ಚೌಕಟ್ಟು, ಫನ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಸವಿ ಮಾದಪ್ಪ ಅವರು ಗುರುವಾರ (ಸೆ.30) ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಬಾಯ್‌ಫ್ರೆಂಡ್ ಜೊತೆ ಅವರು ವಾಸವಾಗಿದ್ದರು ಎಂಬ ಮಾಹಿತಿ ಇದೆ. ಆದರೆ ತಮ್ಮ ಮಗಳು ಒಬ್ಬಳೇ ಇದ್ದಳು ಎಂದು ಸವಿ ಪೋಷಕರು ಹೇಳುತ್ತಿದ್ದಾರೆ. ಈಗ ಅವರ ಮರಣೋತ್ತರ ಪರೀಕ್ಷೆ ನಡೆದಿದ್ದು, ಇಂದು (ಅಕ್ಟೋಬರ್ 1) ಕೊಡವ ಪದ್ಧತಿಯಂತೆ ಅವರ ಅಂತ್ಯ ಸಂಸ್ಕಾರ ನಡೆದಿದೆ.
ಸ್ವಗ್ರಾಮ ಅಂದಗೋವೆಯಲ್ಲಿ ಅಂತಿಮ ವಿಧಿವಿಧಾನ ನಡೆದಿದೆ. ಸವಿಗೆ ಇನ್ನೂ ಮದುವೆ ಆಗಿರಲಿಲ್ಲ. ಹೀಗಾಗಿ ಸಂಪ್ರದಾಯದ ಪ್ರಕಾರ ಸವಿಗೆ ಮದುವೆ ಶಾಸ್ತ್ರ ಮಾಡಲಾಗಿದೆ. ಬಾಳೆಯ ದಿಂಡನ್ನು ಮಧುಮಗನಂತೆ ಅಲಂಕರಿಸಲಾಗಿತ್ತು. ಸವಿ ಪಾರ್ಥಿವ ಶರೀರಕ್ಕೂ ವಧುವಿನಂತೆ ಶೃಂಗಾರ ಮಾಡಲಾಗಿತ್ತು. ನಂತರ ಮಗಳ ಪಾರ್ಥಿವ ಶರೀರಕ್ಕೆ ತಾಯಿ ತಾಳಿ ಕಟ್ಟಿದ್ದಾರೆ. ಸವಿ ಮಾದಪ್ಪ ಆತ್ಮಕ್ಕೆ ಮೋಕ್ಷ ಸಿಗಲು ವಿವಾಹ ಶಾಸ್ತ್ರ ನೆರವೇರಿಸಲಾಗಿದೆ. ವಿವಾಹ ಶಾಸ್ತ್ರದ ಸಂದರ್ಭದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಯಾಂಡಲ್ವುಡ್ ನಟಿ ಸವಿ ಮಾದಪ್ಪ ಸಾವಿನ ಸುದ್ದಿ ಅವರ ಕುಟುಂಬಕ್ಕೆ ಸಿಡಿಲಿನಂತೆ ಬಂದೆರಗಿದೆ. ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಆಗಿದೆ. ಆದರೆ ಮಗಳ ಸಾವಿನ ಬಗ್ಗೆ ಪೋಷಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಸವಿ ಮಾದಪ್ಪ ಬಾಯ್‌ಫ್ರೆಂಡ್ ವಿವೇಕ್ ಜತೆ ವಾಸವಿದ್ದರು ಎನ್ನಲಾಗಿದೆ. ಊಟ ತರುವಂತೆ ವಿವೇಕ್ಗೆ ಹೇಳಿದ್ದರು. ವಿವೇಕ್ ಊಟ ತರೋಕೆ ಹೊರಗೆ ಹೋಗಿದ್ದರು. ಈ ವೇಳೆ ಸವಿ ಮಾದಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸವಿ ಸಾವಿನ ಬಗ್ಗೆ ಅವರ ತಂದೆ ಪ್ರಭು ಮಾದಪ್ಪ ಮಾತನಾಡಿದ್ದರು. ‘ನಮ್ಮ ಮಗಳ ಆತ್ಮಹತ್ಯೆ ಬಗ್ಗೆ ನಮಗೆ ಅನುಮಾನ ಇದೆ. ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಂತವಳಲ್ಲ. ನಮ್ಮ ಮಗಳು ಫ್ಲ್ಯಾಟ್‌ನಲ್ಲಿ ಒಬ್ಬಳೇ ವಾಸವಿದ್ದಳು. ಮೂರು ದಿನದ ಹಿಂದೆ ಕರೆ ಮಾಡಿ 1 ಲಕ್ಷ ರೂಪಾಯಿ ಕೇಳಿದ್ದಳು. ಏಕೆ ಎಂದು ಪ್ರಶ್ನಿಸಿದ್ದಕ್ಕೆ ಕಮಿಟ್ಮೆಂಟ್ ಇದೆ ಎಂದಿದ್ದಳು. ಇಂದು ಬೆಳಗ್ಗೆಯೂ ಸವಿ ಜತೆ ನನ್ನ ಪತ್ನಿ ರೇಣುಕಾ ಮಾತಾಡಿದ್ದರು. ಇವತ್ತೇ ಊರಿಗೆ ಬರುತ್ತಿದ್ದೇನೆ ಎಂದಿದ್ದಳು. ಮಗಳ ಸಾವಿನ ಕುರಿತು ದೂರು ಕೊಡುತ್ತೇವೆ. ಶವ ಇಳಿಸುವಾಗಲೂ ಸಹ ನಮಗೆ ಮಾಹಿತಿ ನೀಡಿಲ್ಲ’ ಎಂದು ಪೊಲೀಸರ ಕ್ರಮದ ಬಗ್ಗೆ ಆಕ್ರೋಶ ಹೊರ ಹಾಕಿದ್ದರು.
ಇದನ್ನೂ ಓದಿ: ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣ: ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ಏನು?
Published On - 6:42 pm, Fri, 1 October 21