ಪತಿ, ಮಾವನ ವಿರುದ್ಧ ಪೊಲೀಸರಿಗೆ ದೂರು ಕೊಟ್ಟ ನಟಿ ಚೈತ್ರಾ ಹಳ್ಳಿಕೇರಿ
ತನ್ನ ಅನುಮತಿಯಿಲ್ಲದೆ ಗೋಲ್ಡ್ ಲೋನ್ ಪಡೆಯಲಾಗಿದೆ ಎಂಬುದು ನಟಿಯ ಆರೋಪ
ಮೈಸೂರು: ಬ್ಯಾಂಕ್ ಖಾತೆ ದುರ್ಬಳಕೆ ಆರೋಪ ಹೊರಿಸಿ ನಟಿ ಚೈತ್ರಾ ಹಳ್ಳಿಕೇರಿ (Chytra Hallikeri) ತನ್ನ ಪತಿ ಮತ್ತು ಮಾವನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಮೈಸೂರಿನ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಅನುಮತಿಯಿಲ್ಲದೆ ಗೋಲ್ಡ್ ಲೋನ್ ಪಡೆಯಲಾಗಿದೆ ಎಂದು ಪತಿ ಬಾಲಾಜಿ ಪೋತರಾಜ್, ಮಾವ ಪೋತರಾಜ್ ವಿರುದ್ಧ ಚೈತ್ರಾ ದೂರು ನೀಡಿದ್ದಾರೆ. ಗೋಲ್ಡ್ ಲೋನ್ ಪಡೆಯುವ ವೇಳೆ ತನ್ನ ಸಹಿಯನ್ನು ನಕಲು (ಫೋರ್ಜರಿ) ಮಾಡಲಾಗಿದೆ. ಈ ಅವ್ಯವಹಾರದಲ್ಲಿ ಬ್ಯಾಂಕ್ ಮ್ಯಾನೇಜರ್ ಕೂಡ ಶಾಮೀಲಾಗಿದ್ದಾರೆ. ಪ್ರಕರಣ ಸಂಬಂಧ ತಮಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಅವರು ಮೂರು ದಿನಗಳ ಹಿಂದೆಯೇ ದೂರು ನೀಡಿದ್ದಾರೆ. ಈ ಸಂಬಂಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಸಂಬಂಧ ಚೈತ್ರಾ ಹಳ್ಳೀಕೇರಿ ತನ್ನ ಗಂಡ, ಮಾವ ಹಾಗೂ ಬ್ಯಾಂಕ್ ಮ್ಯಾನೇಜರ್ ವಿರುದ್ಧ ದೂರು ದಾಖಲಿಸಿದ್ದಾರೆ. ನನಗೆ ಜೀವ ಬೆದರಿಕೆ ಇದೆ ಸೂಕ್ತ ರಕ್ಷಣೆ ಕೊಡಿ ಎಂದೂ ಅವರು ಕೋರಿದ್ದಾರೆ. ಗಂಡ, ಮಾವನ ಷಡ್ಯಂತ್ರದ ವಹಿವಾಟಿಗೆ ಜಯಲಕ್ಷ್ಮೀಪುರಂನ ಸೌತ್ ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ನೆರವಾಗಿದ್ದಾರೆ ಎಂದು ದೂರಿದ್ದಾರೆ. ನನ್ನ ಖಾತೆ ಮೂಲಕ ₹ 13 ಲಕ್ಷದ ಚಿನ್ನ ಅಡವಿಟ್ಟು ವಂಚಿಸಲಾಗಿದೆ. ಪತಿ ವಿರುದ್ಧ ಈಗಾಗಲೇ ದೈಹಿಕ ಹಲ್ಲೆ ಆರೋಪಿಸಿ ಕೇಸ್ ಹಾಕಿದ್ದೇನೆ. ನನ್ನ ಬ್ಯಾಂಕ್ ಖಾತೆ ದುರ್ಬಳಕೆ ಮಾಡಿದ್ದು ಗೊತ್ತಾಗಿ ಈಗ ಮತ್ತೊಂದು ಪ್ರಕರಣ ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.
ಖುಷಿ, ಶಿಷ್ಯ, ಗುನ್ನ ಸೇರಿದಂತೆ ಹಲವು ಚಿತ್ರಗಳಲ್ಲಿ ಚೈತ್ರಾ ನಾಯಕಿಯಾಗಿ ನಟಿಸಿದ್ದರು. ‘ಅರ್ಥ ಮಾಡ್ಕೊಳೋ.. ನನ್ ಅರ್ಥ ಮಾಡ್ಕೊಳೋ…’, ’ಕಳ್ಳ ಚಂದಮಾಮ…’ ಸೇರಿದಂತೆ ಹಲವು ಹಾಡುಗಳು ಚೈತ್ರಾ ಅವರಿಗೆ ಹೆಸರು ತಂದುಕೊಟ್ಟಿದ್ದವು. ಸುಮಾರು 16 ವರ್ಷಗಳ ಹಿಂದೆ ಬಾಲಾಜಿ ಪೋತರಾಜ್ ಎಂಬ ಉದ್ಯಮಿಯನ್ನು ಮದುವೆಯಾಗಿದ್ದರು. ಈ ವೇಳೆ ಉದ್ಯಮಿ ಮದುವೆಯ ನಂತರ ನಟನೆ ಬಿಡಬೇಕು ಎಂಬ ಷರತ್ತು ಹಾಕಿದ್ದರು ಎಂದು ಹೇಳಲಾಗಿದೆ.
‘ಮದುವೆ ನಂತರ ನಟನೆ ಬಿಡಬೇಕು ಎಂಬ ಷರತ್ತನ್ನು ನಾನು ಪಾಲಿಸಿದ್ದೆ. ಆದರೆ, ನನಗೆ ತುಂಬಾ ಕಷ್ಟವಾಗುತ್ತಿತ್ತು. ಹೇಗೋ ಕಷ್ಟಪಟ್ಟು ಧಾರಾವಾಹಿ ನಿರ್ಮಿಸಿದ್ದೆ. ಅದರಲ್ಲಿ ಆದ ಸಂಪಾದನೆಯನ್ನೂ ಪತಿ ಕಿತ್ತುಕೊಂಡಿದ್ದರು. ಅಷ್ಟೇ ಅಲ್ಲದೆ ನನ್ನನ್ನು ಥಳಿಸಿದ್ದರು’ ಎಂದು ಮಾರ್ಚ್ 14, 2018ರಂದು ಚೈತ್ರಾ ಬಸವನಗುಡಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.
ನನಗೆ ಪ್ರಾಣ ಬೆದರಿಕೆ ಇದೆ: ರಕ್ಷಣೆ ಕೊಡಿ
ನನಗೆ ಬೆದರಿಕೆ ಇದೆ ನನಗೆ ರಕ್ಷಣೆ ಕಲ್ಪಿಸಿ ಎಂದು ಪೊಲೀಸರನ್ನು ವಿನಂತಿಸಿದ್ದೇನೆ. ನಾನು ಇಬ್ಬರು ಮಕ್ಕಳೊಂದಿಗೆ ಬದುಕುತ್ತಿರುವ ಸಿಂಗಲ್ ಮದರ್. ನನಗೆ ಪ್ರೊಟೆಕ್ಷನ್ ಸಿಕ್ಕ ನಂತರವೇ ಆಚೆ ಬಂದು, ಹೇಳಿಕೆ ಕೊಡುತ್ತೇನೆ. ಮಧ್ಯಾಹ್ನದ ಹೊತ್ತಿಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತೇನೆ ಎಂದು ಚೈತ್ರಾ ಟಿವಿ9ಗೆ ಪ್ರತಿಕ್ರಿಯಿಸಿದರು.
Published On - 7:14 am, Tue, 24 May 22