ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ, ವ್ಯಕ್ತಿತ್ವ ಹಾಗೂ ಹೋರಾಟಗಳಿಂದ ಭಿನ್ನವಾದ ವರ್ಚಸ್ಸನ್ನು ಹೊಂದಿರುವವರು ನಟ ಶಿವರಾಜ್ಕುಮಾರ್. ಇಂದು ಅವರು 59ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಡಾ.ರಾಜ್ಕುಮಾರ್ ಕುಟುಂಬದ ಕುಡಿಯಾಗಿ ಜವಾಬ್ದಾರಿಗಳನ್ನೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿರುವ ಶಿವರಾಜ್ಕುಮಾರ್ ಬಾಲ್ಯ, ಚಿತ್ರಂಗದ ಆರಂಭಿದ ಯಶಸ್ವೀ ದಿನಗಳು, ನಂತರದ ಸೋಲು, ಮತ್ತೆ ಮೇಲೆದ್ದು ಬಂದ ಪರಿ, ಈಗಿನ ಅವರ ಚಿತ್ರಗಳ ಗೆಲುವಿನ ಕತೆ ಮೊದಲಾದ ವಿಶೇಷ ಸಂಗತಿಗಳ ಮೆಲುಕು ನೋಟ ಇಲ್ಲಿದೆ.
ಜನನ ಮತ್ತು ವಿದ್ಯಾಭ್ಯಾಸ: ಶಿವರಾಜ್ಕುಮಾರ್ ಅವರು 1962ರ ಜುಲೈ 12ರಂದು ಡಾ.ರಾಜ್ಕುಮಾರ್ ಹಾಗೂ ಪಾರ್ವತಮ್ಮ ಅವರ ಮೊದಲ ಪುತ್ರನಾಗಿ ಮದ್ರಾಸ್ನಲ್ಲಿ ಜನಿಸಿದರು. ರಾಜ್ಕುಮಾರ್ ಅವರು ತಮ್ಮ ತಂದೆ ಪುಟ್ಟಸ್ವಾಮಿಯವರ ನೆನಪಿಗಾಗಿ ಶಿವರಾಜ್ ಕುಮಾರ್ ಅವರಿಗೆ ಮೊದಲು ‘ನಾಗರಾಜು ಶಿವ ಪುಟ್ಟಸ್ವಾಮಿ’ ಎಂದು ಹೆಸರಿಟ್ಟಿದ್ದರು.ಶಿವರಾಜ್ಕುಮಾರ್ ಬಾಲ್ಯವನ್ನು ತಮಿಳುನಾಡಿನ ಚೆನ್ನೈನಲ್ಲೇ ಕಳೆದರು. ಅಲ್ಲಿನ ನ್ಯೂ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ನಡೆಸಿದರು. ಇಬ್ಬರು ತಮ್ಮ(ರಾಘವೇಂದ್ರ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್) ಹಾಗೂ ಇಬ್ಬರು ತಂಗಿಯರಿಗೆ ಪ್ರೀತಿಯ ಅಣ್ಣನಾಗಿದ್ದಾರೆ ಶಿವರಾಜ್ಕುಮಾರ್.
ಚಿತ್ರರಂಗ ಪ್ರವೇಶ: ಚೆನ್ನೈನಲ್ಲಿರುವಾಗಲೇ ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಅವರ ಮಾರ್ಗದರ್ಶನದಂತೆ ತಮ್ಮ ಪದವಿ ವಿದ್ಯಾಭ್ಯಾಸದ ನಂತರ ಶಿವರಾಜ್ಕುಮಾರ್ ಅಭಿನಯದ ತರಗತಿಗೆ ಸೇರಿಕೊಂಡರು. ಕೂಚಿಪುಡಿ ನೃತ್ಯದಲ್ಲಿಯೂ ಪರಿಣತಿಯನ್ನು ಗಳಿಸಿದರು. ನಂತರ ತಮ್ಮ ಮೊದಲ ಚಿತ್ರ ‘ಆನಂದ್’ ಮೂಲಕ 1986ರಲ್ಲಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ನಂತರ ರಥಸಪ್ತಮಿ ಹಾಗೂ ಮನಮೆಚ್ಚಿದ ಹುಡುಗಿ ಚಿತ್ರದಲ್ಲಿ ಅಭಿನಯಿಸಿದರು. ಈ ಮೂರೂ ಚಿತ್ರಗಳೂ ಶತದಿನೋತ್ಸವ ಪೂರೈಸುವುದರೊಂದಿಗೆ ಹ್ಯಾಟ್ರಿಕ್ ಹೀರೋ ಎಂದು ಅಭಿಮಾನಿಗಳಿಂದ ಬಿರುದಾಂಕಿತರಾದರು.
ಕಮರ್ಷಿಯಲ್ ಚಿತ್ರಗಳಲ್ಲಿ ನಡೆಸಿದ ಪ್ರಯೋಗಗಳು: ಶಿವರಾಜ್ಕುಮಾರ್ ಉಳಿದೆಲ್ಲಾ ಸ್ಟಾರ್ ನಟರಗಳಿಗಿಂತ ಭಿನ್ನವಾಗಿ ನಿಲ್ಲುವುದು ಅವರ ಕಮರ್ಷಿಯಲ್ ಚಿತ್ರಗಳೂ ಪ್ರಯೋಗಶೀಲವಾಗಿರುತ್ತವೆ ಎಂಬುದರಿಂದ. ‘ಓಂ’, ‘ಭೂಮಿ ತಾಯಿಯ ಚೊಚ್ಚಲಮಗ’, ‘ನಮ್ಮೂರ ಮಂದಾರ ಹೂವೆ’, ‘ಚಿಗುರಿದ ಕನಸು’ ಈ ಚಿತ್ರಗಳೆಲ್ಲವೂ ವಿಭಿನ್ನ ಕಥಾ ವಸ್ತುಗಳಿಂದ ಗಮನ ಸೆಳೆಯುತ್ತವೆ. ಕಮರ್ಷಿಯಲ್ ಚಿತ್ರಗಳಲ್ಲೇ ಶಿವರಾಜ್ಕುಮಾರ್ ಪ್ರಯೋಗಗಳನ್ನು ಗಮನಿಸಬೇಕಾದರೆ, ‘ಸುಗ್ರೀವ’, ‘ಜೋಗಿ’, ‘ಚೆಲುವೆಯೇ ನಿನ್ನ ನೋಡಲು’, ‘ಸಂತೆಯಲ್ಲಿ ನಿಂತ ಕಬೀರ’ ಮೊದಲಾದ ಚಿತ್ರಗಳನ್ನು ಗಮನಿಸಬೇಕು.
‘ಸುಗ್ರೀವ’ ಚಿತ್ರವು ಕೇವಲ ಹದಿನೆಂಟು ಗಂಟೆಯಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದ ಚಿತ್ರ. ‘ಜೋಗಿ’ ಚಿತ್ರವು ತಾಯಿ ಮಗನ ಬಾಂಧವ್ಯವನ್ನು ಸಾರುವ ಅಪ್ಪಟ ಕನ್ನಡ ಮಣ್ಣಿನ ಚಿತ್ರ. ಚೆಲುವೆಯೇ ನಿನ್ನ ನೋಡಲು ಚಿತ್ರವನ್ನು ವಿಶ್ವದ ಏಳು ಅದ್ಭುತಗಳಿರುವ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ. ಸಂತೆಯಲ್ಲಿ ನಿಂತ ಕಬೀರ ಚಿತ್ರವು ಕಬೀರನ ಜೀವನ ಕತೆ. ಅದರಲ್ಲಿ ಶಿವರಾಜ್ ಕುಮಾರ್ ಅಭಿನಯ ಮನೋಜ್ಞವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ಭಜರಂಗಿ, ಟಗರು, ಕಡ್ಡಿಪುಡಿ, ಕವಚ, ಮಫ್ತಿ, ಶಿವಲಿಂಗ, ಕಿಲ್ಲಿಂಗ್ ವೀರಪ್ಪನ್ ಮೊದಲಾದ ಚಿತ್ರಗಳನ್ನು ಗಮನಿಸಿದರೂ ಒಂದಕ್ಕಿಂತ ಒಂದರಲ್ಲಿ ಭಿನ್ನವಾಗಿ ಶಿವರಾಜ್ ಕುಮಾರ್ ಪಾತ್ರ ಪೋಷಣೆಯಿದೆ. ಅರವತ್ತು ಸಮೀಪಿಸುತ್ತಿದ್ದರೂ ಕತೆಗಳ ಆಯ್ಕೆಯಲ್ಲಿ ಹಾಗೂ ಸ್ಟಾರ್ ಆಗಿದ್ದರೂ ಹೊಸ ಪಾತ್ರಗಳನ್ನು ಸ್ವೀಕರಿಸುವಲ್ಲಿ ಶಿವರಾಜ್ಕುಮಾರ್ ಉಳಿದೆಲ್ಲಾ ನಟರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಅವರ ಈ ಪ್ರಯೋಗಶೀಲತೆಯೇ ಅವರನ್ನು ಇಂದಿಗೂ ಅತ್ಯಂತ ಬೇಡಿಕೆಯುಳ್ಳ ನಟನಾಗಿ ಉಳಿಸಿದೆ ಮತ್ತು ಸೋಲುಗಳನ್ನು ಹಿಮ್ಮೆಟ್ಟಿಸಲು ಸಹಕಾರಿಯಾಗಿದೆ.
ಡಬ್ಬಿಂಗ್ ಪರ ಹೋರಾಟ: ಶಿವರಾಜ್ಕುಮಾರ್ ಮೊದಲಿನಿಂದಲೂ ಡಬ್ಬಿಂಗ್ ಚಿತ್ರಗಳ ವಿರೋಧವಾಗಿದ್ದರು. ಕನ್ನಡದಲ್ಲಿ ಅಂತಲ್ಲ, ಭಾರತದಲ್ಲಿ ಅದರ ಅವಶ್ಯಕತೆ ಏನಿದೆ ಎಂಬುದು ಅವರ ಪ್ರಶ್ನೆಯಾಗಿತ್ತು. ಈ ಕುರಿತು ಹೋರಾಟಗಳೂ ನಡೆದಿದ್ದವು. ಆದರೆ ಸುಪ್ರೀಂ ಕೋರ್ಟ್ ಡಬ್ಬಿಂಗ್ಗೆ ಹಸಿರು ನಿಶಾನೆ ತೋರಿದಲ್ಲಿಂದ ಶಿವರಾಜ್ಕುಮಾರ್ ಡಬ್ಬಿಂಗ್ ಹೋರಾಟದಿಂದ ಹಿಂದೆ ಸರಿದರು. ಜನರಿಗೆ ಅದೇ ಬೇಕು ಎನ್ನುವುದಾದರೆ ಅದು ದೊರೆಯಲಿ, ನನ್ನ ಅಭ್ಯಂತರ ಏನಿಲ್ಲ ಎಂದು ಅವರು ಸುಮ್ಮನಾದರು. ಇಲ್ಲಿಯೂ ಶಿವರಾಜ್ಕುಮಾರ್ ಅವರ ನಿಲುವು ಎಲ್ಲರಿಗೂ ಪ್ರಿಯವಾಯಿತು.
ಪ್ರಶಸ್ತಿಗಳು: ಓಂ, ಹೃದಯಾ ಹೃದಯಾ, ಚಿಗುರಿದ ಕನಸು, ಜೋಗಿ ಚಿತ್ರಗಳಲ್ಲಿನ ನಟನೆಗಾಗಿ ಶಿವರಾಜ್ಕುಮಾರ್ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ. ಇದಲ್ಲದೇ ನಾಲ್ಕು ಫಿಲ್ಮ್ ಫೇರ್ ಪ್ರಶಸ್ತಿಗಳು ಹಾಗೂ ಮೂರು ದಕ್ಷಿಣ ಭಾರತ ಮಟ್ಟದ ಪ್ರಶಸ್ತಿಗಳು ಅವರಿಗೆ ಲಭಿಸಿದೆ. ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿದೆ.
ಕುಟುಂಬ: ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ಕುಮಾರ್. ದಂಪತಿಗೆ ನಿವೇದಿತಾ ಹಾಗೂ ನಿರುಪಮಾ ಎಂಬ ಈರ್ವರು ಮಕ್ಕಳಿದ್ದಾರೆ.
ಮುಂದಿನ ಚಿತ್ರಗಳು: ಶಿವರಾಜ್ಕುಮಾರ್ ಅವರ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ. ಭಜರಂಗಿ 2, ವೇದ, ಇನ್ನೂ ಹೆಸರಿಡದ ವಿಜಯ್ ಮಿಲ್ಟನ್ ನಿರ್ದೇಶನದ ಅವರ 123ನೆಯ ಚಿತ್ರಗಳಲ್ಲದೇ, ರಿಷಬ್ ಶೆಟ್ಟಿಯವರೊಂದಿಗೆ ಹೊಸ ಚಿತ್ರಕ್ಕೆ ಶಿವರಾಜ್ಕುಮಾರ್ ಕೈಜೋಡಿಸಲಿದ್ದಾರೆ. ಅದು ಶಿವರಾಜ್ಕುಮಾರ್ ಅವರ 126ನೇ ಚಿತ್ರವಾಗಲಿದೆ. ಹೀಗೆ ತಮ್ಮ 59ರ ವಯಸ್ಸಿನಲ್ಲೂ ಸತತವಾಗಿ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದಾರೆ ಅಭಿಮಾನಿಗಳ ನೆಚ್ಚಿನ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್.
ಇದನ್ನೂ ಓದಿ: Kannada Movies: ಯೂಟ್ಯೂಬ್ನಲ್ಲಿ ಉಚಿತವಾಗಿ ವೀಕ್ಷಿಸಬಹುದಾದ ಕನ್ನಡದ ಅತ್ಯುತ್ತಮ ಸಿನಿಮಾಗಳ ಪಟ್ಟಿ ಬೇಕೆ?
(Biography, careers, movies, wiki and other details of Dr.Shivaraj Kumar)
Published On - 7:16 am, Mon, 12 July 21