Actor Shivaram Death: ಹಿರಿಯ ನಟ ಶಿವರಾಂ ನಿಧನ: ಕೊನೆಗೂ ಈಡೇರಲಿಲ್ಲ ಅಭಿಮಾನಿಗಳ ಪ್ರಾರ್ಥನೆ
Actor Shivaram Passes Away: ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಕನ್ನಡ ಚಿತ್ರರಂಗದ ಹಿರಿಯ ಚೇತನ ನಟ ಎಸ್.ಶಿವರಾಂ (S. Shivaram) ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಕಿರುತೆರೆ ಹಾಗೂ ಹಿರಿತೆರೆಯ ಹಲವಾರು ಚಿತ್ರ ಹಾಗೂ ಸೀರಿಯಲ್ಗಳಲ್ಲಿ ಅವರು ನಟಿಸಿದ್ದರು. ಇತ್ತೀಚೆಗೆ ಅವರಿಗೆ ಅಪಘಾತವಾಗಿ, ತಲೆಗೆ ಪೆಟ್ಟು ಬಿದ್ದಿತ್ತು. ವಯಸ್ಸಾದ ಕಾರಣ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
‘ನಮ್ಮ ತಂದೆ ಶಿವರಾಮ್ರವರು ಇನ್ನು ನಮ್ಮ ಜತೆ ಇಲ್ಲ. ಶಿವರಾಮ್ರವರು ಭಗವಂತನ ಪಾದ ಸೇರಿದ್ದಾರೆ. ಆಸ್ಪತ್ರೆ ವತಿಯಿಂದ ಎಲ್ಲಾ ರೀತಿ ಚಿಕಿತ್ಸೆ ನೀಡಿದ್ದಾರೆ. ಆದರೆ ಶಿವರಾಮ್ರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಅವರ ಮಗ ಲಕ್ಷ್ಮೀಶ್ ಹೇಳಿದ್ದಾರೆ.
1938ರಲ್ಲಿ ಚೂಡಸಂದ್ರ ಹಳ್ಳಿಯಲ್ಲಿ ಜನಿಸಿದ್ದ ಎಸ್. ಶಿವರಾಂ, 6 ದಶಕಗಳ ಕಾಲ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಚಿತ್ರರಂಗದಲ್ಲಿ ಅವರು ಶಿವರಾಮಣ್ಣ ಎಂದೇ ಎಲ್ಲರಿಗೂ ಪರಿಚಿತರಾಗಿದ್ದರು. ಪೋಷಕ ನಟನಾಗಿ, ಹಾಸ್ಯನಟನಾಗಿ ನಟಿಸಿದ್ದ ಅವರು, ನಿರ್ದೇಶಕ, ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದರು. ಸೋದರ ರಾಮನಾಥನ್ ಜತೆ ಸೇರಿ ‘ರಾಶಿ ಬ್ರದರ್ಸ್’ ಸಿನಿಮಾ ಸಂಸ್ಥೆ ಸ್ಥಾಪಿಸಿ ಹಲವು ಚಿತ್ರ ನಿರ್ಮಿಸಿದ್ದರು. ಚಿತ್ರರಂಗದ ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜತೆಯೂ ಶಿವರಾಂ ಕೆಲಸ ಮಾಡಿದ್ದರು. ಹಲವು ದಿಗ್ಗಜ ನಟರೊಂದಿಗೆ ಶಿವರಾಂ ತೆರೆ ಹಂಚಿಕೊಂಡಿದ್ದರು.
ಬೆರೆತ ಜೀವ (1965), ಮಾವನ ಮಗಳು (1965), ದುಡ್ಡೇ ದೊಡ್ಡಪ್ಪ (1966), ಲಗ್ನಪತ್ರಿಕೆ (1967), ಶರಪಂಜರ (1971), ಮುಕ್ತಿ(1971), ಭಲೇ ಅದೃಷ್ಟವೋ ಅದೃಷ್ಟ(1971), ಸಿಪಾಯಿ ರಾಮು (1972), ನಾಗರಹಾವು(1972), ನಾ ಮೆಚ್ಚಿದ ಹುಡುಗ (1972), ಹೃದಯಸಂಗಮ (1972), ಕಿಲಾಡಿ ಕಿಟ್ಟು (1978), ನಾನೊಬ್ಬ ಕಳ್ಳ (1979), ಹಾಲುಜೇನು (1982), ಪಲ್ಲವಿ ಅನುಪಲ್ಲವಿ (1983), ಭಜರಂಗಿ (2013), ಬಂಗಾರ s / O ಬಂಗಾರದ ಮನುಷ್ಯ (2017) ಮೊದಲಾದ ಸಿನಿಮಾಗಳಲ್ಲಿ ಶಿವರಾಂ ನಟಿಸಿದ್ದರು. ಮಕ್ಕಳ ಸೈನ್ಯ ಸೇರಿ ಅನೇಕ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದರು. 1980ರಲ್ಲಿ ‘ಡ್ರೈವರ್ ಹನುಮಂತು’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು.
ಇದನ್ನೂ ಓದಿ:
ಹಿರಿಯ ನಟ ಶಿವರಾಂ ಅವರಿಗೆ ಆಗಿದ್ದೇನು? ಇಂಚಿಂಚೂ ವಿವರ ನೀಡಿದ ವೈದ್ಯರು
Published On - 2:24 pm, Sat, 4 December 21