ಸ್ಯಾಂಡಲ್ವುಡ್ (Sandalwood) ಹಾಗೂ ಕಿರುತೆರೆ ನಿರ್ದೇಶಕ ಕೆ.ಎನ್.ಮೋಹನ್ ಕುಮಾರ್ (KN Mohan Kumar) ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ಮೋಹನ್ ಅವರು ‘ಬೊಂಬೆಯಾಟ’ ಚಿತ್ರದ (Bombeyata Movie) ಮೂಲಕ ಖ್ಯಾತಿ ಗಳಿಸಿದ್ದರು. ಛಾಯಾಗ್ರಹಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಅವರು ರಂಗಭೂಮಿಯಲ್ಲಿಯೂ ಗುರುತಿಸಿಕೊಂಡಿದ್ದರು. ಮೋಹನ್ ಕುಮಾರ್ ಅವರು ನಿರೂಪಕಿ ಹಾಗೂ ನಟಿ ವತ್ಸಲಾ ಮೋಹನ್ ಪತಿ. ನಟಿ ಅನನ್ಯಾ ಮೋಹನ್ ಇವರ ಪುತ್ರಿ. ಮೋಹನ್ ಕುಮಾರ್ ಅವರು ಕುಟುಂಬ, ಅಭಿಮಾನಿಗಳು ಹಾಗೂ ಬಂಧುವರ್ಗದವನ್ನು ಅಗಲಿದ್ದಾರೆ.
ಎಂಜಿನಿಯರ್ ಪದವೀಧರರಾಗಿದ್ದ ಮೋಹನ್ ಅವರು ಪತ್ರಿಕೋದ್ಯಮ, ಪ್ರಕಾಶನ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದರು. ‘ಮೈಸೂರು ಮಲ್ಲಿಗೆ’ ಚಿತ್ರದ ನಾಯಕನಿಗೆ ಧ್ವನಿ ನೀಡಿದ್ದರು. ಮೋಹನ್ ನಿರ್ದೇಶಿಸಿದ್ದ ‘ಬೊಂಬೆಯಾಟ’ ಚಿತ್ರ ಅವರ ಪತ್ನಿ ವತ್ಸಲಾ ಮೋಹನ್ ಅವರ ಕಾದಂಬರಿ ‘ಸಜ್ಜಾದನಾ ಗಣೇಶ’ವನ್ನು ಆಧರಿಸಿತ್ತು. ಅದು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಲ್ಲದೇ ರಷ್ಯಾದ ಮಾಸ್ಕೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು.
ಜಯನಗರ 3ನೇ ಬ್ಲಾಕ್ ಪೂರ್ಚ 8ನೇ ಮುಖ್ಯರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆನೇಕಲ್ ತಾಲೂಕಿನ ಸಮಂದೂರಿನಲ್ಲಿ ಇಂದು ಅಂದರೆ ಮಂಗಳವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:03 am, Tue, 24 May 22