ಮನೋಜ್ಞ ನಟನೆ ಮೂಲಕ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದಿದ್ದ ಸಂಚಾರಿ ವಿಜಯ್ (Sanchari Vijay) ಅವರು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ನೆನಪುಗಳು ಹಸಿರಾಗಿವೆ. ರಾಷ್ಟ್ರ ಪ್ರಶಸ್ತಿ (National Award) ಪಡೆಯುವ ಮೂಲಕ ಅವರು ಮಾಡಿದ ಸಾಧನೆ ಕನ್ನಡ ಚಿತ್ರರಂಗದ ಇತಿಹಾಸದ ಪುಟದಲ್ಲಿ ಸದಾ ಸ್ಮರಣೀಯವಾಗಿ ಇರುತ್ತದೆ. ಇಂದು (ಜುಲೈ 17) ಸಂಚಾರಿ ವಿಜಯ್ ಅವರ ಹುಟ್ಟುಹಬ್ಬ (Sanchari Vijay Birthday). ಅವರು ಇದ್ದಿದ್ದರೆ ಬಹಳ ಖುಷಿಯಿಂದ ಆಪ್ತರು ಈ ದಿನವನ್ನು ಸೆಲೆಬ್ರೇಟ್ ಮಾಡುತ್ತಿದ್ದರು. ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದರು. ಈಗ ಸಂಚಾರಿ ವಿಜಯ್ ಅವರ ಅನುಪಸ್ಥಿತಿ ಕಾಡುತ್ತಿದೆ. ಇಂಥ ಓರ್ವ ನಟ ನಮ್ಮ ಚಿತ್ರರಂಗದಲ್ಲಿ ಇರಬೇಕಿತ್ತು ಎಂದು ಎಲ್ಲರೂ ಹೇಳುತ್ತಿದ್ದಾರೆ. ಜನ್ಮದಿನದ ಪ್ರಯುಕ್ತ ಸಂಚಾರಿ ವಿಜಯ್ ಅವರನ್ನು ಸ್ಮರಿಸಿಕೊಳ್ಳಲಾಗುತ್ತಿದೆ.
ರಂಗಭೂಮಿಯ ಹಿನ್ನೆಲೆಯಿಂದ ಬಂದವರು ಸಂಚಾರಿ ವಿಜಯ್. ಎಂಥ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲಂತಹ ಕಲಾವಿದ ಅವರಾಗಿದ್ದರು. ‘ಹರಿವು’ ಸಿನಿಮಾದಲ್ಲಿ ಮಗನನ್ನು ಕಳೆದುಕೊಂಡ ಅಸಹಾಯಕ ತಂದೆಯಾಗಿ ಅವರು ತೋರಿದ ಅಭಿನಯವನ್ನು ಮರೆಯುವಂತಿಲ್ಲ. ‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿ ಮಂಗಳಮುಖಿಯಾಗಿ ನಟಿಸಿ ಎಲ್ಲರನ್ನೂ ನಿಬ್ಬರಗಾಗಿಸಿದ ಮಹಾನ್ ಕಲಾವಿದ ಅವರು. ಆ ಚಿತ್ರಕ್ಕೆ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದ ಸಂಚಾರಿ ವಿಜಯ್ ಅನೇಕ ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದರು.
ನಟನೆ, ಪ್ರತಿಭೆ ಇತ್ಯಾದಿ ವಿಷಯಗಳನ್ನೆಲ್ಲ ಬದಿಗಿಟ್ಟು ಸಾಮಾನ್ಯ ಮನುಷ್ಯನಾಗಿ ನೋಡಿದರೂ ಅವರೊಬ್ಬ ಹೃದಯವಂತ ವ್ಯಕ್ತಿ. ಕಷ್ಟ ಎಂದು ಬಂದವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದ ರಿಯಲ್ ಹೀರೋ ಅವರಾಗಿದ್ದರು. ಕೊವಿಡ್ ಲಾಕ್ಡೌನ್ ಸಂದರ್ಭದಲ್ಲಿ ಅನೇಕರಿಗೆ ಅವರು ನೆರವು ನೀಡಿದ್ದರು. ಕನ್ನಡ ಚಿತ್ರರಂಗದ ಹಿರಿಯ ಗೀತಸಾಹಿತಿ ಭಂಗಿ ರಂಗ ಅವರಿಗೆ ಕಷ್ಟದ ಸಂದರ್ಭದಲ್ಲಿ ಆರ್ಥಿಕ ಸಹಾಯ ಸಿಗುವಂತೆ ಮಾಡಿದ್ದರು. ಇಂಥ ಹೃದಯ ಶ್ರೀಮಂತನನ್ನು ಕಳೆದುಕೊಂಡಿದ್ದು ತೀವ್ರ ನೋವಿನ ಸಂಗತಿ.
ಆ ಕರಾಳ ದಿನ:
2021ರ ಜೂನ್ 12ರ ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ಸಂಚಾರಿ ವಿಜಯ್ ಅವರಿಗೆ ಆಕ್ಸಿಡೆಂಟ್ ಆಗಿತ್ತು. ಸ್ನೇಹಿತ ನವೀನ್ ಅವರ ಬೈಕ್ನಲ್ಲಿ ಹಿಂಬದಿ ಕುಳಿತು ವಿಜಯ್ ಪ್ರಯಾಣ ಮಾಡುತ್ತಿದ್ದರು. ಅಪಘಾತದ ತೀವ್ರತೆಗೆ ಅವರ ತಲೆ ಮತ್ತು ತೊಡೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸರ್ಜರಿ ಮಾಡಿದ ಬಳಿಕ 48 ಗಂಟೆ ಕಳೆದರೂ ಅವರ ಬ್ರೇನ್ ಕಡೆಯಿಂದ ಪ್ರತಿಕ್ರಿಯೆ ಇರಲಿಲ್ಲ. ಮೆದುಳಿನ ಕೆಲಸಗಳು ನಿಂತು ಹೋಗಿದ್ದವು. ಅವರು ನಿಧನರಾಗಿದ್ದಾರೆ ಎಂದು ಜೂನ್ 14ರಂದು ವೈದ್ಯರು ಮತ್ತು ಕುಟುಂಬದವರು ಮಾಹಿತಿ ನೀಡಿದ್ದರು.