ಸರಸ್ವತಿ ಪುತ್ರ, ಸಹೃದಯಿ ಕವಿ, ಕನ್ನಡ ಚಲನಚಿತ್ರ ಗೀತೆ ರಚನೆಕಾರ, ಸಾಹಿತಿ ಡಾ. ವಿ ನಾಗೇಂದ್ರ ಪ್ರಸಾದ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರೆಟ್ ನೀಡಿ ಗೌರವಿಸಿದೆ. ಅಂದಹಾಗೆ, ಮಂಡ್ಯ ನಾಗಮಂಗಲ ಮೂಲದ 45 ವರ್ಷದ ಡಾ. ನಾಗೇಂದ್ರ ಪ್ರಸಾದ್ ಅವರು ಸ್ವಯಂಕೃಷಿಯಿಂದ ಆಯುರ್ವೇದ ವೈದ್ಯ ಪದ್ದತಿ ವ್ಯಾಸಂಗ ಮಾಡಿ ಇದಕ್ಕೂ ಮೊದಲು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಕನ್ನಡ ಚಲನಚಿತ್ರ ಗೀತೆಗಳ ಸಾಮಾಜಿಕ ಪರಿಣಾಮ: ಒಂದು ಅಧ್ಯಯನ ಎಂಬ ಸಕಾಲಿಕ, ತುಲನಾತ್ಮಕ ವಿಷಯದ ಕುರಿತು ಡಿ. ಲಿಟ್ (ಡಾಕ್ಟರ್ ಆಫ್ ಲಿಟರೇಚರ್) ಪದವಿಗಾಗಿ ನಡೆಸಿದ ಅಧ್ಯಯನಕ್ಕಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯವು, ತನ್ನ 2ನೇ ನುಡಿಹಬ್ಬದಲ್ಲಿ ಡಾಕ್ಟರೇಟ್ ನೀಡಿದೆ.
‘ಗಾಜಿನ ಮನೆ’ ಮೂಲಕ 22 ವರ್ಷಗಳ ಹಿಂದೆ ಚಿತ್ರೋದ್ಯಮ ಪ್ರವೇಶಿಸಿದ ಡಾ. ನಾಗೇಂದ್ರ ಪ್ರಸಾದ್ ಅವರು ಚಂದನವನದಲ್ಲಿ ನಟ, ಗೀತ ರಚನೆಕಾರ, ಸಂಗೀತಗಾರ, ನಿರ್ದೇಶಕ, ಸಂಭಾಷಣೆಕಾರ.. ಹೀಗೆ ಇನ್ನೂ ನಾನಾ ಅವತಾರಗಳಲ್ಲಿ ಮಿಂಚಿ, ಕನ್ನಡಿಗರ ಹೃದಯಗೆದ್ದಿದ್ದಾರೆ.
ಕಿರುತೆರೆಯಲ್ಲೂ ಮಿಂಚಿರುವ ಡಾ. ನಾಗೇಂದ್ರ ಪ್ರಸಾದ್ ಅವರದು ನಾಟಕ, ಬೀದಿ ನಾಟಕಗಳಲ್ಲೂ ಎತ್ತಿದ ಕೈ. ಸಾವಿರಾರು ಚಲನಚಿತ್ರಗಳಲ್ಲಿ 3,000ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ಭಕ್ತಿಗೀತೆ, ದೇಶಭಕ್ತಿ ಗೀತೆ, ಭಾವಗೀತೆ, ಜನಪದ ಗೀತೆ, ಧಾರಾವಾಹಿ, ಆಲ್ಬಂಗಳಿಗೆ ಹಾಡು ಬರೆದಿದ್ದಾರೆ.
Published On - 11:30 am, Sat, 10 April 21