ಡ್ರಗ್ಸ್ ತೆಗೆದುಕೊಳ್ಳೋ ಕಲಾವಿದರು ಇನ್ಮುಂದೆ ಚಿತ್ರರಂಗದಿಂದ ಬ್ಯಾನ್
ತೆಲುಗು ಚಿತ್ರರಂಗದಲ್ಲಿ ಮಾದಕ ದ್ರವ್ಯ ಬಳಕೆಯನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮಾದಕ ದ್ರವ್ಯ ಸೇವಿಸುವ ಕಲಾವಿದರ ಮೇಲೆ ನಿಷೇಧ ಹೇರಲು ನಿರ್ಧರಿಸಲಾಗಿದೆ. ಇದೇ ರೀತಿಯ ನಿಯಮವನ್ನು ಮಲಯಾಳಂ ಚಿತ್ರರಂಗದಲ್ಲೂ ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕನ್ನಡ ಚಿತ್ರರಂಗದಲ್ಲಿಯೂ ಇಂತಹ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ. ಇದು ಚಿತ್ರರಂಗದಲ್ಲಿ ಒಂದು ಮಹತ್ವದ ಬದಲಾವಣೆಗೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇತ್ತೀಚೆಗೆ ಡ್ರಗ್ಸ್ ಹಾವಳಿ ಹೆಚ್ಚಿದೆ. ಯುವಕರು ಇದಕ್ಕೆ ಬಲಿಪಶುಗಳಾಗುತ್ತಿದ್ದಾರೆ. ಈ ಭೂತ ಚಿತ್ರರಂಗವನ್ನೂ ಬಿಟ್ಟಿಲ್ಲ. ಚಿತ್ರರಂಗದ ಅನೇಕರು ಡ್ರಗ್ಸ್ನ ಮೋಡಿಗೆ ಸಿಲುಕಿದ್ದಾರೆ. ಇದರಿಂದ ಚಿತ್ರರಂಗಕ್ಕೆ ಸಾಕಷ್ಟು ಮುಜುಗರ ಎದುರಿಸುವ ಪರಿಸ್ಥಿತಿ ಬರುತ್ತಿದೆ. ಈ ಕಾರಣಕ್ಕೆ ಒಂದು ಕಠಿಣ ನಿಯಮ ತರಲು ತೆಲುಗು ಚಿತ್ರರಂಗ ನಿರ್ಧರಿಸಿದೆ. ತೆಲುಗಿನಲ್ಲಿ ಡ್ರಗ್ಸ್ (Drugs) ತೆಗೆದುಕೊಳ್ಳುವ ಕಲಾವಿದರ ಮೇಲೆ ಬ್ಯಾನ್ ಹೇರಲು ಚಿತ್ರರಂಗದವರು ನಿರ್ಧರಿಸಿದ್ದಾರೆ. ಈ ನಿರ್ಧಾರವನ್ನು ಅನೇಕರು ಸ್ವಾಗತಿಸಿದ್ದಾರೆ. ಇದರಿಂದ ಚಿತ್ರರಂಗದಲ್ಲಿ ಮಹತ್ವದ ಬದಲಾವಣೆಯನ್ನು ನಿರೀಕ್ಷಿಸಲಾಗುತ್ತಿದೆ.
ಅಂತರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನದ ಪ್ರಯುಕ್ತ ತೆಲಂಗಾಣ ಸರ್ಕಾರ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮಕ್ಕೆ ಚಿತ್ರರಂಗದವರಿಗೂ ಆಹ್ವಾನ ಇತ್ತು. ತೆಲಂಗಾಣ ಸಿನಿಮಾ ಅಭಿವೃದ್ಧಿ ಕಾರ್ಪೋರೇಷನ್ ಅಧ್ಯಕ್ಷ ದಿಲ್ ರಾಜು ಅವರೂ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರು ವೇದಿಕೆ ಮೇಲೆ ಮಾತನಾಡುತ್ತಾ ಈ ವಿಚಾರ ಪ್ರಸ್ತಾಪಿಸಿದರು. ಅಲ್ಲದೆ, ಮಲಯಾಳಂ ಚಿತ್ರರಂಗದಲ್ಲೂ ಹೀಗೊಂದು ನಿಯಮ ತರಲು ಯೋಚಿಸುತ್ತಿದ್ದೇವೆ ಎಂದರು.
‘ಯಾರೆಲ್ಲ ಡ್ರಗ್ಸ್ ತೆಗೆದುಕೊಳ್ಳುತ್ತಾರೋ ಅವರ ಮೇಲೆ ಬ್ಯಾನ್ ಹೇರಳು ಮಲಯಾಳಂ ಚಿತ್ರರಂಗದವರು ನಿರ್ಧರಿಸಿದ್ದಾರೆ. ನಾವು ಇದೇ ರೀತಿಯ ನಿಯಮ ತರಲು ಆಲೋಚಿಸಿದ್ದೇವೆ. ನಾನು ಚಿತ್ರರಂಗದ ಜೊತೆ ಈ ಬಗ್ಗೆ ಚರ್ಚಿಸುತ್ತೇನೆ. ನಾವು ಡ್ರಗ್ ಬಳಕೆ ಮಾಡುವವರಿಗೆ ಕಠಿಣ ಸಂದೇಶ ಕಳಿಸಬೇಕಿದೆ’ ಎಂದು ದಿಲ್ ರಾಜು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ರಾಮ್ ಚರಣ್, ವಿಜಯ್ ದೇವರಕೊಂಡ ಕೂಡ ಭಾಗಿ ಆಗಿದ್ದರು. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಎಲ್ಲರೂ ಡ್ರಗ್ಸ್ ವಿರುದ್ಧ ಧ್ವನಿ ಎತ್ತಿದ್ದಾರೆ. ಸದ್ಯ ದಿಲ್ ರಾಜು ಪ್ರಸ್ತಾಪಿಸಿರೋ ನಿಯಮ ಜಾರಿಗೆ ಬಂದರೆ ಸಂಕಷ್ಟ ಹೆಚ್ಚಲಿದೆ.
ಇದನ್ನೂ ಓದಿ: ‘ಥಗ್ ಲೈಫ್’ ಸಿನಿಮಾಕ್ಕೆ ಮತ್ತೊಂದು ಬರೆ, ಕಟ್ಟಬೇಕು 25 ಲಕ್ಷ ದಂಡ
ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆ ಹೆಚ್ಚುತ್ತಿದೆ. ಕಲಾವಿದರು, ತಂತ್ರಜ್ಞರು ಆಯೋಜನೆ ಮಾಡುವ ಪಾರ್ಟಿಯಲ್ಲಿ ಡ್ರಗ್ಸ್ ವಾಸನೆ ಬರುತ್ತಿದ್ದು, ಇದರಿಂದ ಅನೇಕರು ಬಂಧನಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಚಿತ್ರರಂಗದ ಹೆಸರು ಹಾಳಾಗುತ್ತಿದೆ. ಕನ್ನಡದಲ್ಲೂ ಈ ನಿಯಮ ಜಾರಿಗೆ ಬರಬೇಕು ಎಂದು ಅನೇಕರು ಒತ್ತಾಯ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:00 am, Fri, 27 June 25








