ಮನಾಲಿ ಚಳಿಯಲ್ಲಿ ಸತೀಶ್-ಅದಿತಿ ಪ್ರಭುದೇವ; ‘ಮ್ಯಾಟ್ನಿ’ ಚಿತ್ರದ ಹೊಸ ಹಾಡು ರಿಲೀಸ್
‘ಮ್ಯಾಟ್ನಿ’ ಸಿನಿಮಾ ಏಪ್ರಿಲ್ 5ರಂದು ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಸತೀಶ್ ನೀನಾಸಂ, ಅದಿತಿ ಪ್ರಭುದೇವ, ರಚಿತಾ ರಾಮ್, ಶಿವರಾಜ್ ಕೆ.ಆರ್. ಪೇಟೆ, ಮುಂತಾದವರು ಅಭಿನಯಿಸಿದ್ದಾರೆ. ಆನಂದ್ ಆಡಿಯೋ ಮೂಲಕ ‘ನಿನಗಾಗೇ ಮಿಡಿಯುವುದು..’ ಎಂಬ ಹೊಸ ಹಾಡು ಬಿಡುಗಡೆ ಆಗಿದೆ. ಆ ಮೂಲಕ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಲಾಗಿದೆ.
ಸತೀಶ್ ನೀನಾಸಂ ನಟನೆಯ ‘ಮ್ಯಾಟ್ನಿ’ ಸಿನಿಮಾ (Matinee) ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಈ ಸಿನಿಮಾದ ಪ್ರಮೋಷನ್ಗೆ ಚುರುಕು ಮುಟ್ಟಿಸಲಾಗಿದೆ. ಈ ಸಿನಿಮಾದಲ್ಲಿ ಸತೀಶ್ ನೀನಾಸಂ (Sathish Ninasam), ರಚಿತಾ ರಾಮ್ ಮತ್ತು ಅದಿತಿ ಪ್ರಭುದೇವ ಅವರು ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಮೊದಲು ಸತೀಶ್ ಹಾಗೂ ರಚಿತಾ ರಾಮ್ ಅವರು ‘ಅಯೋಗ್ಯ’ ಸಿನಿಮಾದಲ್ಲಿ ನಟಿಸಿ ಜನಮನ ಗೆದ್ದಿದ್ದರು. ಈಗ ಎರಡನೇ ಬಾರಿಗೆ ಈ ಜೋಡಿ ಒಂದಾಗಿದೆ. ಅವರಿಗೆ ಅದಿತಿ ಪ್ರಭುದೇವ (Aditi Prabhudeva) ಸಾಥ್ ನೀಡಿದ್ದಾರೆ. ‘ಮ್ಯಾಟ್ನಿ’ ಸಿನಿಮಾದಿಂದ ಹೊಸ ಹಾಡು ಬಿಡುಗಡೆ ಆಗಿದೆ.
ಸದ್ಯ ‘ಮ್ಯಾಟ್ನಿ’ ಚಿತ್ರತಂಡ ಬಿಡುಗಡೆ ಮಾಡಿರುವ ಹಾಡು ಸಖತ್ ರೊಮ್ಯಾಂಟಿಕ್ ಆಗಿದೆ. ‘ನಿನಗಾಗೇ ಮಿಡಿಯುವುದು ಈ ಹೃದಯ..’ ಎಂಬ ಈ ಗೀತೆಯಲ್ಲಿ ಸತೀಶ್ ನೀನಾಸಂ ಮತ್ತು ಅದಿತಿ ಪ್ರಭುದೇವ ಅವರು ರೊಮ್ಯಾಂಟಿಕ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಡಿನ ಥೀಮ್ಗೆ ಅನುಗುಣವಾಗಿ ಸಂಪೂರ್ಣ ಮನಾಲಿಯಲ್ಲಿ ಇದರ ಶೂಟಿಂಗ್ ಮಾಡಲಾಗಿದೆ.
ವಿಶೇಷ ಏನೆಂದರೆ, ಈ ಗೀತೆಯನ್ನು ‘ಕರುನಾಡ ಚಕ್ರವರ್ತಿ’ ಶಿವರಾಜ್ಕುಮಾರ್ ಅವರು ರಿಲೀಸ್ ಮಾಡಿದ್ದಾರೆ. ಹಾಡು ಬಿಡುಗಡೆ ಮಾಡಿದ ಬಳಿಕ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ನಿನಗಾಗೇ ಮಿಡಿಯುವುದು ಈ ಹೃದಯ..’ ಗೀತೆಯ ಜೊತೆಗೆ ಮೇಕಿಂಗ್ ವಿಡಿಯೋವನ್ನು ಕೂಡ ಬಿಡುಗಡೆ ಮಾಡಲಾಗಿದೆ. ಮೂರು ದಿನಗಳ ಕಾಲ ಮನಾಲಿಯ ಚುಮುಚುಮು ಚಳಿಯಲ್ಲಿ ಚಿತ್ರೀಕರಣ ಮಾಡಿದ್ದರ ಅನುಭವವನ್ನು ಮೇಕಿಂಗ್ ವಿಡಿಯೋದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ಸೀಮಂತ ಶಾಸ್ತ್ರದಲ್ಲಿ ಹಸಿರು ಸೀರೆ ಧರಿಸಿ ಕಂಗೊಳಿಸಿದ ಅದಿತಿ ಪ್ರಭುದೇವ
ಮನೋಹರ್ ಕಾಂಪಲ್ಲಿ ಅವರು ‘ಮ್ಯಾಟ್ನಿ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪಾರ್ವತಿ ಎಸ್. ಗೌಡ ಅವರು ‘ಎಫ್ ಥ್ರೀ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಕೀರ್ತನ್ ಪೂಜಾರಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ‘ನಿನಗಾಗೇ ಮಿಡಿಯುವುದು..’ ಗೀತೆಯನ್ನು ಹೇಮಂತ್ ಕುಮಾರ್ ಗಂಜಂ ಅವರು ಬರೆದಿದ್ದಾರೆ. ಸಂತು ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಸಾದ್ವಿನಿ ಕೊಪ್ಪ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ.
‘ನಿನಗಾಗೇ ಮಿಡಿಯುವುದು..’ ಸಾಂಗ್:
ಏಪ್ರಿಲ್ 5ರಂದು ‘ಮ್ಯಾಟ್ನಿ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಸತೀಶ್ ನಿನಾಸಂ, ಅದಿತಿ ಪ್ರಭುದೇವ, ರಚಿತಾ ರಾಮ್ ಮಾತ್ರವಲ್ಲದೇ ಶಿವರಾಜ್ ಕೆ.ಆರ್. ಪೇಟೆ, ಪೂರ್ಣಚಂದ್ರ ಮೈಸೂರು, ನಾಗಭೂಷನ್, ದಿಗಂತ್, ಪ್ರಕಾಶ್ ತುಮ್ಮಿನಾಡು, ತಬಲ ನಾಣಿ, ಮಿಮಿಕ್ರಿ ಗೋಪಿ ಮುಂತಾದವರು ಕೂಡ ನಟಿಸಿದ್ದಾರೆ. ಆನಂದ್ ಆಡಿಯೋ ಮೂಲಕ ‘ನಿನಗಾಗೇ ಮಿಡಿಯುವುದು..’ ಸಾಂಗ್ ಬಿಡುಗಡೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.