‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ (Shivarajkumar) ಅವರ ಜನ್ಮದಿನದ ಪ್ರಯುಕ್ತ ಒಂದಷ್ಟು ಹೊಸ ಸುದ್ದಿಗಳು ಹೊರಬಂದಿವೆ. ಅದರಲ್ಲೂ ಅವರ ಹೊಸ ಚಿತ್ರದ ಬಗ್ಗೆ ಸಿಕ್ಕಿರುವ ಅಪ್ಡೇಟ್ ಕೇಳಿ ಫ್ಯಾನ್ಸ್ ಖುಷಿ ಆಗಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಅವರು ಶಿವರಾಜ್ಕುಮಾರ್ ಜೊತೆ ಸಿನಿಮಾ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಡೈರೆಕ್ಟರ್ ಕ್ಯಾಪ್ ಧರಿಸುತ್ತಿರುವುದು ವಿಶೇಷ. ಈ ಚಿತ್ರಕ್ಕೆ ಈಗ ಟೈಟಲ್ ಅನೌನ್ಸ್ ಆಗಿದೆ. ‘45’ ಎಂದು ಇದಕ್ಕೆ ಶೀರ್ಷಿಕೆ ಇಡಲಾಗಿದೆ. ಆ ಮೂಲಕ ಕುತೂಹಲ ಮೂಡಿಸಲಾಗಿದೆ. ಕನ್ನಡದಲ್ಲಿ ಶಿವರಾಜ್ಕುಮಾರ್ ಅವರೇ ಟೈಟಲ್ ಲಾಂಚ್ ಮಾಡಿದ್ದಾರೆ. ಇನ್ನಿತರ ಭಾಷೆಯಲ್ಲಿ ಅಲ್ಲಿನ ಸ್ಟಾರ್ ಸೆಲೆಬ್ರಿಟಿಗಳು ಶೀರ್ಷಿಕೆ ಅನಾವರಣ ಮಾಡಿದ್ದಾರೆ. ಏನಿದು ‘45’ (45 Movie) ಅಂತ ಅಭಿಮಾನಿಗಳು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.
ಈವರೆಗೂ ಸಂಗೀತ ನಿರ್ದೇಶನದ ಮೂಲಕ ಗಮನ ಸೆಳೆದ ಅರ್ಜುನ್ ಜನ್ಯ ಅವರು ಶಿವರಾಜ್ಕುಮಾರ್ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಾರೆ ಎಂಬ ಸುದ್ದಿ ಹೊರಬಿದ್ದಾಗಲೇ ಅಭಿಮಾನಿಗಳಿಗೆ ಅಚ್ಚರಿ ಮೂಡಿತು. ಈಗ ಟೈಟಲ್ ಕೇಳಿ ಫ್ಯಾನ್ಸ್ ಕಾತರ ಹೆಚ್ಚಿದೆ. ಚೊಚ್ಚಲ ಡೈರೆಕ್ಷನ್ ಪ್ರಾಜೆಕ್ಟ್ನಲ್ಲಿ ಅರ್ಜುನ್ ಜನ್ಯ ಅವರು ಯಾವ ರೀತಿಯ ಕಥೆ ಹೇಳಲಿದ್ದಾರೆ ಎಂಬ ಕೌತುಕ ಮನೆ ಮಾಡಿದೆ.
ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರಲಿದೆ. ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ, ತಮಿಳಿನಲ್ಲಿ ಶಿವ ಕಾರ್ತಿಕೇಯನ್, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರ್ ಅವರು ‘45’ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ. ಅವರೆಲ್ಲರಿಗೂ ಸೋಶಿಯಲ್ ಮೀಡಿಯಾ ಮೂಲಕ ಶಿವರಾಜ್ಕುಮಾರ್ ಧನ್ಯವಾದ ತಿಳಿಸಿದ್ದಾರೆ.
‘45’ ಸಿನಿಮಾಗೆ ನಿರ್ಮಾಪಕ ಎಂ. ರಮೇಶ್ ರೆಡ್ಡಿ ಅವರು ಬಂಡವಾಳ ಹೂಡುತ್ತಿದ್ದಾರೆ. ‘ಗಾಳಿಪಟ 2’, ‘100’, ‘ನಾತಿಚರಾಮಿ’ ಮುಂತಾದ ಸಿನಿಮಾಗಳನ್ನು ನಿರ್ಮಿಸಿರುವ ಅವರು ಈಗ ಈ ಹೊಸ ಪ್ರಾಜೆಕ್ಟ್ ಆರಂಭಿಸಿದ್ದಾರೆ. ಚಿತ್ರದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಇಂದು (ಜುಲೈ 12) ಶಿವರಾಜ್ಕುಮಾರ್ ಅವರು 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ‘45’ ಟೈಟಲ್ ಪೋಸ್ಟರ್ ಮೂಲಕ ಅವರಿಗೆ ಶುಭ ಕೋರಲಾಗುತ್ತಿದೆ.
Published On - 9:32 am, Tue, 12 July 22