RRR Box Office Collection: ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ‘ಆರ್ಆರ್ಆರ್’ ಅಬ್ಬರ; ವಿಶ್ವಾದ್ಯಂತ ಧೂಳೆಬ್ಬಿಸಿತು ರಾಜಮೌಳಿ ಸಿನಿಮಾ
RRR First Day Box Office Collection: ‘ಆರ್ಆರ್ಆರ್’ ಸಿನಿಮಾ ಮೊದಲ ದಿನ ಮಾಡಿರಬಹುದಾದ ಕಲೆಕ್ಷನ್ ಬಗ್ಗೆ ಚಿತ್ರರಂಗದ ಕೆಲವು ಟ್ರೇಡ್ ವಿಶ್ಲೇಷಕರು ಪೋಸ್ಟ್ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
ಬೃಹತ್ ಬಜೆಟ್ನಲ್ಲಿ ರಾಜಮೌಳಿ (SS Rajamouli) ನಿರ್ದೇಶನದ ಸಿನಿಮಾಗಳು ಸಿದ್ಧವಾಗುತ್ತವೆ. ಈಗ ಬಿಡುಗಡೆ ಆಗಿರುವ ‘ಆರ್ಆರ್ಆರ್’ ಸಿನಿಮಾ (RRR Movie) ಕೂಡ ಅದೇ ಪ್ರಕಾರಕ್ಕೆ ಸೇರುವಂತದ್ದು. ಈ ಸಿನಿಮಾಗೆ ಹಾಕಿದ ಬಂಡವಾಳಕ್ಕೆ ಎಷ್ಟು ಲಾಭ ಬಂತು ಎಂಬುದನ್ನು ತಿಳಿದುಕೊಳ್ಳಲು ನಿರ್ಮಾಪಕರಿಗಿಂತಲೂ ಹೆಚ್ಚಾಗಿ ಜನರಿಗೆ ಕುತೂಹಲ ಇರುತ್ತದೆ. ಜ್ಯೂ. ಎನ್ಟಿಆರ್ ಮತ್ತು ರಾಮ್ ಚರಣ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ‘ಆರ್ಆರ್ಆರ್’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ (RRR Box Office Collection) ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆ. ಈ ಸಿನಿಮಾ ಮೊದಲ ದಿನ ಮಾಡಿರಬಹುದಾದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಚಿತ್ರರಂಗದ ಕೆಲವು ಟ್ರೇಡ್ ವಿಶ್ಲೇಷಕರು ಪೋಸ್ಟ್ ಮಾಡಿದ್ದಾರೆ. ಅದರ ಆಧಾರದಲ್ಲಿ ನೋಡುವುದಾದರೆ ‘ಆರ್ಆರ್ಆರ್’ ಚಿತ್ರ ಮೊದಲ ದಿನವೇ ಧೂಳೆಬ್ಬಿಸಿದೆ. ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ ರಾಜಮೌಳಿ ಸಿನಿಮಾ ಅಬ್ಬರಿಸಿದೆ. ಒಂದು ಅಂದಾಜಿನ ಪ್ರಕಾರ ಈ ಸಿನಿಮಾ ಫಸ್ಟ್ ಡೇ ವಿಶ್ವಾದ್ಯಂತ 260 ಕೋಟಿ ರೂಪಾಯಿ ಗಳಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆಲಿಯಾ ಭಟ್, ಅಜಯ್ ದೇವಗನ್ ಅವರು ಈ ಚಿತ್ರದಲ್ಲಿ ನಟಿಸಿದ್ದು, ಹಿಂದಿ ಪ್ರೇಕ್ಷಕರನ್ನು ಕೂಡ ಬಹುವಾಗಿ ಆಕರ್ಷಿಸಿದೆ.
‘ಆರ್ಆರ್ಆರ್’ ಸಿನಿಮಾ ಸೃಷ್ಟಿ ಮಾಡಿದ ಕ್ರೇಜ್ ಅಷ್ಟಿಷ್ಟಲ್ಲ. ಶುಕ್ರವಾರ (ಮಾ.25) ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಯಿತು. ವಿದೇಶದಲ್ಲೂ ‘ಆರ್ಆರ್ಆರ್’ ತೆರೆಕಂಡು ಅಬ್ಬರಿಸುತ್ತಿದೆ. ಮಾ.24ರ ರಾತ್ರಿಯಿಂದಲೇ ಶೋ ಆರಂಭ ಆಯಿತು. ಮಾ.25ರ ಎಲ್ಲ ಪ್ರದರ್ಶನಗಳು ಹೌಸ್ಫುಲ್ ಆದವು. ಎಲ್ಲ ಚಿತ್ರಮಂದಿರಗಳಲ್ಲೂ ಅಭಿಮಾನಿಗಳು ಈ ಸಿನಿಮಾ ನೋಡಲು ಮುಗಿಬಿದ್ದರು. ಇದರ ಪರಿಣಾಮವಾಗಿ ‘ಆರ್ಆರ್ಆರ್’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಚಿನ್ನದ ಬೆಳೆ ತೆಗೆದಿದೆ ಎಂದು ಹೇಳಲಾಗುತ್ತಿದೆ.
ಆಂಧ್ರ ಮತ್ತು ತೆಲಂಗಾಣದಲ್ಲಿ 120 ಕೋಟಿ ರೂಪಾಯಿ, ತಮಿಳುನಾಡಲ್ಲಿ 10 ಕೋಟಿ ರೂಪಾಯಿ, ಹಿಂದಿ ವರ್ಷನ್ನಿಂದ 25 ಕೋಟಿ ರೂಪಾಯಿ, ಕರ್ನಾಟಕದಲ್ಲಿ 14 ಕೋಟಿ ರೂಪಾಯಿ, ಕೇರಳದಲ್ಲಿ 4 ಕೋಟಿ ರೂಪಾಯಿ ಹಾಗೂ ವಿದೇಶದಿಂದ 75 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಅಂದಾಜಿಸಲಾಗಿದೆ. ಆದರೆ ಇದರ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ರಿಪೋರ್ಟ್ ಹೊರಬರಬೇಕಿದೆ.
ವಿಶ್ವಾದ್ಯಂತ 8 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ. ಟಿಕೆಟ್ ಬೆಲೆ ಎಷ್ಟೇ ದುಬಾರಿ ಆಗಿದ್ದರೂ ಕೂಡ ಅಭಿಮಾನಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಬೆಂಗಳೂರಿನಲ್ಲೇ ಈ ಚಿತ್ರದ ಟಿಕೆಟ್ ಬೆಲೆ 250ರಿಂದ 1000 ರೂಪಾಯಿ ಮೀರಿದೆ. ಆದರೂ ಕೂಡ ಎಲ್ಲ ಕಡೆ ಹೌಸ್ಫುಲ್ ಆಗಿದೆ. ಚಿತ್ರಮಂದಿರಗಳ ಎದುರಲ್ಲಿ ಜನರು ಕುಣಿದು ಕುಪ್ಪಳಿಸುತ್ತಿದ್ದಾರೆ. ರಾಮ್ ಚರಣ್, ಜ್ಯೂ. ಎನ್ಟಿಆರ್ ಮತ್ತು ರಾಜಮೌಳಿಗೆ ಜೈಕಾರ ಹಾಕಿ, ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
‘RRR’ OPENS TO RECORD NUMBERS IN AUS, NZ… #RRR OVERTAKES #TheBatman in #Australia, claiming the No 1 spot on Fri… #NZ is SOLID too…#Australia: A$ 702,560 [₹ 4.03 cr]#NZ: NZ$ 69,741 [₹ 37.07 lacs]#USA: Crosses $ 5 million [Thu previews + Fri, still counting]. @comScore pic.twitter.com/AHU7n3jwYo
— taran adarsh (@taran_adarsh) March 26, 2022
ರಾಜಮೌಳಿ ಅವರು ಈ ಸಿನಿಮಾವನ್ನು ಅದ್ದೂರಿಯಾಗಿ ಕಟ್ಟಿಕೊಟ್ಟಿದ್ದಾರೆ. ಇದೊಂದು ದೃಶ್ಯವೈಭವ ಎಂದು ಜನರು ಬಣ್ಣಿಸುತ್ತಿದ್ದಾರೆ. ಆದರೆ ‘ಬಾಹುಬಲಿ’ ಚಿತ್ರಕ್ಕೆ ಹೋಲಿಸಿದರೆ ‘ಆರ್ಆರ್ಆರ್’ ಸಿನಿಮಾ ಸ್ವಲ್ಪ ಸಪ್ಪೆ ಎನಿಸುತ್ತದೆ ಎಂಬ ಅಭಿಪ್ರಾಯ ಕೂಡ ಪ್ರೇಕ್ಷಕರಿಂದ ವ್ಯಕ್ತವಾಗಿದೆ. ಅದೇನೇ ಇರಲಿ, ಇನ್ನೂ ಒಂದು ವಾರಗಳ ಕಾಲ ಈ ಸಿನಿಮಾ ಬಹುತೇಕ ಕಡೆಗಳಲ್ಲೂ ಹೌಸ್ಫುಲ್ ಪ್ರದರ್ಶನ ಕಾಣುವುದು ಖಚಿತ. ಮುಂಗಡ ಟಿಕೆಟ್ ಬುಕಿಂಗ್ಗೆ ಜನರು ತೋರಿಸುತ್ತಿರುವ ಆಸಕ್ತಿಯೇ ಇದಕ್ಕೆ ಸಾಕ್ಷಿ. ಶನಿವಾರ (ಮಾ.26) ಮತ್ತು ಭಾನುವಾರ (ಮಾ.27) ದೊಡ್ಡ ಮಟ್ಟದ ಕಲೆಕ್ಷನ್ ಆಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ:
RRR Twitter Review: ನಿದ್ದೆ ಬಿಟ್ಟು ‘ಆರ್ಆರ್ಆರ್’ ಸಿನಿಮಾ ನೋಡಿ ಬಂದ ಪ್ರೇಕ್ಷಕರು ಏನಂದ್ರು?