ಕನ್ನಡ ಚಿತ್ರರಂಗದಲ್ಲಿ ಒಂದು ಸ್ಕ್ಯಾಮ್​ ಕಥೆ; ಏಪ್ರಿಲ್​ 12ರಂದು ಬಯಲಾಗುತ್ತೆ ಹಗರಣ

|

Updated on: Mar 28, 2024 | 10:11 PM

‘ಯಾವ ಅಭ್ಯಾಸ ತಪ್ಪಿದ್ದರೂ ನಾವು ಬದುಕಬಹುದು. ಆದರೆ ವಿದ್ಯಾಭ್ಯಾಸ ತಪ್ಪಿದ್ದರೆ ಜೀವನ ಕಷ್ಟ. ಅಂತಹ ವಿದ್ಯಾಭ್ಯಾಸ ಇಂದಿನ ದಿನಗಳಲ್ಲಿ ಬಡವರಿಗೆ ಮತ್ತು ಮಧ್ಯಮವರ್ಗವರಿಗೆ ದುಬಾರಿ ಆಗಿದೆ’ ಎಂದು ನಿರ್ದೇಶಕ ವಿಕಾಸ್ ಪುಷ್ಪಗಿರಿ ಹೇಳಿದ್ದಾರೆ. ‘Scam 1770’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ರಂಜನ್​, ನಿಶ್ವಿತಾ ಪ್ರಮುಖ ಪಾತ್ರ ಮಾಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಒಂದು ಸ್ಕ್ಯಾಮ್​ ಕಥೆ; ಏಪ್ರಿಲ್​ 12ರಂದು ಬಯಲಾಗುತ್ತೆ ಹಗರಣ
ಸ್ಕ್ಯಾಮ್​ 1770 ಚಿತ್ರತಂಡ
Follow us on

ಬೇರೆ ಬೇರೆ ಸಂದರ್ಭದಲ್ಲಿ ನಡೆದ ಸ್ಕ್ಯಾಮ್​ಗಳ ಬಗ್ಗೆ ಈಗಾಗಲೇ ಹಿಂದಿಯಲ್ಲಿ ವೆಬ್​ ಸಿರೀಸ್​ ಬಂದಿದ್ದಾಗಿದೆ. ಈಗ ಕನ್ನಡ ಚಿತ್ರರಂಗದಲ್ಲೂ ಒಂದು ಸ್ಕ್ಯಾಮ್​ ಕಹಾನಿ ಬರುತ್ತಿದೆ. ಇದರ ಹೆಸರು ‘Scam 1770’. ಈ ಸಿನಿಮಾದ ಟ್ರೇಲರ್​ ಇತ್ತೀಚೆಗೆ ಬಿಡುಗಡೆ ಆಯಿತು. ‘ಡಿ ಕ್ರಿಯೇಷನ್ಸ್’ ಮೂಲಕ ನಿರ್ಮಾಪಕ ದೇವರಾಜ್ ಆರ್. ಅವರು ಈ ಸಿಮಾವನ್ನು ನಿರ್ಮಾಣ ಮಾಡಿದ್ದಾರೆ. ವಿಕಾಸ್ ಪುಷ್ಪಗಿರಿ ಅವರು ನಿರ್ದೇಶನ ಮಾಡಿದ್ದಾರೆ. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ಖ್ಯಾತಿಯ ನಟ ರಂಜನ್ ಅವರು ‘Scam 1770’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಟ್ರೇಲರ್ ರಿಲೀಸ್​ ಬಳಿಕ ಚಿತ್ರತಂಡದವರು ಮಾಹಿತಿ ಹಂಚಿಕೊಂಡರು. ಈ ಸಿನಿಮಾ ಏಪ್ರಿಲ್​ 12ರಂದು ತೆರೆಕಾಣಲಿದೆ.

ಪ್ರತಿ ಮುಂಜಾನೆ ಮನೆ ಮನೆಗೆ ಪೇಪರ್ ಹಾಕಿ ವಿದ್ಯಾಭ್ಯಾಸ ಮಾಡುತ್ತಿರುವ ಆದರ್ಶ್ ಅವರು ‘Scam 1770’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದು ವಿಶೇಷ. ಎಲ್ಲರ ಜೀವನದಲ್ಲೂ ಶಿಕ್ಷಣ ತುಂಬ ಮುಖ್ಯ. ಆದರೆ ಶಿಕ್ಷಣ ವ್ಯವಸ್ಥೆಯಲೇ ಕೆಲವು ಲೋಪಗಳು ಇವೆ. ಈ ಕ್ಷೇತ್ರದಲ್ಲಿ ಅನೇಕ ಹಗರಣಗಳು ನಡೆಯುತ್ತಿವೆ. ಆ ರೀತಿಯ ಸ್ಕ್ಯಾಮ್​ಗಳನ್ನು ಎತ್ತಿ ತೋರಿಸುವ ಚಿತ್ರವೇ ‘Scam 1770’ ಸಿನಿಮಾ. ಚಿತ್ರದ ಟ್ರೇಲರ್​ನಲ್ಲಿ ಕೂಡ ಈ ಅಂಶಗಳು ಹೈಲೈಟ್​ ಆಗಿವೆ.

ಸಿನಿಮಾಗೆ ಆಯ್ಕೆಯಾದ ಬಗ್ಗೆ ರಂಜನ್​ ವಿವರಿಸಿದ್ದಾರೆ. ‘ನಾನು ಕಾಂತಾರ ಸಿನಿಮಾ ಸಂದರ್ಭದಲ್ಲಿ ಡೈರೆಕ್ಷನ್​ ಟೀಮ್​ನಲ್ಲಿ ಕೆಲಸ ಮಾಡ್ತಿದ್ದೆ. ಫೋನ್ ಬಳಸುವಂತಿರಲಿಲ್ಲ. ಆಗ ಈ ಸಿನಿಮಾ ತಂಡದವರು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ ವಿಷಯ ಸ್ನೇಹಿತರ ಮೂಲಕ ಗೊತ್ತಾಯಿತು. ಸ.ಹಿ.ಪ್ರಾ. ಶಾಲೆ ಕಾಸರಗೋಡು ಸಿನಿಮಾದಲ್ಲಿ ದಡ್ಡ ಪ್ರವೀಣನ ಪಾತ್ರವನ್ನು ಮಾಡಿದ್ದೆ. ಆದರೆ ಈಗ Scam 1770 ಸಿನಿಮಾದಲ್ಲಿ ಜಾಣನ ಪಾತ್ರ ಮಾಡಿದ್ದೇನೆ’ ಎಂದು ನಟ ರಂಜನ್​ ಹೇಳಿದ್ದಾರೆ.

ಇದನ್ನೂ ಓದಿ: ಗಮನ ಸೆಳೆದ ಮಾನ್ವಿತಾ ಸಿನಿಮಾದ ಹೊಸ ಹಾಡು; ಈ ಸಾಂಗ್​ನಲ್ಲಿದೆ ಬೆಸ್ಟ್ ಕಾಂಬಿನೇಷನ್

ನಾಯಕಿಯಾಗಿ ನಿಶ್ಚಿತಾ ನಟಿಸಿದ್ದಾರೆ. ಹರಿಣಿ, ನಟನ ಪ್ರಶಾಂತ್, ನಾರಾಯಣಸ್ವಾಮಿ, ರಾಘು ಶಿವಮೊಗ್ಗ, ಸಂಗೀತ ಸಂಯೋಜಕ ಸತೀಶ್ ಆರ್ಯನ್, ನಿರ್ದೇಶಕರ ಜೊತೆ ಚಿತ್ರಕಥೆ ಬರೆದ ಶಂಕರ್ ರಾಮನ್ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಭಾಗಿ ಆಗಿದ್ದರು. ನಿರ್ದೇಶಕ ವಿಕಾಸ್ ಪುಷ್ಪಗಿರಿ ಅವರು ಸಿನಿಮಾ ಬಗ್ಗೆ ವಿವರಿಸಿದರು. ‘ಈಗಿನ ಕಾಲದ ಶಿಕ್ಷಣ ವ್ಯವಸ್ಥೆಯ ಕುರಿತ ಸಿನಿಮಾ ಇದು. ಶಿಕ್ಷಣವೆಂಬುದು ವ್ಯವಹಾರ ಆಗಿಹೋಗಿದೆ‌. ಹಾಗೆ ಆಗಬಾರದು. ಯಾವ ಅಭ್ಯಾಸ ತಪ್ಪಿದ್ದರೂ ನಾವು ಬದುಕಬಹುದು. ಆದರೆ ವಿದ್ಯಾಭ್ಯಾಸ ತಪ್ಪಿದ್ದರೆ ಜೀವನ ಕಷ್ಟ. ಅಂತಹ ವಿದ್ಯಾಭ್ಯಾಸವೇ ಇಂದಿನ ದಿನಗಳಲ್ಲಿ ಬಡವರಿಗೆ ಮತ್ತು ಮಧ್ಯಮವರ್ಗವರಿಗೆ ದುಬಾರಿ ಆಗಿದೆ’ ಎಂದು ಅವರು ಹೇಳಿದರು.

‘Scam 1770’ ಸಿನಿಮಾದ ಟ್ರೇಲರ್​:

‘ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ನ್ಯೂನ್ಯತೆಗಳನ್ನು ತೋರಿಸುವ ಪ್ರಯತ್ನವನ್ನು ನಮ್ಮ ಸಿನಿಮಾದಲ್ಲಿ ಮಾಡಿದ್ದೇವೆ. ಏಪ್ರಿಲ್ 12ರಂದು ಸಿನಿಮಾ ಬಿಡುಗಡೆ ಆಗಲಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಮಿಸ್​ ಮಾಡದೇ ನೋಡಬೇಕಾದ ಚಿತ್ರವಿದು. ಆರಂಭದಿಂದಲೂ ಉತ್ತಮ ಸದಭಿರುಚಿ ಇರುವ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಿರುವ ನಿರ್ಮಾಪಕ ದೇವರಾಜ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು’ ಎಂದಿದ್ದಾರೆ ನಿರ್ದೇಶಕರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.