ಕನ್ನಡ ಚಿತ್ರರಂಗದ ಹಿರಿಯ ನಟ, ಜನಪ್ರಿಯ ‘ಪಾಪ ಪಾಂಡು’ ಧಾರಾವಾಹಿಯ ಕಲಾವಿದ ಶಂಕರ್ ರಾವ್ ನಿಧನರಾಗಿದ್ದಾರೆ. ಸೋಮವಾರ (ಅ.18) ಬೆಳಗಿನ ಜಾವ 6.30ರ ಸುಮಾರಿಗೆ ಅವರು ಕೊನೆಯುಸಿರು ಎಳೆದರು ಎಂದು ತಿಳಿದುಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 84 ವರ್ಷ ವಯಸ್ಸಾಗಿತ್ತು. ಶಂಕರ್ ರಾವ್ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಇಂದು ಮಧ್ಯಾಹ್ನ ಬನಶಂಕರಿ ಚಿತಾಗಾರದಲ್ಲಿ ಶಂಕರ್ ರಾವ್ ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ.
ತುಮಕೂರಿನಲ್ಲಿ ಬಾಲ್ಯ ಮತ್ತು ಯೌವನ ಕಳೆದವರು ಶಂಕರ್ ರಾವ್. ಅಲ್ಲಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗುತ್ತಿದ್ದ ತೆಲುಗು ಸಿನಿಮಾಗಳನ್ನು ನೋಡಿ ಅವರು ಚಿತ್ರರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಶಾಲಾ ದಿನಗಳಿಂದಲೇ ಅವರು ನಟನೆಯಲ್ಲಿ ಅಭಿರುಚಿ ಹೊಂದಿದ್ದರು. 1956ರಲ್ಲಿ ಬೆಂಗಳೂರಿಗೆ ಬಂದರು. ‘ಗೆಳೆಯರ ಬಳಗ’ ಟೀಮ್ ಕಟ್ಟಿಕೊಂಡು ಶಂಕರ್ ರಾವ್ ನಾಟಕ ಮಾಡುತ್ತಿದ್ದರು. 19ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಮನೆಯ ಜವಾಬ್ದಾರಿಯನ್ನೂ ಹೊತ್ತುಕೊಂಡರು. ಪ್ರತಿ ವರ್ಷ ಸಿಗುತ್ತಿದ್ದ ಬೋನಸ್ ಹಣದಲ್ಲಿ ಹೊಸ ರಂಗ ತಂಡ ಕಟ್ಟಿಕೊಂಡರು. ‘ನಟರಂಗ’ ತಂಡದ ಜೊತೆಗೂ ಶಂಕರ್ ರಾವ್ ಗುರುತಿಸಿಕೊಂಡಿದ್ದರು. ಹವ್ಯಾಸಿ ರಂಗಭೂಮಿ ಕಲಾವಿದನಾಗಿದ್ದ ಅವರು ಹಲವಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.
ವೇದಿಕೆ ಮೇಲೆ ಶಂಕರ್ ರಾವ್ ಅವರ ಅಭಿನಯ ನೋಡಿದ ನಿರ್ಮಾಪಕರೊಬ್ಬರು ಸಿನಿಮಾದಲ್ಲಿ ಅಭಿನಯಕ್ಕೆ ಅವಕಾಶ ನೀಡಿದರು. ‘ಯಾರ ಸಾಕ್ಷಿ’ ಸಿನಿಮಾದಲ್ಲಿ ಅವರು ಮೊದಲ ಬಾರಿಗೆ ನಟಿಸಿದರು. ಆ ಚಿತ್ರಕ್ಕೆ ಮಂಜುಳಾ ನಾಯಕಿ ಆಗಿದ್ದರು. ಲೋಕನಾಥ್ ಕೂಡ ಅದರಲ್ಲಿ ನಟಿಸಿದ್ದರು. ನಂತರ ಶಂಕರ್ ರಾವ್ ಅವರಿಗೆ ಹಲವು ಅವಕಾಶಗಳು ಸಿಕ್ಕವು. ಅಪ್ಪು, ಧ್ರುವ ಸೇರಿ ಅನೇಕ ಸಿನಿಮಾಗಳಲ್ಲಿ ಶಂಕರ್ ರಾವ್ ಅಭಿನಯಿಸಿದ್ದರು. ಪೋಷಕ ಪಾತ್ರಗಳು ಮತ್ತು ಹಾಸ್ಯ ಪಾತ್ರಗಳ ಮೂಲಕ ಅವರು ಜನಪ್ರಿಯತೆ ಪಡೆದುಕೊಂಡಿದ್ದರು.
ಕಿರುತೆರೆಯ ಜನಪ್ರಿಯ ‘ಪಾಪ ಪಾಂಡು’ ಧಾರಾವಾಹಿ ಮೂಲಕ ಕರುನಾಡಿನ ಜನರನ್ನು ಶಂಕರ್ ರಾವ್ ರಂಜಿಸಿದರು. ಅದರಲ್ಲಿ ಅವರು ಮಾಡುತ್ತಿದ್ದ ಬಾಸ್ ಬಾಲರಾಜ್ ಎಂಬ ಪಾತ್ರ ತುಂಬ ಫೇಮಸ್ ಆಗಿತ್ತು.
ಇದನ್ನೂ ಓದಿ:
‘ನಾನು ಒಳ್ಳೆಯ ನಟನಾಗಲಿ ಅಂತ ಅಪ್ಪನಿಗೆ ಆಸೆ ಇತ್ತು’; ಸತ್ಯಜಿತ್ ನಿಧನದ ಬಳಿಕ ಪುತ್ರ ಆಕಾಶ್ ನೋವಿನ ಮಾತು
Published On - 11:52 am, Mon, 18 October 21