ದಕ್ಷಿಣ ಭಾರತದವರ ಅಬ್ಬರಕ್ಕೆ ಮಂಕಾದ ಬಾಲಿವುಡ್​; ಅವರಿಗೆ ಕಾಡುತ್ತಿದೆ ಅಭದ್ರತೆ?

| Updated By: ರಾಜೇಶ್ ದುಗ್ಗುಮನೆ

Updated on: Mar 30, 2022 | 1:43 PM

ಹಲವು ವರ್ಷಗಳ ಹಿಂದೆ ಬಾಲಿವುಡ್​ ಚಿತ್ರಗಳು ವಿಶ್ವ ಮಟ್ಟದಲ್ಲಿ ಹೆಸರು ಮಾಡುತ್ತಿದ್ದವು. ಹಲವು ಹಿಂದಿ ಸಿನಿಮಾಗಳು ಬೇರೆಬೇರೆ ಭಾಷೆಗೆ ಡಬ್​ ಆದವು. ಆದರೆ, ಈಗ ಕಾಲ ಬದಲಾಗಿದೆ. ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಬಾಕ್ಸ್​ ಆಫೀಸ್​ನಲ್ಲಿ ಕಮಾಲ್​ ಮಾಡುತ್ತಿವೆ.

ದಕ್ಷಿಣ ಭಾರತದವರ ಅಬ್ಬರಕ್ಕೆ ಮಂಕಾದ ಬಾಲಿವುಡ್​; ಅವರಿಗೆ ಕಾಡುತ್ತಿದೆ ಅಭದ್ರತೆ?
ಯಶ್​- ಅಲ್ಲು ಅರ್ಜುನ್​-ಜ್ಯೂ.ಎನ್​ಟಿಆರ್​
Follow us on

ದಕ್ಷಿಣ ಭಾರತದ ಸಿನಿಮಾಗಳ ಅಬ್ಬರ ಜೋರಾಗಿದೆ. ಹಿಂದಿ ಚಿತ್ರರಂಗದಲ್ಲೂ ನಮ್ಮ ಸಿನಿಮಾಗಳು ಪಾರುಪತ್ಯ ಸಾಧಿಸುತ್ತಿವೆ. ಬಾಲಿವುಡ್ ​ ಸಿನಿಮಾಗಳಿಗಿಂತ (Bollywood Movie) ಹಿಂದಿಗೆ ಡಬ್​ ಆಗಿ ತೆರೆಕಾಣುತ್ತಿರುವ ದಕ್ಷಿಣ ಭಾರತದ ಸಿನಿಮಾಗಳು (South Indian Movies) ಬಾಕ್ಸ್​ ಆಫೀಸ್​ನಲ್ಲಿ ಹೆಚ್ಚಿನ ಕಲೆಕ್ಷನ್​ ಮಾಡುತ್ತಿವೆ. ಇದರಿಂದ ಸಹಜವಾಗಿಯೇ ಬಾಲಿವುಡ್ ಮಂದಿಗೆ ಅಭದ್ರತೆ ಕಾಡೋಕೆ ಆರಂಭವಾಗಿದೆ ಎನ್ನುವ ಮಾತು ಕೇಳಿಬಂದಿದೆ. ಈ ಮಧ್ಯೆ ಬಾಲಿವುಡ್​ ಸಿನಿಮಾಗಳು ಒಳ್ಳೆಯ ಕಮಾಯಿ ಮಾಡುತ್ತಿಲ್ಲ. ಇದರಿಂದ ಬಾಲಿವುಡ್​ ಮಂಕಾಗಿದೆ.

ಹಲವು ವರ್ಷಗಳ ಹಿಂದೆ ಬಾಲಿವುಡ್​ ಚಿತ್ರಗಳು ವಿಶ್ವ ಮಟ್ಟದಲ್ಲಿ ಹೆಸರು ಮಾಡುತ್ತಿದ್ದವು. ಹಲವು ಹಿಂದಿ ಸಿನಿಮಾಗಳು ಬೇರೆಬೇರೆ ಭಾಷೆಗೆ ಡಬ್​ ಆದವು. ಆದರೆ, ಈಗ ಕಾಲ ಬದಲಾಗಿದೆ. ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಬಾಕ್ಸ್​ ಆಫೀಸ್​ನಲ್ಲಿ ಕಮಾಲ್​ ಮಾಡುತ್ತಿವೆ. ಹಲವು ಚಿತ್ರಗಳು 100 ಕೋಟಿ ಕ್ಲಬ್ ಸೇರುತ್ತಿವೆ.

ರಾಜಮೌಳಿ ನಿರ್ದೇಶನದ ‘ಬಾಹುಬಲಿ’, ‘ಬಾಹುಬಲಿ 2’ ಸಿನಿಮಾಗಳು ಹಿಂದಿ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡಿತು. ಆ ಬಳಿಕ ಹಲವು ದಕ್ಷಿಣ ಭಾರತದ ಸಿನಿಮಾಗಳು ಹಿಂದಿಗೆ ಡಬ್ ಆಗಿ ತೆರೆಕಂಡವು. ಇತ್ತೀಚಿನ ವರ್ಷಗಳಲ್ಲಿ ಪ್ಯಾನ್ ಇಂಡಿಯಾ ಕಾನ್ಸೆಪ್ಟ್​ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ.

ಕನ್ನಡದ ‘ಕೆಜಿಎಫ್​’ ಸಿನಿಮಾ ಹಿಂದಿ ಬಾಕ್ಸ್ ಆಫೀಸ್​ನಲ್ಲಿ 44 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ಕನ್ನಡದ ಚಿತ್ರವೊಂದು ಹಿಂದಿಯಲ್ಲಿ ಇಷ್ಟು ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದ್ದು ಅದೇ ಮೊದಲು. ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂದ ತೆಲುಗಿನ ‘ಪುಷ್ಪ’ ಸಿನಿಮಾ ಹಿಂದಿ ಬಾಕ್ಸ್​ ಆಫೀಸ್​ನಲ್ಲಿ 100 ಕೋಟಿ ಗಳಿಸಿದೆ. ಮಾರ್ಚ್​ 25ರಂದು ರಿಲೀಸ್​ ಆದ ‘ಆರ್​ಆರ್​ಆರ್​’ ಸಿನಿಮಾ ಹಿಂದಿ ಬಾಕ್ಸ್ ಆಫೀಸ್​ನಲ್ಲಿ ಒಂದು ವಾರ ಕಳೆಯುವುದರೊಳಗೆ 100 ಕೋಟಿ ಕ್ಲಬ್​ ಸೇರಿದೆ. ಈ ಚಿತ್ರ ಅನಾಯಾಸವಾಗಿ 200 ಕೋಟಿ ಗಳಿಸಲಿದೆ.

ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ತೆರೆಕಂಡ ಕೆಲವೇ ಕೆಲವು ಬಾಲಿವುಡ್​ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಿವೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’, ಕಬೀರ್ ಖಾನ್ ನಿರ್ದೇಶನದ ‘83’ ಚಿತ್ರಗಳು 100 ಕೋಟಿ ರೂಪಾಯಿ ಗಳಿಸಿ ವ್ಯವಹಾರ ನಿಲ್ಲಿಸಿದವು. ಇತ್ತೀಚೆಗೆ ತೆರೆಗೆ ಬಂದ ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾ 200 ಕೋಟಿ ರೂಪಾಯಿ ಗಳಿಸಿ ಕಮಾಲ್ ಮಾಡಿದೆ. ಇದನ್ನು ಬಿಟ್ಟು ಮತ್ತಾವುದೇ ಹೇಳಿಕೊಳ್ಳುವಂತಹ ಸಿನಿಮಾ ಬಂದಿಲ್ಲ.

ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್​ನಲ್ಲಿ ಸದ್ದು ಮಾಡುತ್ತಿರುವುದಕ್ಕೆ ಅಲ್ಲಿನ ನಟ, ನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಅಭದ್ರತೆ ಕಾಡುತ್ತಿದೆ ಎನ್ನಲಾಗುತ್ತಿದೆ. ಇನ್ನು, ದಕ್ಷಿಣ ಭಾರತದ ಹಿಟ್​ ಚಿತ್ರಗಳನ್ನು ರಿಮೇಕ್ ಮಾಡೋಕೆ ಬಾಲಿವುಡ್​ ಮಂದಿ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅಲ್ಲಿ ಸಿದ್ಧಗೊಳ್ಳುತ್ತಿರುವ ಕಥೆಯನ್ನು ಜನರು ಏಕೆ ಇಷ್ಟಪಡುತ್ತಿಲ್ಲ ಎಂಬುದು ಅಲ್ಲಿನ ನಿರ್ದೇಶಕರಿಗೆ ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ನಟ ಸಲ್ಮಾನ್​ ಖಾನ್​ ಕೂಡ ಮಾತನಾಡಿದ್ದರು.

ಇದನ್ನೂ ಓದಿ: RRR Box Office Collection: ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ ‘ಆರ್​ಆರ್​ಆರ್​’ ಅಬ್ಬರ; ವಿಶ್ವಾದ್ಯಂತ ಧೂಳೆಬ್ಬಿಸಿತು ರಾಜಮೌಳಿ ಸಿನಿಮಾ

ಸೋಲಿಲ್ಲದ ಸರದಾರ ರಾಜಮೌಳಿ ಗೆಲುವಿನ ಗುಟ್ಟೇನು? ಇಲ್ಲಿವೆ ‘ಆರ್​ಆರ್​ಆರ್​’ ನಿರ್ದೇಶಕನ 5 ಸೂತ್ರಗಳು