾಕಿಭಾಯ್-ಬಾಹುಬಲಿ ರೀತಿಯ ಪಾತ್ರಗಳು ಜನರಿಗೆ ಇಷ್ಟ. ನನಗೂ ಆ ರೀತಿಯ ಪಾತ್ರಗಳು ಇಷ್ಟ’ ಎಂದು ನಾಗಾರ್ಜುನ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಕೆಜಿಎಫ್ 2’ ಜೋಡಿನ ಬಾಲಿವುಡ್ನಲ್ಲಿ ಒಟ್ಟಿಗೆ ತರಲು ನಡೆದಿತ್ತು ಪ್ಲ್ಯಾನ್; ಕಾಡಿತ್ತು ಆ ಒಂದು ಭಯ
ನಾಗಾರ್ಜುನ ಅವರು ನಿರ್ದೇಶಕರ ಕೆಲಸವನ್ನು ಹೊಗಳುವುದನ್ನು ಮರೆತಿಲ್ಲ. ‘ಕೇವಲ ಹೀರೋಗಳ ಕಾರಣದಿಂದ ಮಾತ್ರ ಸಿನಿಮಾ ಹಿಟ್ ಆಗಿಲ್ಲ. ನಿರ್ದೇಶಕರ ಶ್ರಮವೂ ಇದರಲ್ಲಿ ಇದೆ’ ಎಂದು ನಾಗಾರ್ಜುನ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.