ಮೈಸೂರಿನಲ್ಲಿ ಶಿಲ್ಪಾ ಶೆಟ್ಟಿ; ನಂಜುಂಡೇಶ್ವರನ ಸನ್ನಿಧಿಯಲ್ಲಿ ಧ್ಯಾನ ಮಾಡಿದ ‘ಕೆಡಿ’ ನಟಿ

|

Updated on: May 28, 2024 | 7:24 PM

ಬಹುನಿರೀಕ್ಷಿತ ‘ಕೆಡಿ’ ಸಿನಿಮಾದಲ್ಲಿ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಅವರು ನಟಿಸುತ್ತಿದ್ದಾರೆ. ಮೈಸೂರಿನಲ್ಲಿ ಈ ಚಿತ್ರದ ಶೂಟಿಂಗ್​ ನಡೆಯುತ್ತಿದೆ. ಚಿತ್ರೀಕರಣದಲ್ಲಿ ಭಾಗಿಯಾಗಲು ಮೈಸೂರಿಗೆ ಬಂದಿರುವ ಶಿಲ್ಪಾ ಶೆಟ್ಟಿ ಅವರು ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ತೆರಳಿದ್ದಾರೆ. ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿ, ಧ್ಯಾನ ಮಾಡಿದ್ದಾರೆ ಬಾಲಿವುಡ್​ ಸುಂದರಿ.

ಮೈಸೂರಿನಲ್ಲಿ ಶಿಲ್ಪಾ ಶೆಟ್ಟಿ; ನಂಜುಂಡೇಶ್ವರನ ಸನ್ನಿಧಿಯಲ್ಲಿ ಧ್ಯಾನ ಮಾಡಿದ ‘ಕೆಡಿ’ ನಟಿ
ನಂಜುಂಡೇಶ್ವರನ ಸನ್ನಿಧಿಯಲ್ಲಿ ಶಿಲ್ಪಾ ಶೆಟ್ಟಿ
Follow us on

ಬಾಲಿವುಡ್​ನ ಜನಪ್ರಿಯ ನಟಿ ಶಿಲ್ಪಾ ಶೆಟ್ಟಿ ಅವರು ಮೈಸೂರಿಗೆ ಆಗಮಿಸಿದ್ದಾರೆ. ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ (Nanjundeshwara Temple) ಭೇಟಿ ನೀಡಿದ ಅವರು ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ದೇವಸ್ಥಾನದ ಆವರಣದಲ್ಲಿ ಕುಳಿತು ಧ್ಯಾನ ಮಾಡಿದ್ದಾರೆ. ಶಿಲ್ಪಾ ಶೆಟ್ಟಿ (Shilpa Shetty) ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಕರ್ನಾಟಕದ ಜೊತೆ ಅವರಿಗೆ ವಿಶೇಷ ನಂಟು ಇದೆ. ನಂಜುಂಡೇಶ್ವರ ದೇವಾಲಯದಲ್ಲಿ ಶಿಲ್ಪಾ ಶೆಟ್ಟಿ ಅವರನ್ನು ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಸದ್ಯ ಅವರು ಕನ್ನಡದ ‘ಕೆಡಿ’ ಸಿನಿಮಾದಲ್ಲಿ (KD Movie) ನಟಿಸುತ್ತಿದ್ದಾರೆ. ಆ ಪ್ರಯುಕ್ತ ಮೈಸೂರಿಗೆ ಬಂದಿದ್ದಾರೆ.

ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ಬಹುತಾರಾಗಣ ಇದೆ. ಪರಭಾಷೆಯ ಕಲಾವಿದರು ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸಂಜಯ್​ ದತ್​, ಶಿಲ್ಪಾ ಶೆಟ್ಟಿ, ರವಿಚಂದ್ರನ್​, ರಮೇಶ್​ ಅರವಿಂದ್​ ಅವರಂತಹ ಘಟಾನುಘಟಿ ಕಲಾವಿದರು ‘ಕೆಡಿ’ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ. ಆ ಕಾರಣದಿಂದ ಅಭಿಮಾನಿಗಳ ನಿರೀಕ್ಷೆ ಜಾಸ್ತಿ ಆಗಿದೆ. ಮೈಸೂರಿನಲ್ಲಿ ಶಿಲ್ಪಾ ಶೆಟ್ಟಿ ಅವರು ‘ಕೆಡಿ’ ಚಿತ್ರದ ಶೂಟಿಂಗ್​ನಲ್ಲಿ ಭಾಗಿ ಆಗಿದ್ದಾರೆ.

ಬಾಲಿವುಡ್​ನಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿರುವ ಶಿಲ್ಪಾ ಶೆಟ್ಟಿ ಅವರು ಕನ್ನಡದ ಸಿನಿಪ್ರಿಯರನ್ನು ಕೂಡ ರಂಜಿಸಿದ್ದಾರೆ. ಕನ್ನಡದ ‘ಪ್ರೀತ್ಸೋದ್​ ತಪ್ಪಾ?’, ‘ಒಂದಾಗೋಣ ಬಾ’, ‘ಆಟೋ ಶಂಕರ್​’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಹಲವು ವರ್ಷಗಳ ಬಳಿಕ ಅವರು ‘ಕೆಡಿ: ದಿ ಡೆವಿಲ್​’ ಸಿನಿಮಾದ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ಫಸ್ಟ್​ ಲುಕ್​ ಪೋಸ್ಟರ್​ ಗಮನ ಸೆಳೆದಿದೆ.

ಇದನ್ನೂ ಓದಿ: ‘ಕೆಡಿ’ ಸಿನಿಮಾ ಎಷ್ಟು ದಿನ ಓಡುತ್ತೆ? ತಮ್ಮದೇ ಲೆಕ್ಕಾಚಾರ ತಿಳಿಸಿದ ನಿರ್ದೇಶಕ ಪ್ರೇಮ್​

‘ಕೆಡಿ’ ಸಿನಿಮಾಗೆ ‘ಜೋಗಿ’ ಪ್ರೇಮ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಬಿಡುಗಡೆ ಬಗ್ಗೆ ಇತ್ತೀಚೆಗೆ ಮಾಹಿತಿ ಹೊರಬಿತ್ತು. ಇದೇ ವರ್ಷ ಡಿಸೆಂಬರ್​ನಲ್ಲಿ ‘ಕೆಡಿ’ ತೆರೆಕಾಣಲಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಅದಕ್ಕೂ ಮುನ್ನ ಭರ್ಜರಿಯಾಗಿ ಪ್ರಚಾರ ಮಾಡಲು ಪ್ಲ್ಯಾನ್​ ಮಾಡಿಕೊಳ್ಳಲಾಗಿದೆ. ಟೀಸರ್​ ಮತ್ತು ಹಾಡುಗಳ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ‘ಆನಂದ್​ ಆಡಿಯೋ’ ಕಂಪನಿಗೆ 17.70 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.