ಬಾಲಿವುಡ್​ಗೆ ರಿಮೇಕ್​ ಆಗುತ್ತಿರುವ ಕನ್ನಡದ Act 1978 ಚಿತ್ರ! ಹಿಂದಿಯಲ್ಲಿ ನಾಯಕಿ ಯಾರು?

ಬಾಲಿವುಡ್​ಗೆ ರಿಮೇಕ್​ ಆಗುತ್ತಿರುವ ಕನ್ನಡದ Act 1978 ಚಿತ್ರ! ಹಿಂದಿಯಲ್ಲಿ ನಾಯಕಿ ಯಾರು?
ಯಜ್ಞಾ ಶೆಟ್ಟಿ - ಆಕ್ಟ್​ 1978 ಸಿನಿಮಾ

ಕನ್ನಡದಲ್ಲಿ ಗಮನ ಸೆಳೆದ Act 1978 ಚಿತ್ರ ಈಗ ಇನ್ನೊಂದು ಹಂತ ಮೇಲೇರುತ್ತಿದೆ. ಹಿಂದಿಯಲ್ಲಿ ಈ ಚಿತ್ರವನ್ನು ರಿಮೇಕ್​ ಮಾಡಲು ನಿರ್ಮಾಪಕರೊಬ್ಬರು ಮುಂದೆ ಬಂದಿದ್ದಾರೆ. ದೊಡ್ಡ ಬಜೆಟ್​ನಲ್ಲಿಯೇ ಈ ಚಿತ್ರ ನಿರ್ಮಾಣ ಆಗಲಿದೆ.

Madan Kumar

|

Apr 10, 2021 | 8:04 AM

ಒಳ್ಳೆಯ ಕಥಾವಸ್ತು ಇದ್ದರೆ ಕನ್ನಡದ ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಆ ರೀತಿ ಗಮನ ಸೆಳೆದ ಆಕ್ಟ್​-1978 ಸಿನಿಮಾವೇ ಈ ಮಾತಿಗೆ ಸಾಕ್ಷಿ. ಖ್ಯಾತ ನಿರ್ದೇಶಕ ಮಂಸೋರೆ ಅವರ ಬತ್ತಳಿಕೆಯಿಂದ ಬಂದ ಈ ಸಿನಿಮಾದಲ್ಲಿ ಯಜ್ಞಾ ಶೆಟ್ಟಿ ಅವರು ಪ್ರಮುಖ ಪಾತ್ರ ಮಾಡಿದ್ದರು. ಒಂದು ಗಂಭೀರವಾದ ವಿಚಾರವನ್ನು ಸಖತ್​ ಥ್ರಿಲ್ಲಿಂಗ್​ ಆದಂತಹ ಶೈಲಿಯಲ್ಲಿ ಮಂಸೋರೆ ನಿರೂಪಿಸಿದ್ದರು. ಆ ಚಿತ್ರವೀಗ ಹಿಂದಿಗೆ ರಿಮೇಕ್​ ಆಗುತ್ತಿದೆ.

ಸರ್ಕಾರಿ ಅಧಿಕಾರಿಗಳು ಮಾಡುವ ಭ್ರಷ್ಟಾಚಾರದ ಕಥೆಯನ್ನೇ ತುಂಬ ಹೊಸ ರೀತಿಯಲ್ಲಿ ನಿರ್ದೇಶಕ ಮಂಸೋರೆ ಕಟ್ಟಿಕೊಟ್ಟ ರೀತಿಗೆ ಎಲ್ಲರೂ ಫಿದಾ ಆಗಿದ್ದರು. ಲಾಕ್​ಡೌನ್​ ಸಡಿಲಿಕೆ ಬಳಿಕ ತೆರೆಕಂಡ ಈ ಚಿತ್ರಕ್ಕೆ ಇಡೀ ಕನ್ನಡ ಸಿನಿಮಾರಂಗವೇ ಬೆಂಬಲ ನೀಡಿತ್ತು. ಆಕ್ಟ್​ 1978 ಚಿತ್ರತಂಡವನ್ನು ತಮ್ಮ ಮನೆಗೆ ಕರೆಸಿಕೊಂಡು ನಟ ದರ್ಶನ್​ ಅವರು ಬೆನ್ನು ತಟ್ಟಿದ್ದರು. ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಬಾಯಿತುಂಬಾ ಹೊಗಳಿದ್ದರು.

ಇಷ್ಟೆಲ್ಲ ಮನ್ನಣೆ ಪಡೆದುಕೊಂಡ Act 1978 ಚಿತ್ರ ಈಗ ಇನ್ನೊಂದು ಹಂತ ಮೇಲೇರುತ್ತಿದೆ. ಹಿಂದಿಯಲ್ಲಿ ಈ ಚಿತ್ರವನ್ನು ರಿಮೇಕ್​ ಮಾಡಲು ನಿರ್ಮಾಪಕರೊಬ್ಬರು ಮುಂದೆ ಬಂದಿದ್ದಾರೆ. ದೊಡ್ಡ ಬಜೆಟ್​ನಲ್ಲಿಯೇ ಈ ಚಿತ್ರ ನಿರ್ಮಾಣ ಆಗಲಿದೆ. ಸದ್ಯ ಇಷ್ಟು ಮಾಹಿತಿಯನ್ನಷ್ಟೇ ಚಿತ್ರತಂಡ ಬಿಟ್ಟುಕೊಟ್ಟಿದೆ. ಹಿಂದಿ ರಿಮೇಕ್​ನಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಯಾರಿಗೆ ಸಿಗಲಿದೆ ಎಂಬ ಪ್ರಶ್ನೆ ಸಿನಿಪ್ರಿಯರ ಮನದಲ್ಲಿ ಉದ್ಭವ ಆಗಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆಯೇ ಶೀಘ್ರದಲ್ಲಿ ಮಾಹಿತಿ ಹಂಚಿಕೊಳ್ಳಲಿದೆ.

ಕೊರೊನಾ ವೈರಸ್​ ಹಾವಳಿ ಜೋರಾಗಿರುವಂತಹ ಸಂದರ್ಭದಲ್ಲಿ ಜನರು ಚಿತ್ರಮಂದಿರಕ್ಕೆ ಬರುತ್ತಾರೋ ಇಲ್ಲವೋ ಎಂಬ ಅನುಮಾನ ಇತ್ತು. ಅಂಥ ಪರಿಸ್ಥಿತಿಯಲ್ಲೂ ಧೈರ್ಯ ಮಾಡಿ, 2020ರ ನವೆಂಬರ್​ 20ರಂದು ಆಕ್ಟ್​ 1978 ಚಿತ್ರ ತೆರೆಕಂಡಿತ್ತು. ಚಿತ್ರಮಂದಿರದಲ್ಲಿ ಶೇ.50ರಷ್ಟು ಆಸನ ಮಿತಿ ಹೇರಲಾಗಿದ್ದರೂ ಕೂಡ ಜನರು ಮುಗಿಬಿದ್ದು ಈ ಚಿತ್ರವನ್ನು ವೀಕ್ಷಿಸಿದ್ದರು. ಬಳಿಕ ಓಟಿಟಿಗೆ ಕಾಲಿಟ್ಟ ಈ ಸಿನಿಮಾ ಅಮೇಜಾನ್​ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಾಯಿತು. ಅಲ್ಲಿ ಪರಭಾಷೆ ಮಂದಿ ಕೂಡ ಚಿತ್ರವನ್ನು ನೋಡಿ ಮೆಚ್ಚುಗೆ ಸೂಚಿಸಿದರು. ಈಗ ಹಿಂದಿಗೆ ರಿಮೇಕ್​ ಆಗುತ್ತಿರುವುದು ಹೆಮ್ಮೆಯ ಸಂಗತಿ.

ಇದನ್ನೂ ಓದಿ: ‘Act 1978’ ಚಿತ್ರ ಮಿಸ್​ ಮಾಡಿಕೊಂಡವರಿಗೆ ಇಲ್ಲಿದೆ ಗುಡ್​ ನ್ಯೂಸ್​! ಮನೆಯಲ್ಲೇ ಕುಳಿತು ಸಿನಿಮಾ ನೋಡಿ

(Yagna Shetty starrer Act 1978 Kannada Movie to have its Bollywood remake)

Follow us on

Related Stories

Most Read Stories

Click on your DTH Provider to Add TV9 Kannada