‘ಸಾಲಗಾರರ ಸಹಕಾರ ಸಂಘ’ ಚಿತ್ರದ ಹಾಡಿಗೆ ಧ್ವನಿ ನೀಡಿದ ಅಧ್ಯಕ್ಷ ಶರಣ್

ನಟ ಶರಣ್ ಅವರು ‘ಸಾಲಗಾರರ ಸಹಕಾರ ಸಂಘ’ ಸಿನಿಮಾದ ಶೀರ್ಷಿಕೆ ಗೀತೆಯನ್ನು ಹಾಡುವ ಮೂಲಕ ಚಿತ್ರತಂಡಕ್ಕೆ ಬೆಂಬಲ ನೀಡಿದ್ದಾರೆ. ಕೆಂಪೇಗೌಡ, ಲೋಕೇಶ್ ಬಾಸ್ಕೋ, ಪ್ರವೀಣ್ ಕುಮಾರ್ ಗಸ್ತಿ, ಜಾಲಿ ಜಾಕ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಶಿವರಾಜ್ ಕೆ.ಆರ್. ಪೇಟೆ, ಮಡೆನೂರು ಮನು, ಗೋವಿಂದೆಗೌಡ, ಸೋನು ಶ್ರೀನಿವಾಸ್ ಗೌಡ ಮುಂತಾದವರು ಹಾಡು ಬಿಡುಗಡೆಗೆ ಸಾಕ್ಷಿಯಾದರು.

‘ಸಾಲಗಾರರ ಸಹಕಾರ ಸಂಘ’ ಚಿತ್ರದ ಹಾಡಿಗೆ ಧ್ವನಿ ನೀಡಿದ ಅಧ್ಯಕ್ಷ ಶರಣ್
Movie Poster, Sharan

Updated on: Oct 31, 2025 | 4:50 PM

ರಂಗಭೂಮಿ ಹಿನ್ನೆಲೆಯಿಂದ ಬಂದ ನಟ ಶರಣ್ (Sharan) ಅವರು ಉತ್ತಮ ಹಾಡುಗಾರ ಕೂಡ ಹೌದು. ಅವರು ಈಗಾಗಲೇ ಅನೇಕ ಹಿಟ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಈಗ ಶರಣ್ ಅವರ ಕಂಠದಲ್ಲಿ ‘ಸಾಲಗಾರರ ಸಹಕಾರ ಸಂಘ’ ಸಿನಿಮಾದ ಟೈಟಲ್ ಸಾಂಗ್ ಮೂಡಿಬಂದಿದೆ. ಎಂ.ಎಸ್. ತ್ಯಾಗರಾಜ್ ಅವರು ಈ ಹಾಡಿಗೆ ಸಂಗೀತ ನೀಡಿದ್ದು, ಅವರೇ ಸಾಹಿತ್ಯ ಬರೆದಿದ್ದಾರೆ. ಇತ್ತೀಚೆಗೆ ‘ಸಾಲಗಾರರ ಸಹಕಾರ ಸಂಘ’ (Salagarara Shakara Sangha) ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ಆಯಿತು. ಡಾ. ಶ್ರೀಧರ್ ಗುರೂಜಿ ಹಾಗೂ ಬೃಂದಾ ಆಚಾರ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ಎಸ್‌ಎನ್‌ಎಲ್‌ಎನ್‌ಎಸ್ ಎಂಟರ್​ಟೇನರ್ಸ್’ ಮತ್ತು ‘ಹವಿಶ್ ಸಿನಿ ಕ್ರಿಯೇಶನ್ಸ್’ ಮೂಲಕ ಕುಮಾರೇಶ್ ಎ. ಮತ್ತು ಸುನೀಲ್‌ ಕುಮಾರ್ ಅವರು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ರಾಜಣ್ಣ ಪುಟ್ಟೇನಹಳ್ಳಿ, ಚಂದ್ರು ಶಿರಾಳಕೊಪ್ಪ ಅವರು ಸಹ-ನಿರ್ಮಾಪಕರಾಗಿದ್ದಾರೆ. ವಿಕ್ರಮ್ ಧನಂಜಯ್ ಆರ್. ಅವರು ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪಾತ್ರವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿತು. ಸಾಲ ಕೊಡಿಸುವ ವ್ಯಕ್ತಿಯಾಗಿ ಕೆಂಪೇಗೌಡ ನಟಿಸಿದ್ದಾರೆ. ದೊಡ್ಡ ಸಾಲಗಾರನಾಗಿ ಜಾಲಿ ಜಾಕ್ ಅಭಿನಯಿಸಿದ್ದಾರೆ. ರಂಗಾಯಣ ರಘು, ಹೊನ್ನವಳ್ಳಿ ಕೃಷ್ಣ, ಲಕ್ಷೀ ಸಿದ್ದಯ್ಯ, ಲೋಕೇಶ್, ಪ್ರವೀಣ್‌ ಕುಮಾರ್, ಪೂಜಾ ಕೂಡ ‘ಸಾಲಗಾರರ ಸಹಕಾರ ಸಂಘ’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಈ ಸಿನಿಮಾದಲ್ಲಿ ಒಟ್ಟು 5 ಹಾಡುಗಳಿ ಇವೆ. ಅವುಗಳಿಗೆ ಶರಣ್, ನವೀನ್‌ ಸಜ್ಜು, ವಿ. ಹರಿಕೃಷ್ಣ, ಜೋಗಿ ಪ್ರೇಮ್ ಹಾಗೂ ಎಂ.ಎಂ. ತ್ಯಾಗರಾಜ್ ಅವರು ಧ್ವನಿ ನೀಡಿದ್ದಾರೆ. ಅನಿರುದ್ದ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಗಣೇಶ್ ನಿರ್ಚಾಲ್, ಶೇಷಾಚಲ ಕುಲಕರ್ಣಿ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಬೆಂಗಳೂರು, ತೀರ್ಥಹಳ್ಳಿ, ಚಿಕ್ಕಮಗಳೂರು ಮುಂತಾದ ಕಡೆಗಳಲ್ಲಿ 45 ದಿನ ಚಿತ್ರೀಕರಣ ಮಾಡಲಾಗಿದೆ.

ಇದನ್ನೂ ಓದಿ: ಶರಣ್-ತರುಣ್ ಸುಧೀರ್ ಗೆಳೆತನ ಎಂಥದ್ದು? ಯಾರೂ ಊಹಿಸಲೂ ಸಾಧ್ಯವಿಲ್ಲ

ಶಿವರಾಜ್ ಕೆ.ಆರ್. ಪೇಟೆ, ದಿವ್ಯಶ್ರೀ ಮೋಹನ್, ಮಡೆನೂರು ಮನು, ಗೋವಿಂದೆಗೌಡ, ಸೋನು ಶ್ರೀನಿವಾಸ್ ಗೌಡ, ಸನತ್, ದಿವ್ಯಾ ಗೌಡ ಮುಂತಾದವರು ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ ಇದು ವಿಪರೀತ ಸಾಲ ಮಾಡಿಕೊಂಡವರ ಕಥೆ ಇರುವ ಸಿನಿಮಾ. ಶರಣ್ ಅವರ ಕಂಠದಲ್ಲಿ ಮೂಡಿಬಂದ ಹಾಡಿನಿಂದಾಗಿ ಕಾಮಿಡಿ ಕಥಾಹಂದರದ ಈ ಚಿತ್ರದ ಮೇಲೆ ಸಿನಿಪ್ರಿಯರಿಗೆ ನಿರೀಕ್ಷೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.