ಕನ್ನಡ ಚಿತ್ರರಂಗದ ಖ್ಯಾತ ನಟ ಸತೀಶ್ ನೀನಾಸಂ (Sathish Ninasam), ‘ಡಿಂಪಲ್ ಕ್ವೀನ್’ ರಚಿತಾ ರಾಮ್, ಅದಿತಿ ಪ್ರಭುದೇವ ನಟಿಸಿರುವ ‘ಮ್ಯಾಟ್ನಿ’ ಸಿನಿಮಾ ಈಗಾಗಲೇ ಟ್ರೇಲರ್ ಹಾಗೂ ಸಾಂಗ್ಸ್ ಮೂಲಕ ನಿರೀಕ್ಷೆ ಹುಟ್ಟುಹಾಕಿದೆ. ಕೆಲವೇ ದಿನಗಳ ಹಿಂದೆ ನಟ ದರ್ಶನ್ ಅವರು ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಹೊಸ ಮೆರುಗು ತಂದು ಕೊಟ್ಟರು. ಪಾತ್ರವರ್ಗದ ಕಾರಣದಿಂದಲೂ ‘ಮ್ಯಾಟ್ನಿ’ ಸಿನಿಮಾ (Matinee Movie) ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಸತೀಶ್ ನೀನಾಸಂ, ಅದಿತಿ ಪ್ರಭುದೇವ ಹಾಗೂ ರಚಿತಾ ರಾಮ್ (Rachita Ram) ಮಾತ್ರವಲ್ಲದೆ ಇನ್ನೂ ಅನೇಕ ಕಲಾವಿದರು ನಟಿಸಿದ್ದಾರೆ. ಇದು ಹಾರರ್ ಕಾಮಿಡಿ ಸಿನಿಮಾ. ಇದರಲ್ಲಿ ಸ್ನೇಹಿತರ ಸಂಗಮ ಆಗಿದೆ. ಸತೀಶ್ ನೀನಾಸಂ ಅವರ ಗೆಳಯರಾಗಿ ನಾಗಭೂಷಣ, ಶಿವರಾಜ್ ಕೆ.ಆರ್. ಪೇಟೆ, ಪೂರ್ಣಚಂದ್ರ ಮೈಸೂರು, ದಿಗಂತ್ ದಿವಾಕರ್ ಅವರು ನಟಿಸಿದ್ದಾರೆ. ನಿಜಜೀವನದಲ್ಲಿಯೂ ಇವರೆಲ್ಲ ಸ್ನೇಹಿತರು ಅನ್ನೋದು ವಿಶೇಷ.
‘ಮ್ಯಾಟ್ನಿ’ ಸಿನಿಮಾದಲ್ಲಿ ನಾಗಭೂಷಣ್ ಅವರು ನೆಕ್ಸನ್ ಎಂಬ ಪಾತ್ರ ಮಾಡಿದ್ದಾರೆ. ನಾಗಭೂಷಣ್ ಮತ್ತು ಸತೀಶ್ ನೀನಾಸಂ ಅವರು ತೆರೆ ಹಂಚಿಕೊಂಡಿರುವುದು ಇದೇ ಮೊದಲು. ಹಾಸ್ಯದ ಪಾತ್ರಗಳ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಾ ಬಂದಿರುವ ಶಿವರಾಜ್ ಕೆ.ಆರ್. ಪೇಟೆ ಅವರು ‘ಮ್ಯಾಟ್ನಿ’ ಚಿತ್ರದಲ್ಲಿ ನವೀನ್ ಎಂಬ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ನಟಿಸಿದ್ದಾರೆ. ಶಿವರಾಜ್ ಕೆ.ಆರ್. ಪೇಟೆ ಮತ್ತು ಸತೀಶ್ ಅವರ ಕಾಂಬಿನೇಷನ್ನಲ್ಲಿ ಬರುತ್ತಿರುವ 4ನೇ ಸಿನಿಮಾ ಇದು.
ಇದನ್ನೂ ಓದಿ: ದರ್ಶನ್ ಬರೋತನಕ ‘ಮ್ಯಾಟ್ನಿ’ ಸಮಾರಂಭ; ಬಂದ್ಮೇಲೆ ‘ಡಿ ಬಾಸ್’ ಪ್ರೋಗ್ರಾಂ: ಸತೀಶ್ ನೀನಾಸಂ
ಶಿವರಾಜ್ ಕೆ.ಆರ್. ಪೇಟೆ ಅವರಿಗೆ ಕಾಮಿಡಿ ಹೊಸದೇನೂ ಅಲ್ಲ. ಆದರೆ ‘ಮ್ಯಾಟ್ನಿ’ ಸಿನಿಮಾದಲ್ಲಿ ಕಾಮಿಡಿ ಜತೆಗೆ ಹಾರರ್ ಸಹ ಇರುವುದರಿಂದ ಅಭಿಮಾನಿಗಳಿಗೆ ಡಬಲ್ ಮನರಂಜನೆ ಇರಲಿದೆ. ‘ಟಿಕೆಟ್ ತೆಗೆದುಕೊಂಡು ಚಿತ್ರಮಂದಿರದ ಒಳಗೆ ಹೋದರೆ, ಪ್ರೇಕ್ಷಕರಿಗೆ ಈ ಬೇಸಿಗೆಯಲ್ಲೂ ತಂಪಾಗಿ ಸಿನಿಮಾ ನೋಡಿ, ಹೊರಬಂದ ಅನುಭವ ಆಗುತ್ತೆ’ ಎಂದು ಶಿವರಾಜ್ ಕೆ.ಆರ್. ಪೇಟೆ ಹೇಳಿದ್ದಾರೆ. ನಟ ಪೂರ್ಣಚಂದ್ರ ಅವರು ಆನಂದ ಎನ್ನುವ ಗುರೂಜಿ ಪಾತ್ರವನ್ನು ಈ ಸಿನಿಮಾದಲ್ಲಿ ಮಾಡಿದ್ದಾರೆ. ‘ನಾವೆಲ್ಲರು ಈ ಚಿತ್ರದಲ್ಲಿ ಮಾತ್ರವಲ್ಲದೇ ರಿಯಲ್ ಲೈಫ್ನಲ್ಲಿಯೂ ಸ್ನೇಹಿತರಾದ್ದರಿಂದ ನಟಿಸಲು ಇನ್ನಷ್ಟು ಸುಲಭ ಆಯಿತು’ ಎಂದಿದ್ದಾರೆ ಪೂರ್ಣಚಂದ್ರ.
ಇದನ್ನೂ ಓದಿ: ಹಾರರ್ ಸಿನಿಮಾನಲ್ಲಿ ರಚಿತಾ, ಸತೀಶ್ ನೀನಾಸಂ, ‘ಮ್ಯಾಟ್ನಿ’ಗೆ ದರ್ಶನ್ ಬೆಂಬಲ
ಸಿನಿಮಾದಲ್ಲಿ ಬರುವ ಇನ್ನೋರ್ವ ಸ್ನೇಹಿತನ ಪಾತ್ರಕ್ಕೆ ದಿಗಂತ್ ದಿವಾಕರ್ ಅವರು ಬಣ್ಣ ಹಚ್ಚಿದ್ದಾರೆ. ಈವರೆಗೂ ಹಲವು ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರ ಮಾಡಿದ್ದ ಅವರು ಇದೇ ಮೊದಲ ಬಾರಿಗೆ ‘ಮ್ಯಾಟ್ನಿ’ ಸಿನಿಮಾದಲ್ಲಿ ಒಂದು ಪೂರ್ಣಾವಧಿಯ ಪಾತ್ರ ಮಾಡಿದ್ದಾರೆ. ಜಯದೇವ್ ಅಲಿಯಾಸ್ ಜೆಡಿ ಎಂಬ ಪಾತ್ರದಲ್ಲಿ ಅವರು ನಟಿಸಿದ್ದಾರೆ. ‘ಮ್ಯಾಟ್ನಿ’ ಸಿನಿಮಾ ಏಪ್ರಿಲ್ 5ರಂದು ಬಿಡುಗಡೆ ಆಗಲಿದೆ. ಸ್ನೇಹಿತರ ಕಾಂಬಿನೇಷನ್ ಹೇಗಿರಲಿದೆ ಎಂಬುದನ್ನು ತಿಳಿಯುವ ಕೌತುಕ ಸಿನಿಪ್ರಿಯರಲ್ಲಿ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.