
ಪುನೀತ್ ರಾಜ್‌ಕುಮಾರ್ ಜೊತೆ ‘ನಾ ಬೋರ್ಡು ಇರದ ಬಸ್ಸನು..’ ಹಾಡಿಗೆ ಮಸ್ತ್ ಆಗಿ ಕುಣಿದಿದ್ದ ನಟಿ ಶೆಫಾಲಿ ಜರಿವಾಲಾ (Shefali Jariwala) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಕೇವಲ 42 ವರ್ಷ ವಯಸ್ಸಾಗಿತ್ತು. ಮುಂಬೈನ ಅಂಧೇರಿ ಲೋಖಂಡ್‌ವಾಲಾ ಪ್ರದೇಶದಲ್ಲಿ ವಾಸಿಸುತ್ತಿದ್ದ ನಟಿ ಶೆಫಾಲಿ ಜೂನ್ 27ರ ಬೆಳಿಗ್ಗೆ 11 ಗಂಟೆ ಸುಮಾರಿಗೆ ತೀವ್ರ ಅಸ್ವಸ್ಥರಾದರು. ಅವರಿಗೆ ಎದೆನೋವು ಕಾಣಿಸಿಕೊಂಡಿತು. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ. ಆಗಲೇ ಅವರು ನಿಧನ ಹೊಂದಿದ್ದರು. ಪ್ರಸ್ತುತ, ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಶೆಫಾಲಿ ಜನಿಸಿದ್ದು 1982ರ ಡಿಸೆಂಬರ್ 15ರಂದು. ಅವರು ಮುಂಬೈನಲ್ಲಿ ಹುಟ್ಟಿ, ಬೆಳೆದರು. 2004ರಲ್ಲಿ ಅವರು ಹರ್ಮೀತ್ ಸಿಂಗ್ನ ವಿವಾಹ ಆದರು. ಈ ಸಂಬಂಧ 2009ರವರೆಗೆ ಇತ್ತು. ಆ ಬಳಿಕ ಇವರು ವಿಚ್ಛೇದನ ಪಡೆದರು. 2014ರಲ್ಲಿ ಪರಾಗ್ ತ್ಯಾಗಿ ಅವರನ್ನು ಶೆಫಾಲಿ ವಿವಾಹ ಆದರು. ಎರಡನೇ ಪತಿಯ ಜೊತೆ ಇನ್ನೂ ಅವರು ಸಂಸಾರ ನಡೆಸುತ್ತಿದ್ದರು.
2004ರ ‘ಕಾಂಟಾ ಲಗಾ..’ ಹಾಡಿನಲ್ಲಿ ಶೆಫಾಲಿ ಭರ್ಜರಿ ಡ್ಯಾನ್ಸ್ ಮಾಡಿದ್ದರು. 2011ರಲ್ಲಿ ರಿಲೀಸ್ ಆದ ಪುನೀತ್ ರಾಜ್‌ಕುಮಾರ್ ನಟನೆಯ ‘ಹುಡುಗರು’ ಸಿನಿಮಾದಲ್ಲಿ ಅವರು ‘ಪಂಕಜಾ..’ ಹಾಡಿಗೆ ಮಸ್ತ್ ಆಗಿ ಸ್ಟೆಪ್ ಹಾಕಿದ್ದರು. 2019ರಲ್ಲಿ ಆರಂಭ ಆದ ‘ಬಿಗ್ ಬಾಸ್ ಸೀಸನ್ 13’ರಲ್ಲಿ ಪಂಕಜಾ ಸ್ಪರ್ಧಿಸಿದರು. ಅವರ ನಿಧನ ವಾರ್ತೆ ಅನೇಕರಿಗೆ ದುಃಖ ತಂದಿದೆ. ಶಾಕಿಂಗ್ ವಿಚಾರ ಎಂದರೆ ಅವರ ಜೊತೆ ನಟಿಸಿದ ಪುನೀತ್ ಹಾಗೂ ಅವರ ಜೊತೆ ಬಿಗ್ ಬಾಸ್ನಲ್ಲಿ ಸ್ಪರ್ಧಿಸಿ ಗೆದ್ದ ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದಲೇ ನಿಧನ ಹೊಂದಿದ್ದರು.
ಇದನ್ನೂ ಓದಿ: 24 ಗಂಟೆಗಳಲ್ಲಿ ಹಾಸನದ ಮತ್ತಿಬ್ಬರು ಹೃದಯಾಘಾತಕ್ಕೆ ಬಲಿ: ಒಂದೇ ತಿಂಗಳಲ್ಲಿ 14 ಜನ ಸಾವು
ಶೆಫಾಲಿ ಸಾವಿನ ಸುದ್ದಿ ಕೇಳಿದ ಅಭಿಮಾನಿಗಳು ಮತ್ತು ಆಪ್ತರು ಆಘಾತಕ್ಕೊಳಗಾಗಿದ್ದಾರೆ. ಗಾಯಕ ಮಿಕಾ ಸಿಂಗ್ ಅವರು ಶೆಫಾಲಿ ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಶೆಫಾಲಿ ಫೋಟೋಶೂಟ್ ಮಾಡಿಸಿದ್ದರು. ಅವರ ಸಾವಿಗೆ ಬೇರೆ ಏನಾದರೂ ಕಾರಣ ಇದೆಯೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಮರಣೋತ್ತರ ವರದಿ ಬಂದ ಬಳಿಕ ಈ ಬಗ್ಗೆ ತಿಳಿಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:55 am, Sat, 28 June 25