ನಟ ಸಂಚಾರಿ ವಿಜಯ್ ಅವರನ್ನು ಕಳೆದುಕೊಂಡು ಸ್ಯಾಂಡಲ್ವುಡ್ ಬಡವಾಗಿದೆ. ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಈ ಅಪ್ಪಟ ಕಲಾವಿದ ರಸ್ತೆ ಅಪಘಾತಕ್ಕೆ ಬಲಿ ಆಗಿದ್ದು ನೋವಿನ ಸಂಗತಿ. ನಿಧನರಾಗುವುದಕ್ಕೂ ಮುನ್ನ ಅವರು ಅನೇಕ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರು. ಬೇರೆ ಬೇರೆ ಪಾತ್ರಗಳ ಮೂಲಕ ಜನರನ್ನು ರಂಜಿಸುತ್ತಿದ್ದರು. ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಬೇಕು ಎಂಬುದು ಅವರ ಮೊದಲ ಆಶಯ ಆಗಿತ್ತು. ಅದಕ್ಕಾಗಿ ಎಂಥ ರಿಸ್ಕ್ ಬೇಕಿದ್ದರೂ ತೆಗೆದುಕೊಳ್ಳಲು ಅವರು ತಯಾರಾಗಿದ್ದರು. ಆ ಮಾತಿಗೆ ಉದಾಹರಣೆ ಎಂದರೆ ಮೇಲೊಬ್ಬ ಮಾಯಾವಿ ಸಿನಿಮಾದ ಒಂದು ದೃಶ್ಯ.
ನವೀನ್ ಕೃಷ್ಣ ನಿರ್ದೇಶನದ ಮೇಲೊಬ್ಬ ಮಾಯಾವಿ ಸಿನಿಮಾದಲ್ಲಿ ಸಂಚಾರಿ ವಿಜಯ್ ಪ್ರಮುಖ ಪಾತ್ರ ಮಾಡಿದ್ದರು. ಇದೇ ಸಿನಿಮಾದಲ್ಲಿ ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಕೂಡ ಅಭಿನಯಿಸಿದ್ದಾರೆ. ಆ ಚಿತ್ರ ಇನ್ನೂ ತೆರೆಕಂಡಿಲ್ಲ. ಕೇವಲ ಟ್ರೇಲರ್ ಮತ್ತು ಹಾಡುಗಳ ಮೂಲಕ ಕುತೂಹಲ ಮೂಡಿಸಿದೆ. ‘ಮೇಲೊಬ್ಬ ಮಾಯಾವಿ’ ಶೂಟಿಂಗ್ ವೇಳೆ ಸಂಚಾರಿ ವಿಜಯ್ ಅವರು ಪ್ರಾಣವನ್ನೇ ಪಣಕ್ಕಿಟ್ಟು ಸಾಹಸ ಮಾಡಿದ್ದರು.
ಹರಿಯುವ ನೀರಿನಲ್ಲಿ ಒಂದು ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ನದಿ ನೀರಿನ ಸುಳಿಯ ಪಕ್ಕದಲ್ಲೇ ಸಂಚಾರಿ ವಿಜಯ್ ಅವರು ಶೀರ್ಷಾಸನ ಹಾಕಿದ್ದರು. ಪ್ರಾಣವನ್ನೂ ಲೆಕ್ಕಿಸದೇ ನದಿಯಲ್ಲಿ ಪಲ್ಟಿ ಹೊಡೆದಿದ್ದರು. ಸ್ವಲ್ಪವೇ ಯಾಮಾರಿದ್ರೂ ಕೂಡ ಅಂದೇ ಅವರ ಪ್ರಾಣಕ್ಕೆ ಕುತ್ತು ಬರುತ್ತಿತ್ತು. ಆ ದೃಶ್ಯದ ಶೂಟಿಂಗ್ ವೇಳೆ ಎಲ್ಲರೂ ಬೆಚ್ಚಿ ಬಿದ್ದಿದ್ದರು. ಪಾತ್ರಕ್ಕಾಗಿ ಸಂಚಾರಿ ವಿಜಯ್ ತೋರಿಸುತ್ತಿದ್ದ ಬದ್ಧತೆ ಕಂಡು ಸೆಟ್ನಲ್ಲಿ ಇದ್ದವರೆಲ್ಲ ಅಚ್ಚರಿಪಟ್ಟಿದ್ದರು.
ಅಂದು ಚಿತ್ರೀಕರಣದ ವೇಳೆ ಏನಾಯ್ತು ಎಂಬುದನ್ನು ವಿವರಿಸುವಂತಹ ಮೇಕಿಂಗ್ ವಿಡಿಯೋ ಈಗ ಲಭ್ಯವಾಗಿದೆ. ಈ ಸಿನಿಮಾ ಮಾತ್ರವಲ್ಲದೆ, ಅನೇಕ ವಿಶೇಷ ಚಿತ್ರಗಳಲ್ಲಿ ಸಂಚಾರಿ ವಿಜಯ್ ನಟಿಸುತ್ತಿದ್ದರು. ಲಂಕೆ, ಅವಸ್ಥಾಂತರ, ಪಿರಂಗಿಪುರ, ಪುಕ್ಸಟ್ಟೆ ಲೈಫು, ತಲೆದಂಡ ಮುಂತಾದ ಸಿನಿಮಾಗಳು ಬಿಡುಗಡೆ ಆಗುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದು ದುಃಖದ ಸಂಗತಿ.
ಜೂ.12ರ ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ಸಂಚಾರಿ ವಿಜಯ್ ಅವರಿಗೆ ಆಕ್ಸಿಡೆಂಟ್ ಆಗಿತ್ತು. ಸ್ನೇಹಿತ ನವೀನ್ ಅವರ ಬೈಕ್ನಲ್ಲಿ ಹಿಂಬದಿ ಕುಳಿತು ವಿಜಯ್ ಪ್ರಯಾಣ ಮಾಡುತ್ತಿದ್ದರು. ಅಪಘಾತದ ತೀವ್ರತೆಗೆ ಅವರು ತಲೆ ಮತ್ತು ತೊಡೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಆದ ಪರಿಣಾಮ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. ಕಡೆಗೂ ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾದರು.
ಇದನ್ನೂ ಓದಿ:
ನಟ ಸಂಚಾರಿ ವಿಜಯ್ಗೆ ಜಾತಿ ಭೇದ ಮಾಡಲಾಗಿತ್ತು ಎಂಬ ಆರೋಪ ಸುಳ್ಳು; ಸಹೋದರ ವಿರೂಪಾಕ್ಷ ಸ್ಪಷ್ಟನೆ
ಸಂಚಾರಿ ವಿಜಯ್ ಬಗ್ಗೆ ಸುಳ್ಳುಗಳ ಸರಮಾಲೆ? ತಪ್ಪು ಮಾಹಿತಿ ಹಬ್ಬಿಸುವವರಿಗೆ ಲಿಂಗದೇವರು ಧಿಕ್ಕಾರ