ಮಾರ್ಚ್ 17ರಂದು ಪುನೀತ್ ರಾಜ್ಕುಮಾರ್ (Puneeth Rajkumar) ಜನ್ಮದಿನ. ಅಂದು ಅವರು ನಾಯಕನಾಗಿ ಅಭಿನಯಿಸಿದ್ದ ‘ಜೇಮ್ಸ್’ ರಿಲೀಸ್ (James Release) ಆಗಲಿದೆ. ಚಿತ್ರವನ್ನು ಸಂಭ್ರಮಿಸಲು ಅಭಿಮಾನಿಗಳು ಭರ್ಜರಿ ತಯಾರಿ ನಡೆಸುತ್ತಿರುವಂತೆಯೇ ಹೊಸ ಸಮಾಚಾರ ಸಿಕ್ಕಿದೆ. ಇದನ್ನು ಕೇಳಿ ಫ್ಯಾನ್ಸ್ ಮತ್ತಷ್ಟು ಥ್ರಿಲ್ ಆಗಿದ್ದಾರೆ. ಶಿವರಾಜ್ಕುಮಾರ್ (Shiva Rajkumar) ಅಭಿನಯದ ‘ಬೈರಾಗಿ’ ಚಿತ್ರದ ಟೀಸರ್ಅನ್ನು (Bairagee Teaser) ಮಾರ್ಚ್ 17ರಂದು ರಿಲೀಸ್ ಮಾಡಲು ನಿರ್ಧರಿಸಲಾಗಿದೆ; ಅದೂ ಕೂಡ ಚಿತ್ರಮಂದಿರಗಳಲ್ಲಿ! ಹೌದು. ‘ಜೇಮ್ಸ್’ ಪ್ರದರ್ಶನದ ವೇಳೆ ‘ಬೈರಾಗಿ’ ಟೀಸರ್ ಕಾಣಿಸಿಕೊಳ್ಳಲಿದೆ. ಪುನೀತ್ ಜನ್ಮದಿನದ ಸಂಭ್ರಮಾಚರಣೆಗೆ ‘ಬೈರಾಗಿ’ ಕೂಡ ಸೇರಿಕೊಳ್ಳಲಿದೆ ಎಂದು ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ. ಈ ಮೂಲಕ ಫ್ಯಾನ್ಸ್ಗೆ ಮಾರ್ಚ್ 17ರಂದು ಡಬಲ್ ಧಮಾಕಾ ಸಿಗಲಿದೆ. ಈ ಕುರಿತು ನಿರ್ದೇಶಕ ವಿಜಯ್ ಮಿಲ್ಟನ್ ಟ್ವೀಟ್ ಮಾಡಿದ್ದು, ‘‘ಪವರ್ಸ್ಟಾರ್ ಹುಟ್ಟುಹಬ್ಬವನ್ನು ಆಚರಿಸಲು ಇಡೀ ಕರ್ನಾಟಕದೊಂದಿಗೆ ‘ಬೈರಾಗಿ’ ತಂಡ ಕೂಡ ಸೇರಿಕೊಳ್ಳಲಿದೆ. ಮಾರ್ಚ್ 17ರಿಂದ ಚಿತ್ರಮಂದಿರದಲ್ಲಿ ‘ಬೈರಾಗಿ’ ಟೀಸರ್ ಪ್ರದರ್ಶನವಾಗಲಿದೆ’’ ಎಂದು ಬರೆದಿದ್ದಾರೆ.
ಟೀಸರ್ ರಿಲೀಸ್ ಬಗ್ಗೆ ವಿಜಯ್ ಮಿಲ್ಟನ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:
#bairagee team is also joining with the whole karnataka celebrating #PowerStar #HappyBirthday teaser wil b on theatres from 17. @NimmaShivanna @Dhananjayaka @AmbarPruthvi @Krishnasarthaka @YashaShivakumar pic.twitter.com/OXqR4dAIPQ
— sd.vijay milton (@vijaymilton) March 13, 2022
‘ಬೈರಾಗಿ’ ಈಗಾಗಲೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಶಿವರಾಜ್ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಪೋಸ್ಟರ್ಗಳು ಈಗಾಗಲೇ ಕ್ರೇಜ್ ಹುಟ್ಟಿಸಿವೆ. ಕಲರ್ಫುಲ್ ಲುಕ್ ಮೂಲಕ ಶಿವಣ್ಣ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ. ತಮ್ಮ 123ನೇ ಚಿತ್ರದಲ್ಲಿ ಶಿವರಾಜ್ಕುಮಾರ್ ಹಲವು ಅವತಾರ ತಾಳಿದ್ದಾರೆ. ಈ ಹಿಂದೆ ಹುಲಿ ಮುಖವರ್ಣಿಕೆಯಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದ ಚಿತ್ರವೊಂದು ವೈರಲ್ ಆಗಿತ್ತು.
‘ಬೈರಾಗಿ’ ತಾರಾಗಣ ಕೂಡ ದೊಡ್ಡದಿದೆ. ‘ಟಗರು’ ಬಳಿಕ ಶಿವಣ್ಣ ಹಾಗೂ ಧನಂಜಯ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ದಿಯಾ’ ಮೂಲಕ ಕನ್ನಡಿಗರ ಮನೆಮಾತಾದ ‘ಪೃಥ್ವಿ ಅಂಬರ್’ ಈ ಚಿತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ. ನಾಯಕಿಯಾಗಿ ಅಂಜಲಿ ನಟಿಸುತ್ತಿದ್ದಾರೆ. ಹಿರಿಯ ನಟ ಶಶಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಕಾಲಿವುಡ್ನ ಜನಪ್ರಿಯ ನಿರ್ದೇಶಕ ವಿಜಯ್ ಮಿಲ್ಟನ್ ಆಕ್ಷನ್ ಕಟ್ ಹೇಳಿದ್ದು, ಛಾಯಾಗ್ರಹಣದ ಹೊಣೆಯನ್ನೂ ಹೊತ್ತಿದ್ದಾರೆ.
ಇಂದು ಪುನೀತ್ ಅಭಿಮಾನಿಗಳಿಗೆ ಹಲವು ವಿಶೇಷ ಸುದ್ದಿ:
ಇಂದು (ಮಾ.13) ಅಪ್ಪು ಅಭಿಮಾನಿಗಳಿಗೆ ವಿಶೇಷ ದಿನವೆಂದೇ ಹೇಳಬೇಕು. ಇದಕ್ಕೆ ಕಾರಣಗಳು ಹಲವು. ಮೈಸೂರು ವಿಶ್ವವಿದ್ಯಾನಿಲಯವು ಪುನೀತ್ಗೆ ಗೌರವ ಡಾಕ್ಟರೇಟ್ ಘೋಷಿಸಿದೆ. ಮಾರ್ಚ್ 22ರಂದು ರಾಜ್ಯಪಾಲರು ಪ್ರದಾನ ಮಾಡಲಿದ್ದು, ಅಶ್ವಿನಿ ಪುನೀತ್ ರಾಜ್ಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಂದೇ ‘ಜೇಮ್ಸ್ ಪ್ರಿ ರಿಲೀಸ್ ಈವೆಂಟ್’ ಕೂಡ ನಡೆಯಲಿದೆ. ಜತೆಗೆ ‘ಜೇಮ್ಸ್’ ರಿಲೀಸ್ ಸಿದ್ಧತೆಯಲ್ಲಿ ಅಭಿಮಾನಿಗಳಿದ್ದು, ಟಿಕೆಟ್ಗಳು ಖಾಲಿಯಾಗುತ್ತಿವೆ. ಈ ನಡುವೆ ‘ಬೈರಾಗಿ’ ಟೀಸರ್ ರಿಲೀಸ್ ಬಗ್ಗೆ ಮಾಹಿತಿ ಬಂದಿದ್ದು, ಎಲ್ಲರೂ ಮತ್ತಷ್ಟು ಖುಷಿಪಟ್ಟಿದ್ದಾರೆ.
ಇದನ್ನೂ ಓದಿ:
Puneeth Rajkumar: ಡಾ.ರಾಜ್ ಹಾದಿಯಲ್ಲಿ ಅಪ್ಪು; ಮೈಸೂರು ವಿವಿಯಿಂದ ಪುನೀತ್ಗೆ ಮರಣೋತ್ತರ ಗೌರವ ಡಾಕ್ಟರೇಟ್ ಘೋಷಣೆ
‘ಜೇಮ್ಸ್’ ಮಾತ್ರವಲ್ಲ; ಮಾ.17ಕ್ಕೆ ಸಿಗಲಿದೆ ಇನ್ನೊಂದು ಸರ್ಪ್ರೈಸ್: ಇಲ್ಲಿದೆ ಗುಡ್ ನ್ಯೂಸ್