‘ದಿ ಕಾಶ್ಮೀರ್ ಫೈಲ್ಸ್’ ಹೆಸರು ಹೇಳದೇ ಒಂದೇ ಒಂದು ಟ್ವೀಟ್ ಮಾಡಿ ಟ್ರೋಲ್ ಆದ ನಟ ಆದಿಲ್ ಹುಸೇನ್
The Kashmir Files | Adil Hussain: ಬಾಲಿವುಡ್ನಲ್ಲಿ ನಟ ಆದಿಲ್ ಹುಸೇನ್ ಅವರು ತಮ್ಮ ಪ್ರತಿಭೆ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ಈಗ ಅವರು ಒಂದೇ ಒಂದು ಟ್ವೀಟ್ ಮಾಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಬಾಲಿವುಡ್ನ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ಬಗ್ಗೆ ಹಲವು ಬಗೆಯ ಚರ್ಚೆಗಳು ಆಗುತ್ತಿವೆ. ಕೆಲವರು ಈ ಸಿನಿಮಾದ ಪರವಾಗಿ ಮಾತನಾಡಿದರೆ, ಇನ್ನೂ ಕೆಲವರು ಈ ಚಿತ್ರವನ್ನು ವಿರೋಧಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದರದ್ದೇ ಚರ್ಚೆ ಆಗುತ್ತಿದೆ. ರಾಜಕಾರಣಿಗಳು, ಸೆಲೆಬ್ರಿಟಿಗಳು ಕೂಡ ಹಗಲಿರುಳು ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕುರಿತು ಮಾತನಾಡುತ್ತಿದ್ದಾರೆ. ಇತ್ತೀಚೆಗೆ ನಟ ಆದಿಲ್ ಹುಸೇನ್ (Adil Hussain) ಅವರು ಒಂದು ಟ್ವೀಟ್ ಮಾಡಿದ್ದರು. ಆದರೆ ಅದರಲ್ಲಿ ಎಲ್ಲಿಯೂ ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಹೆಸರನ್ನು ಹೇಳಿರಲಿಲ್ಲ. ಆದರೂ ಕೂಡ ಅವರು ಈ ಸಿನಿಮಾದ ವಿರೋಧವಾಗಿಯೇ ಟ್ವೀಟ್ ಮಾಡಿದ್ದಾರೆ ಎಂದು ಜನರು ಭಾವಿಸಿದರು. ಹಾಗಾಗಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು. ಯಾಕೆ ಹೀಗೆ ಆಯಿತು? ನಿಜಕ್ಕೂ ಆದಿಲ್ ಹುಸೇನ್ ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಕುರಿತಾಗಿಯೇ ಟ್ವೀಟ್ ಮಾಡಿದ್ರಾ ಎಂಬ ಪ್ರಶ್ನೆ ಮೂಡಿದೆ. ಈ ಕುರಿತು ಸ್ವತಃ ಆದಿಲ್ ಹುಸೇನ್ ಅವರು ಮಾತನಾಡಿದ್ದಾರೆ. ತಾವು ಆ ರೀತಿ ಟ್ವೀಟ್ ಮಾಡಲು ಕಾರಣ ಆಗಿದ್ದು ಏನು ಎಂಬುದನ್ನು ಅವರು ವಿವರಿಸಿದ್ದಾರೆ.
ಬಾಲಿವುಡ್ನಲ್ಲಿ ನಟ ಆದಿಲ್ ಹುಸೇನ್ ಅವರು ತಮ್ಮ ಪ್ರತಿಭೆ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ಈಗ ಅವರು ಒಂದೇ ಒಂದು ಟ್ವೀಟ್ ಮಾಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅಷ್ಟಕ್ಕೂ ಅವರು ಮಾಡಿದ ಟ್ವೀಟ್ನಲ್ಲಿ ಏನಿತ್ತು? ‘ಸತ್ಯದ ಬಗ್ಗೆ ಮಾತನಾಡಲೇಬೇಕು. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ಅದನ್ನು ಸೌಮ್ಯವಾಗಿ ಹೇಳಬೇಕು. ಇಲ್ಲದಿದ್ದರೆ ಅದರ ಉದ್ದೇಶವೇ ಕಳೆದುಹೋಗುತ್ತದೆ’ ಎಂದು ಆದಿಲ್ ಹುಸೇನ್ ಟ್ವೀಟ್ ಮಾಡಿದ್ದರು. ಇದನ್ನು ಜನರು ಯಾಕೆ ತಪ್ಪಾಗಿ ಅರ್ಥ ಮಾಡಿಕೊಂಡರು ಎಂಬುದನ್ನು ಸ್ವತಃ ಆದಿಲ್ ಹುಸೇನ್ ಅವರು ಈಗ ವಿಶ್ಲೇಶಿಸಿದ್ದಾರೆ.
ಸೂಕ್ತವಲ್ಲದ ಸಮಯದಲ್ಲಿ ತಾವು ಈ ಟ್ವೀಟ್ ಮಾಡಿರುವುದಾಗಿ ಆದಿಲ್ ಹುಸೇನ್ ಹೇಳಿದ್ದಾರೆ. ‘ಸರಿಯಲ್ಲದ ಸಮಯದಲ್ಲಿ ನಾನು ಟ್ವೀಟ್ ಮಾಡಿದ್ದೇನೆ ಎಂಬುದು ನನಗೆ ಅರಿವಾಯಿತು. ಈ ರೀತಿ ನನ್ನ ಜೀವನದಲ್ಲಿ ಯಾವತ್ತೂ ಆಗಿರಲಿಲ್ಲ. ಜನರ ಪ್ರತಿಕ್ರಿಯೆಯಿಂದ ನನಗೆ ಶಾಕ್ ಆಗಿಲ್ಲ. ನಾನು ಏನು ತಪ್ಪು ಮಾಡಿದೆ ಅಂತ ಅಚ್ಚರಿ ಆಯ್ತು’ ಎಂದು ಅವರು ಹೇಳಿದ್ದಾರೆ.
‘ಕಲೆ ಎಂದರೆ ಏನು ಎಂಬ ಬಗ್ಗೆ ನಾನು ಒಂದು ಚರ್ಚೆಯಲ್ಲಿ ಭಾಗವಹಿಸಿದ್ದೆ. ಅದರ ಪರಿಣಾಮದಿಂದ ನಾನು ಈ ರೀತಿ ಪೋಸ್ಟ್ ಮಾಡಿದೆ. ಈ ಸಿನಿಮಾದ ಬಗ್ಗೆಯೇ ನಾನು ಟ್ವೀಟ್ ಮಾಡಿದ್ದೇನೆ ಅಂತ ಎಲ್ಲರೂ ಭಾವಿಸಿದರು. ನಾನು ಈವರೆಗೆ ಆ ಚಿತ್ರ ನೋಡಿಲ್ಲ. ಜನರು ತಮಗೆ ಏನು ಬೇಕೋ ಅದನ್ನೇ ನಂಬುತ್ತಾರೆ. ಪೋಸ್ಟ್ನ ಉದ್ದೇಶ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಆದಿಲ್ ಹುಸೇನ್ ಹೇಳಿದ್ದಾರೆ. ಈ ಕುರಿತು ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಟಿಸಿದೆ.
1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ಅನುಪಮ್ ಖೇರ್, ದರ್ಶನ್ ಕುಮಾರ್, ಪುನೀತ್ ಇಸ್ಸಾರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ, ಪ್ರಕಾಶ್ ಬೆಳವಾಡಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಹಲವು ಶಾಸಕರು ಮತ್ತು ಸಚಿವರು ಸಿನಿಮಾ ನೋಡಿದ ಬಳಿಕ ಚಿತ್ರದ ಹೆಚ್ಚು ಚರ್ಚೆ ಆರಂಭ ಆಯಿತು.
ಇದನ್ನೂ ಓದಿ:
ತನ್ನದೇ ರಕ್ತ ಸುರಿಸಿ ‘ದಿ ಕಾಶ್ಮೀರ್ ಫೈಲ್ಸ್’ ಪೋಸ್ಟರ್ ರಚಿಸಿದ ಮಹಿಳೆ; ‘ಇಂಥದ್ದೆಲ್ಲ ಮಾಡ್ಬೇಡಿ’ ಎಂದ ನಿರ್ದೇಶಕ