ಕರ್ನಾಟಕದ ಎಲ್ಲ ಭಾಗಗಳಿಂದ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಬರಬೇಕು ಎಂದು ಕೆಲವೇ ದಿನಗಳ ಹಿಂದೆ ರಕ್ಷಿತ್ ಶೆಟ್ಟಿ ಹೇಳಿದ್ದರು. ಅದರಲ್ಲೂ ಉತ್ತರ ಕರ್ನಾಟಕ (North Karnataka) ಭಾಗದಿಂದ ಹೊಸ ತಂಡಗಳು ಬಂದು ಸಿನಿಮಾ ಮಾಡಬೇಕು ಎಂದು ಕೂಡ ಅವರು ಹೇಳಿದ್ದರು. ಈಗಾಗಲೇ ನಟ ನವೀನ್ ಶಂಕರ್ ಅವರು ಉತ್ತರ ಕರ್ನಾಟಕದ ಸೊಗಡಿನ ‘ಕ್ಷೇತ್ರಪತಿ’ ಸಿನಿಮಾ ಮಾಡಿ ಗಮನ ಸೆಳೆದಿದ್ದಾರೆ. ಈಗ ಆ ಭಾಗದಿಂದ ಮತ್ತೋರ್ವ ಹೀರೋ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ಅವರ ಹೆಸರು ಅಂಜನ್. ‘ರೂರಲ್ ಸ್ಟಾರ್’ ಅಂಜನ್ (Rural Star Anjan) ಎಂದರೆ ಜನರಿಗೆ ಚೆನ್ನಾಗಿ ತಿಳಿಯುತ್ತದೆ. ಅವರ ಹೊಸ ಸಿನಿಮಾಗೆ ‘ಚೋಳ’ (Chola) ಎಂದು ಹೆಸರು ಇಡಲಾಗಿದೆ. ಈಗ ಈ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಭರ್ಜರಿ ಆ್ಯಕ್ಷನ್ ದೃಶ್ಯಗಳ ಮೂಲಕ ಈ ಟೀಸರ್ ಗಮನ ಸೆಳೆಯುತ್ತಿದೆ.
ಅಂಜನ್ ಅವರು ‘ಚೋಳ’ ಸಿನಿಮಾ ಮಾಡುತ್ತಾರೆ ಎಂದಾಗ ಜನರಿಗೆ ಕುತೂಹಲ ಮೂಡಿತ್ತು. ಆದರೆ ಆ ಸಿನಿಮಾ ಹೇಗಿರಬಹುದು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಈಗ ಟೀಸರ್ ಬಿಡುಗಡೆ ಆಗಿದ್ದು, ‘ಚೋಳ’ ಸಿನಿಮಾದ ಆ್ಯಕ್ಷನ್ ಝಲಕ್ ಕಾಣಿಸಿದೆ. ಸುರೇಶ್ ಡಿ.ಎಂ. ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ‘ಸೃಷ್ಟಿ ಎಂಟರ್ ಪ್ರೈಸಸ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಟೀಸರ್ ನೋಡಿದ ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ. ಅಂಜನ್ ಅವರ ಆ್ಯಕ್ಷನ್ ಬಗ್ಗೆ ಭರವಸೆಯ ಮಾತುಗಳು ಕೇಳಿಬರುತ್ತಿವೆ. ಉತ್ತರ ಕರ್ನಾಟಕದ ಸಿನಿಪ್ರಿಯರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.
‘ಚೋಳ’ ಸಿನಿಮಾದಲ್ಲಿ ದಿಶಾ ಪಾಂಡೆ, ಪ್ರತಿಭಾ, ದಿನೇಶ್ ಮಂಗಳೂರು, ಬಾಲ ರಾಜವಾಡಿ, ಮನಮೋಹನ್ ರಾಯ್, ವರ್ಧನ್ ಮುಂತಾದವರು ನಟಿಸುತ್ತಿದ್ದಾರೆ. ಅವರ ಪಾತ್ರಗಳ ಝಲಕ್ ಕೂಡ ಈ ಟೀಸರ್ನಲ್ಲಿ ಕಾಣಿಸಿದೆ. ಸಂದೀಪ್ ಹೊನ್ನಾಳಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಶಿವಕುಮಾರ್ ಎ. ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾಗೆ ಬಹುತೇಕ ಚಿತ್ರೀಕರಣ ಮುಗಿದಿದೆ. ಕೆಲವೇ ದೃಶ್ಯಗಳ ಶೂಟಿಂಗ್ ಬಾಕಿ ಇದೆ. ಟೀಸರ್ ಮೂಲಕ ‘ಚೋಳ’ ಬಗ್ಗೆ ಕೌತುಕ ಮೂಡಿದೆ.
ಇದನ್ನೂ ಓದಿ: ಚಿತ್ರರಂಗಕ್ಕೆ ಹೊಸ ತಂಡಗಳು ಬರಬೇಕು, ಉತ್ತರ ಕರ್ನಾಟಕದ ಮಂದಿಗೆ ರಕ್ಷಿತ್ ಮನವಿ
ಈ ಟೀಸರ್ನಲ್ಲಿ ಅಂಜನ್ ಅವರ ಮಾಸ್ ಲುಕ್ ಗಮನ ಸೆಳೆದಿದೆ. ‘ಚೋಳ’ ಸಿನಿಮಾ ಮೇಕಿಂಗ್ ಹೇಗಿದೆ ಎಂಬುದಕ್ಕೂ ಇದರಲ್ಲಿ ಉತ್ತರ ಸಿಕ್ಕಿದೆ. ಉತ್ತರ ಕರ್ನಾಟಕದ ಹೊಸ ಹೀರೋನ ಆ್ಯಕ್ಷನ್ ಅವತಾರ ಕಂಡು ನೆಟ್ಟಿಗರು ವಾವ್ ಎಂದಿದ್ದಾರೆ. ಒಟ್ಟಿನಲ್ಲಿ ಈ ಟೀಸರ್ಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಅಲ್ಟಿಮೇಟ್ ಶಿವು ಮತ್ತು ರಾಜ ಅವರು ಈ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಲವ್ ಮತ್ತು ರೌಡಿಸಂ ಕುರಿತ ಕಥಾಹಂದರ ಈ ಸಿನಿಮಾದಲ್ಲಿ ಇರಲಿದೆ. ‘ಚೋಳ’ ಎಂದರೆ ಐತಿಹಾಸಿಕ ಕಥೆಯುಳ್ಳ ಸಿನಿಮಾ ಅಲ್ಲ. ಇದು ಪಕ್ಕಾ ಮಾಸ್ ಮಸಾಲಾ ಸಿನಿಮಾ ಎಂಬುದು ಟೀಸರ್ ಮೂಲಕ ಗೊತ್ತಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.