‘ದಿ ಕಾಶ್ಮೀರ್ ಫೈಲ್ಸ್’ನಿಂದ ಬಂದ ಹಣವನ್ನೆಲ್ಲಾ ದಾನ ಮಾಡಿ ಎಂದ ಐಎಎಸ್ ಆಫೀಸರ್; ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ಏನು?
The Kashmir Files Collection | Vivek Agnihotri: ರಾಜಕೀಯ ನೇತಾರರೂ ಸೇರಿದಂತೆ ಅಧಿಕಾರಿಗಳು, ಸಿನಿಮಾ ಪ್ರೇಮಿಗಳು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಬಗೆಬಗೆಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಮಧ್ಯಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ಟ್ವಿಟರ್ನಲ್ಲಿ ಚಿತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ಅದಕ್ಕೆ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯಿಸಿದ್ದಾರೆ. ಇದೀಗ ವೈರಲ್ ಆಗಿದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಬಿಡುಗಡೆಯಾದ ದಿನದಿಂದ ದೇಶದ ಗಮನ ಸೆಳೆದಿದೆ. ಬಾಕ್ಸಾಫೀಸ್ನಲ್ಲಿ ನಿರೀಕ್ಷೆಗೂ ಮೀರಿ ಅತ್ಯುತ್ತಮ ಗಳಿಕೆ ಮಾಡುತ್ತಿರುವ ಚಿತ್ರದ ಒಟ್ಟಾರೆ ಕಲೆಕ್ಷನ್ 190 ಕೋಟಿ ರೂ ದಾಟಿದೆ. 1990ರಲ್ಲಿ ಕಾಶ್ಮೀರದಲ್ಲಿ ನಡೆದ ಘಟನೆಗಳು, ಕಾಶ್ಮೀರಿ ಪಂಡಿತರ ವಲಸೆ ಮೊದಲಾದ ಘಟನೆಗಳನ್ನು ಆಧರಿಸಿ ಚಿತ್ರ ತಯಾರಾಗಿದೆ. ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪ್ರಕಾಶ್ ಬೆಳವಾಡಿ ಮೊದಲಾದ ತಾರೆಯರು ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತೀವ್ರ ಚರ್ಚೆಯನ್ನೂ ಹುಟ್ಟುಹಾಕಿದೆ. ರಾಜಕೀಯ ನೇತಾರರೂ ಸೇರಿದಂತೆ ಅಧಿಕಾರಿಗಳು, ಸಿನಿಮಾ ಪ್ರೇಮಿಗಳು ಚಿತ್ರವನ್ನು ಬಗೆಬಗೆಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಮಧ್ಯಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ಟ್ವಿಟರ್ನಲ್ಲಿ ಚಿತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದಕ್ಕೆ ವಿವೇಕ್ ಅಗ್ನಿಹೋತ್ರಿ (Vivek Agnihotri) ಪ್ರತಿಕ್ರಿಯಿಸಿದ್ದು ಇದೀಗ ದೇಶಾದ್ಯಂತ ಸುದ್ದಿಯಾಗುತ್ತಿದೆ.
ಮಧ್ಯಪ್ರದೇಶದ ಐಎಎಸ್ ಆಫೀಸರ್ ನಿಯಾಜ್ ಖಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ನಿಂದ ಬಂದ ಹಣದ ಬಗ್ಗೆ ಬರೆದಿದ್ದಾರೆ. ಚಿತ್ರದಿಂದ ಬಂದಿರುವ ಹಣವನ್ನು ಕಾಶ್ಮೀರಿ ಪಂಡಿತರಿಗೆ ಮನೆಯನ್ನು ಕಟ್ಟಿಕೊಡಲು ಬಳಸಬೇಕು ಹಾಗೂ ಪಂಡಿತರ ಮಕ್ಕಳ ಶಿಕ್ಷಣಕ್ಕೆ ನೀಡಬೇಕು ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಿಯಾಜ್ ಖಾನ್ ತಮ್ಮ ಟ್ವಿಟರ್ನಲ್ಲಿ ‘‘ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಕಲೆಕ್ಷನ್ 150 ಕೋಟಿ ರೂ ದಾಟಿದ್ದು, ಜನರು ಕಾಶ್ಮೀರಿ ಬ್ರಾಹ್ಮಣರ ಭಾವನೆಗಳಿಗೆ ಗೌರವ ನೀಡಿದ್ದಾರೆ. ನಿರ್ಮಾಪಕರನ್ನು ಗೌರವಿಸುತ್ತಾ, ಅವರು ಚಿತ್ರದಿಂದ ಬಂದ ಹಣವನ್ನು ಕಾಶ್ಮೀರಿ ಬ್ರಾಹ್ಮಣ ಮಕ್ಕಳ ಶಿಕ್ಷಣಕ್ಕೆ ಹಾಗೂ ಮನೆ ನಿರ್ಮಿಸಲು ನೀಡಬೇಕು. ಇದು ದೊಡ್ಡ ಕೊಡುಗೆಯಾಗಲಿದೆ’’ ಎಂದು ಬರೆದಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್ ಕಾಶ್ಮೀರಿ ಬ್ರಾಹ್ಮಣರ ಕಷ್ಟಗಳನ್ನು ತೆರೆದಿಟ್ಟಿದೆ. ಅವರು ಕಾಶ್ಮೀರದಲ್ಲಿ ಸಕಲ ಗೌರವಗಳೊಂದಿಗೆ ಮತ್ತೆ ವಾಸ ಮಾಡಲು ಅವಕಾಶ ಕಲ್ಪಿಸಬೇಕು. ಹಾಗೆಯೇ ನಿರ್ಮಾಪಕರು ದೇಶದ ಇತರ ರಾಜ್ಯಗಳಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿಯನ್ನು ಚಿತ್ರದ ಮೂಲಕ ಕಟ್ಟಿಕೊಡಬೇಕು. ಮುಸ್ಲಿಮರು ಕೂಡ ಮನುಷ್ಯರು’’ ಎಂದು ನಿಯಾಜ್ ಖಾನ್ ಬರೆದಿದ್ದಾರೆ.
ನಿಯಾಜ್ ಖಾನ್ ಟ್ವೀಟ್ ಇಲ್ಲಿದೆ:
Kashmir File shows the pain of Brahmins. They should be allowed to live safely in Kashmir with all honour. The producer must also make a movie to show the killings of Large number of Muslims across several states. Muslims are not insects but human beings and citizens of country
— Niyaz Khan (@saifasa) March 18, 2022
ಚಿತ್ರದಿಂದ ಬಂದ ಹಣವನ್ನು ದಾನ ಮಾಡಬೇಕು ಎನ್ನುವುದಕ್ಕೆ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ಏನು?
‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿಯಾಜ್ ಖಾನ್ ಟ್ವೀಟ್ ಮೂಲಕ ಹೇಳಿದ್ದ, ಚಿತ್ರದಿಂದ ಬಂದ ಹಣವನ್ನು ದಾನ ಮಾಡಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ‘‘ನಿಯಾಜ್ ಖಾನ್ ಅವರೇ, 25ನೇ ತಾರೀಖು ಭೋಪಾಲ್ಗೆ ಆಗಮಿಸುತ್ತಿದ್ದೇನೆ. ಅಂದು ನಿಮ್ಮ ಭೇಟಿಗೆ ಅವಕಾಶ ನೀಡಿ. ಆಗ ಈರ್ವರೂ ನಮ್ಮ-ನಮ್ಮ ಚಿಂತನೆಗಳನ್ನು ಹಂಚಿಕೊಳ್ಳೋಣ. ನೀವು ನಮಗೆ ಹೇಗೆ ಸಹಾಯ ಮಾಡಬಹುದು ಎಂದು ತಿಳಿಸಿಕೊಡಿ. ಹಾಗೆಯೇ ನೀವು ಪುಸ್ತಕ ಬರೆದು ಬಂದ ಹಣದಿಂದ ಹೇಗೆ ಸಹಾಯ ಮಾಡಿದ್ದೀರಿ ಹಾಗೂ ಐಎಎಸ್ ಆಫೀಸರ್ ಆಗಿ ಏನೆಲ್ಲಾ ಮಾಡಿದ್ದೀರಿ ಎನ್ನುವುದನ್ನು ಹಂಚಿಕೊಳ್ಳಿ’’ ಎಂದು ಬರೆದಿದ್ದಾರೆ ವಿವೇಕ್ ಅಗ್ನಿಹೋತ್ರಿ.
ವಿವೇಕ್ ಅಗ್ನಿಹೋತ್ರಿ ಟ್ವೀಟ್ ಇಲ್ಲಿದೆ:
Sir Niyaz Khaan Sahab, Bhopal aa raha hoon 25th ko. Please give an appointment so we can meet and exchange ideas how we can help and how you can help with the royalty of your books and your power as an IAS officer. https://t.co/9P3oif8nfL
— Vivek Ranjan Agnihotri (@vivekagnihotri) March 20, 2022
ಸದ್ಯ ವಿವೇಕ್ ಮಾರ್ಮಿಕವಾಗಿ ನುಡಿದ ಮಾತುಗಳು ವೈರಲ್ ಆಗಿದೆ. ನಿಯಾಜ್ ಖಾನ್ ಹೇಳಿಕೆಗಳು ಕೂಡ ಸಖತ್ ಸುದ್ದಿಯಾಗಿದ್ದು, ಅವರ ಟ್ವೀಟ್ಗಳಿಗೆ ಬಗೆಬಗೆಯ ಕಾಮೆಂಟ್ಗಳು ಬಂದಿವೆ. ಸಾಕಷ್ಟು ಜನರು ದ್ವೇಷದಿಂದಲೂ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ನಿಯಾಜ್ ಪ್ರತಿಕ್ರಿಯಿಸಿ, ದ್ವೇಷಪೂರಿತ ಹೇಳಿಕೆಗಳನ್ನು ಓದಿ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:
The Kashmir Files: ‘ದಿ ಕಾಶ್ಮೀರ್ ಫೈಲ್ಸ್’ಗೆ ಪೈಪೋಟಿ ನೀಡದ ‘ಬಚ್ಚನ್ ಪಾಂಡೆ’; ಎರಡೂ ಚಿತ್ರಗಳ ಕಲೆಕ್ಷನ್ ಎಷ್ಟು?
Kalyani Priyadarshan: ‘ಹೃದಯಂ’ ಮೂಲಕ ಎಲ್ಲರ ಮನಗೆದ್ದ ಕಲ್ಯಾಣಿ ಪ್ರಿಯದರ್ಶನ್; ಇಲ್ಲಿವೆ ನಟಿಯ ಕ್ಯೂಟ್ ಫೋಟೋಗಳು