ವಿಶ್ವದಲ್ಲೆಡೆ ಕೊವಿಡ್ ರೂಪಾಂತರಿಗಳು ಕಾಣಿಸಿಕೊಳ್ಳುತ್ತಿವೆ. ಈಗ ಒಮಿಕ್ರಾನ್ ಹೆಸರಿನ ಹೊಸ ರೂಪಾಂತರಿ ಕಾಣಿಸಿಕೊಂಡಿದ್ದು ಸಾಕಷ್ಟು ಆತಂಕ ಮೂಡಿಸಿದೆ. ಇದರಿಂದ ಚಿತ್ರರಂಗದಲ್ಲಿ ಮತ್ತೆ ಅನಿಶ್ಚಿತತೆ ಕಾಡೋಕೆ ಆರಂಭವಾಗಿದೆ. ಇದರಿಂದ ಕೆಲ ಸಿನಿಮಾಗಳು ರಿಲೀಸ್ ದಿನಾಂಕ ಮುಂದೂಡುವ ಚಿಂತನೆ ನಡೆಸಿವೆ. ಈಗ ‘ಸಿಂಪಲ್’ ಸುನಿ ನಿರ್ದೇಶನದ, ಶರಣ್ ಹಾಗೂ ಆಶಿಕಾ ರಂಗನಾಥ್ ಅಭಿನಯದ ‘ಅವತಾರ ಪುರುಷ’ ಚಿತ್ರದ ಮೇಲೂ ಕೊರೊನಾ ಆತಂಕದ ಛಾಯೆ ಬಿದ್ದಿದೆ. ಹೀಗಾಗಿ, ಸಿನಿಮಾ ರಿಲೀಸ್ ದಿನಾಂಕವನ್ನು ತಂಡ ಮುಂದೂಡಿದೆ.
ಖ್ಯಾತ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ ‘ಅವತಾರ ಪುರುಷ’ಕ್ಕೆ ಬಂಡವಾಳ ಹೂಡಿದ್ದಾರೆ.. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ವಿಲಿಯಮ್ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ. ತಾಂತ್ರಿಕವಾಗಿ ತುಂಬ ಶ್ರೀಮಂತವಾಗಿ ಮೂಡಿಬಂದಿರುವ ‘ಅವತಾರ ಪುರುಷ’ ಚಿತ್ರ ಡಿ.10ರಂದು ದೇಶಾದ್ಯಂತ ಬಿಡುಗಡೆ ಆಗಬೇಕಿತ್ತು. ಆದರೆ, ಸಿನಿಮಾ ರಿಲೀಸ್ ಆಗುತ್ತಿಲ್ಲ.
‘ಅವತಾರ ಪುರುಷ’ ಸಿನಿಮಾದಲ್ಲಿ ನಟ ಶರಣ್ ಅವರು ಜ್ಯೂನಿಯರ್ ಆರ್ಟಿಸ್ಟ್ ಪಾತ್ರ ಮಾಡಿದ್ದಾರೆ. ಹಾಗಾಗಿ ಅವರು ಹಲವು ಗೆಟಪ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶರಣ್ ಎಂದರೆ ಕಾಮಿಡಿಗೆ ಫೇಮಸ್. ಇನ್ನು, ಸುನಿ ಅವರು ತಮ್ಮದೇ ಶೈಲಿಯ ಸಿನಿಮಾಗಳಿಂದ ಗುರುತಿಸಿಕೊಂಡವರು. ಈಗ ಅವರಿಬ್ಬರ ಕಾಂಬಿನೇಷನ್ನಲ್ಲಿ ‘ಅವತಾರ ಪುರುಷ’ ಮೂಡಿಬಂದಿದ್ದು ಪ್ರೇಕ್ಷಕರಿಗೆ ಹೊಸ ಬಗೆಯ ಮನರಂಜನೆ ಸಿಗಲಿದೆ ಎಂಬ ಭರವಸೆಯನ್ನು ಚಿತ್ರತಂಡ ನೀಡಿತ್ತು. ಈ ಮನರಂಜನೆ ಸಂಪೂರ್ಣವಾಗಿ ಪ್ರೇಕ್ಷಕರಿಗೆ ತಲುಪಬೇಕು ಎಂಬುದು ಚಿತ್ರತಂಡದ ಆಶಯ.
ಈಗ ಎಲ್ಲೆಲ್ಲೂ ಕೊವಿಡ್ ಭಯ ಆವರಿಸಿದೆ. ಈ ಸಂದರ್ಭದಲ್ಲಿ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಹೇರಿದರೆ ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಉಂಟಾಗಲಿದೆ. ಒಂದೊಮ್ಮೆ ಒಮಿಕ್ರಾನ್ ಪ್ರಕರಣ ಹೆಚ್ಚಿದರೆ ಚಿತ್ರಮಂದಿರದಲ್ಲಿ ಶೇ.50 ಆಸನಭರ್ತಿಗೆ ಮಾತ್ರ ಅವಕಾಶ ನೀಡಿದರೆ ಚಿತ್ರದ ಕಲೆಕ್ಷನ್ಗೆ ಹೊಡೆತಬೀಳಲಿದೆ. ಈ ಆತಂಕದ ಮಧ್ಯೆ ಸಾಕಷ್ಟು ಮಂದಿ ಸಿನಿಮಾ ನೋಡೋಕೆ ಹಿಂದೇಟು ಹಾಕುತ್ತಾರೆ. ಹಾಗಾಗಬಾರದು ಎಂಬುದು ಚಿತ್ರತಂಡದ ಆಶಯ. ಈ ಕಾರಣಕ್ಕೆ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದೂಡಲು ಚಿತ್ರತಂಡ ನಿರ್ಧರಿಸಿದೆ. ಕೊರೊನಾ ಭಯ ಕಳೆದ ನಂತರ ಸೂಕ್ತ ದಿನಾಂಕ ನಿಗದಿ ಮಾಡಿ ಈ ಬಗ್ಗೆ ಘೋಷಣೆ ಮಾಡಲು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಧರಿಸಿದ್ದಾರೆ.
ಇದನ್ನೂ ಓದಿ: Samantha: ‘ಪುಷ್ಪ’ ಐಟಮ್ ಸಾಂಗ್ನಲ್ಲಿ ಸಮಂತಾ ಹಾಟ್ ಲುಕ್ ನೋಡಿ ಫ್ಯಾನ್ಸ್ ಫಿದಾ
ಶಂಕರ್ ನಾಗ್ ಹೊಸ ಸಿನಿಮಾ ‘ಅಬ ಜಬ ದಬ’; ಕೌತುಕ ಮೂಡಿಸಿದ ‘ಕನ್ನಡ್ ಗೊತ್ತಿಲ್ಲ’ ನಿರ್ದೇಶಕ